ಸಾರಾಂಶ
ಕನ್ನಡಪ್ರಭ ವಾರ್ತೆ ಹಿರೇಕೆರೂರು
ಗ್ರಾಮಗಳ ಅಭಿವೃದ್ಧಿಯಲ್ಲಿ ಧರ್ಮಸ್ಥಳದ ಕೊಡುಗೆ ಅಪಾರವಾಗಿದೆ. ಮಾನವ ಸಂಪನ್ಮೂಲ ಬಳಕೆಯಲ್ಲಿ ಧರ್ಮಸ್ಥಳ ಸಂಸ್ಥೆಯ ಮಾದರಿಯಾಗಿದೆ ಎಂದು ತಹಸೀಲ್ದಾರ ಎಚ್. ಪ್ರಭಾಕರ ಗೌಡ ಹೇಳಿದರು.ತಾಲೂಕಿನ ಚೆನ್ನಳ್ಳಿ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯಡಿ ಹೂಳೆತ್ತಲಾದ ಗ್ರಾಮದ ಕೆರೆಯ ಹಸ್ತಾಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಚೆನ್ನಳ್ಳಿ ಕೆರೆ ಹೂಳೆತ್ತುವ ಕಾಮಗಾರಿ ಅದ್ಭುತವಾಗಿ ನಡೆಸಲಾಗಿದೆ. ಧರ್ಮಸ್ಥಳ ಸಂಸ್ಥೆಯ ಜೊತೆಗೆ ಊರಿನ ಜನತೆಯು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾಮಗಾರಿ ಯಶಸ್ವಿಗೊಳಿಸಿರುವುದು ಸಂತಸದ ವಿಷಯ ಎಂದರು.ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ತಿಪ್ಪಾಯಿಕೊಪ್ಪದ ಗುರು ಮೂಕಪ್ಪ ಶಿವಯೋಗಿಗಳ ಮಠದ ಮಹಾಂತ ಮಹಾಸ್ವಾಮಿಗಳು ಮಾತನಾಡಿ, ಅಭಿವೃದ್ಧಿ ಮತ್ತು ನಾಗರಿಕತೆ ಹೆಸರಿನಲ್ಲಿ ಪರಿಸರದ ಮೇಲೆ ನಿರಂತರ ದಬ್ಬಾಳಿಕೆ ಮಾಡಲಾಗುತ್ತಿದೆ. ಪರಿಸರ ಉಳಿಸುವ ನಿಟ್ಟಿನಲ್ಲಿ ನಮ್ಮ ಪೂರ್ವಜರು ದೇವರ ಹೆಸರಿನಲ್ಲಿ ನೀರು, ಮರಗಿಡಗಳಿಗೂ ಪೂಜೆ ಮಾಡುವ ಸಂಪ್ರದಾಯ ಹೇಳಿ ಕೊಟ್ಟಿದ್ದರು. ಈ ನಿಟ್ಟಿನಲ್ಲಿ ಆಧುನಿಕ ಯುಗದಲ್ಲಿ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಹೇಮಾವತಿ ಅಮ್ಮನವರ ಸಮಾಜಮುಖಿ ಚಿಂತನೆ ಅನುಕರಣೀಯ ಎಂದರು.
ಗ್ರಾಮಸ್ಥರು ಮತ್ತು ಗ್ರಾಮ ಪಂಚಾಯಿತಿ ಸೇರಿ ಕೆರೆಯ ಕಲ್ಲು ಪಿಚಿಂಗ್ ಮುಂತಾದ ಅಭಿವೃದ್ಧಿ ಕಾರ್ಯಗಳಿಗೆ ಶ್ರಮವಹಿಸಿ ಚೆನ್ನಳ್ಳಿ ಕೆರೆ ಚೆಂದದ ಕೆರೆಯಾಗಿ ರೂಪುಗೊಳ್ಳುವಂತಾಗಲಿ ಎಂದು ಶುಭ ಹಾರೈಸಿದರು.ಧಾರವಾಡ ಪ್ರಾದೇಶಿಕ ನಿರ್ದೇಶಕ ವಸಂತ ಸಾಲ್ಯಾನ ಮಾತನಾಡಿ, ರಾಜ್ಯದ ೬೧೭ನೇ ಕೆರೆ ಇಂದು ಲೋಕಾರ್ಪಣೆಯಾಗಿದೆ. ವಿವಿಧ ಸಮಾಜಮುಖಿ ಕಾರ್ಯಕ್ರಮಗಳ ಜೊತೆ ಪೂಜ್ಯರು ಮತ್ತು ಮಾತೃಶ್ರೀರವರ ಮಾರ್ಗದರ್ಶನದಲ್ಲಿ ಕೆರೆ ಹೂಳೆತ್ತುವ ಕಾರ್ಯಕ್ರಮಗಳನ್ನು ಗ್ರಾಮಸ್ಥರ ಸಹಯೋಗದಲ್ಲಿ ಯಶಸ್ವಿಯಾಗಿ ನಡೆಸಲಾಗುತ್ತಿದೆ. ತಾವೆಲ್ಲರೂ ಕೆರೆ ಅಭಿವೃದ್ಧಿಯ ಜೊತೆಗೆ ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸಬೇಕು ಎಂದು ಕಿವಿಮಾತು ತಿಳಿಸಿದರು.
ಚೆನ್ನಳ್ಳಿ ಗ್ರಾಪಂ ಅಧ್ಯಕ್ಷೆ ಕುಸುಮಾ ಮಾಗನೂರು ಅಧ್ಯಕ್ಷತೆ ವಹಿಸಿದ್ದರು. ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮೋಹನ ನಿಂಗಜ್ಜೆರ, ದೇವರಾಜ ಹಂಚಿನಮನಿ, ಹನುಮಂತಪ್ಪ ಮೇಗಳಮನಿ, ಲಲಿತಾ ಮಠದ ಉಪಸ್ಥಿತರಿದ್ದರು.ಹಾವೇರಿ ಜಿಲ್ಲಾ ನಿರ್ದೇಶಕ ನಾಗರಾಜ್ ಶೆಟ್ಟಿ ಪ್ರಾಸ್ತವಿಕವಾಗಿ ಮಾತನಾಡಿದರು. ಹಿರೇಕೆರೂರು ಯೋಜನಾಧಿಕಾರಿ ಮಂಜುನಾಥ. ಎಂ. ಸ್ವಾಗತಿಸಿದರು. ಕೃಷಿ ಅಧಿಕಾರಿ ಧರ್ಮಪ್ಪ ಜೋಗೇರ ವಂದಿಸಿದರು. ಮೇಲ್ವಿಚಾರಕ ಕಿರಣ್ ಮತ್ತು ಸೇವಾ ಪ್ರತಿನಿಧಿ ದಾಕ್ಷಿಯಿಣಿ ಕಾರ್ಯಕ್ರಮ ನಿರೂಪಿಸಿದರು.೧೮ ಎಚ್‌ಕೆಆರ್ ೦೧
ಹಿರೇಕೆರೂರ ತಾಲೂಕಿನ ಚೆನ್ನಳ್ಳಿ ಗ್ರಾಮದಲ್ಲಿ ಧರ್ಮಸ್ಥಳದ ಅನುದಾನದಲ್ಲಿ ಹೂಳೆತ್ತಲಾದ ಗ್ರಾಮದ ಕೆರೆಯ ಹಸ್ತಾಂತರ ಕಾರ್ಯಕ್ರಮವನ್ನು ತಹಸೀಲ್ದಾರ ಎಚ್. ಪ್ರಭಾಕರಗೌಡ ಉದ್ಘಾಟಿಸಿದರು.