ನಾಡಿನಾದ್ಯಂತ ೭೩೪ ಸ್ಮಶಾನಗಳಿಗೆ ಧರ್ಮಸ್ಥಳ ಯೋಜನೆ ನೆರವು: ವಿಶ್ವನಾಥ ಶೆಟ್ಟಿ

| Published : Apr 10 2025, 01:16 AM IST

ಸಾರಾಂಶ

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ದುರ್ಗಾಗಿರಿ ಸ್ಮಶಾನಕ್ಕೆ ಒದಗಿಸಲಾದ ೨.೫ ಲಕ್ಷ ರು. ಅನುದಾನದಲ್ಲಿ ೧.೫೧ ಲಕ್ಷ ರೂ ವೆಚ್ಚದ ಸಿಲಿಕಾನ್ ಚೇಂಬರ್ ಮತ್ತು ಮಿಕ್ಕಿ ಉಳಿದ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ಧನ ಸಹಾಯ ರೂಪದಲ್ಲಿ ಮಂಗಳವಾರ ಸ್ಮಶಾನ ಸಮಿತಿ ಪ್ರಮುಖರು ಸ್ವೀಕರಿಸಿದರು.

ಕನ್ನಡಪ್ರಭ ವಾರ್ತೆ ಉಪ್ಪಿನಂಗಡಿ

ಒಂದು ಧಾರ್ಮಿಕ ಕ್ಷೇತ್ರ ಯಾವ ರೀತಿ ಸಮಾಜಕ್ಕೆ ಸಂಪತ್ತಾಗಿ ಕಾರ್ಯನಿರ್ವಹಿಸಬಹುದು ಎನ್ನುವುದಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರ ಗ್ರಾಮಾಭಿವೃದ್ಧಿ ಯೋಜನೆಯ ಪರಿಕಲ್ಪನೆಯೇ ಸಾಕ್ಷಿಯಾಗಿದೆ. ನಾಡಿನಾದ್ಯಂತ ೭೩೪ ಸ್ಮಶಾನಗಳಿಗೆ ಸಿಲಿಕಾನ್ ಚೇಂಬರ್ ನೀಡುವ ಕನಿಷ್ಠ ಕಟ್ಟಿಗೆಯಲ್ಲಿ ಸುವ್ಯವಸ್ಥಿತ ಅಂತ್ಯಸಂಸ್ಕಾರ ನಡೆಸಲು ಸಹಕಾರಿಯಾಗಿದ್ದಾರೆ ಎಂದು ಉಪ್ಪಿನಂಗಡಿ ದುರ್ಗಾಗಿರಿಯಲ್ಲಿನ ಹರಿಶ್ಚಂದ್ರ ಘಾಟ್ ಸ್ಮಶಾನ ಸಮಿತಿ ಅಧ್ಯಕ್ಷ ಕಂಗ್ವೆ ವಿಶ್ವನಾಥ ಶೆಟ್ಟಿ ಶ್ಲಾಘಿಸಿದ್ದಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ದುರ್ಗಾಗಿರಿ ಸ್ಮಶಾನಕ್ಕೆ ಒದಗಿಸಲಾದ ೨.೫ ಲಕ್ಷ ರು. ಅನುದಾನದಲ್ಲಿ ೧.೫೧ ಲಕ್ಷ ರೂ ವೆಚ್ಚದ ಸಿಲಿಕಾನ್ ಚೇಂಬರ್ ಮತ್ತು ಮಿಕ್ಕಿ ಉಳಿದ ಹಣವನ್ನು ಅಭಿವೃದ್ಧಿ ಕಾರ್ಯಗಳಿಗೆ ಧನ ಸಹಾಯ ರೂಪದಲ್ಲಿ ಮಂಗಳವಾರ ಸ್ವೀಕರಿಸಿ ಅವರು ಮಾತನಾಡಿದರು.

ಸ್ಮಶಾನ ಪ್ರಾರಂಭವಾದಾಗಲೂ ಶ್ರೀ ಕ್ಷೇತ್ರದಿಂದ ಒಂದು ಸಿಲಿಕಾನ್ ಚೇಂಬರ್ ನೀಡಲಾಗಿತ್ತು. ಇದೀಗ ಹೆಚ್ಚುವರಿಯಾಗಿ ಎರಡನೇ ಸಿಲಿಕಾನ್ ಚೇಂಬರ್ ಒದಗಿಸುವ ಮೂಲಕ ಈ ಭಾಗದ ಜನತೆಯ ಆಶೋತ್ತರಗಳಿಗೆ ಸ್ಪಂದನ ನೀಡಿದ್ದಾರೆ. ತನ್ಮೂಲಕ ಸರ್ಕಾರದಿಂದಲೂ ಮಾಡಲಾಗದ ಕಾರ್ಯವನ್ನು ಧಾರ್ಮಿಕ ಕ್ಷೇತ್ರವೊಂದು ವ್ಯವಸ್ಥಿತವಾಗಿ ಮಾಡುತ್ತಾ ಸಮಾಜೋದ್ಧಾರ ಕಾರ್ಯ ಮಾಡುತ್ತಿರುವುದು ಶ್ಲಾಘನೀಯವೆಂದರು.

ಶ್ರೀ ಕ್ಷೇತ್ರದ ಮಂಜೂರಾತಿ ಪತ್ರವನ್ನು ಹಸ್ತಾಂತರಿಸಿದ ಪುತ್ತೂರು ತಾಲೂಕು ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಶಶಿಧರ್ ಎಂ ಮಾತನಾಡಿ, ಕ್ಷೇತ್ರದ ಹಲವಾರು ಜನೋಪಯೋಗಿ ಕಾರ್ಯಗಳು ಸದ್ದಿಲ್ಲದೆ ನಡೆಯುತ್ತಿದ್ದು, ನಾಡಿನೆಲ್ಲೆಡೆ ರುದ್ರಭೂಮಿಯ ಅಭಿವೃದ್ಧಿಗೆ ಶ್ರೀ ಕ್ಷೇತ್ರ ಸಹಕಾರ ನೀಡುತ್ತಿದೆ ಎಂದರು.

ಸ್ಮಶಾನ ಸಮಿತಿ ಪ್ರಮುಖರಾದ ಲೋಕೇಶ್ ಬೆತ್ತೋಡಿ, ಶ್ರೀರಾಮ ಭಟ್ ಪಾತಾಳ, ವೆಂಕಟರಮಣ ಭಟ್ ಮಣ್ಣಿಕಾನ, ಜನಾರ್ದನ ಮರಿಕೆ, ರಾಜೀವ ಹೆಗ್ಡೆ ನಿನ್ನಿಕ್ಕಲು, ಕೇಶವ ರಂಗಾಜೆ, ಮಾಲತಿ ಬೆತ್ತೋಡಿ, ರಮೇಶ್ ಭಂಡಾರಿ, ಹೊನ್ನಪ್ಪ ಘೌಡ ವರೆಕ್ಕಾ, ವಿಶ್ವನಾಥ್ ನಾಯ್ಕ್, ಅನುರಾಧಾ ವರೆಕ್ಕಾ, ಪುಷ್ಪ ವರೆಕ್ಕಾ, ರತ್ನಾ ಬೆತ್ತೋಡಿ, ಗೋಪಾಲಕೃಷ್ಣ ಪಲ್ಲದಕೋಡಿ, ಮನೋಜ್ ವರೆಕ್ಕಾ, ಶ್ರೀ ಕ್ಷೇತ್ರ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ಪ್ರತಿನಿಧಿ ಉಷಾ ಹರೀಶ್ ಮೊದಲಾದವರು ಉಪಸ್ಥಿತರಿದ್ದರು.