ಸಾರಾಂಶ
ಬೆಳ್ತಂಗಡಿ : ಧರ್ಮಸ್ಥಳ ಗ್ರಾಮದಲ್ಲಿ ಅನಾಮಿಕ ಸಾಕ್ಷಿದಾರ ಗುರುತಿಸಿರುವ 13ನೇ ಪಾಯಿಂಟ್‌ನಲ್ಲಿ ಸೋಮವಾರ ದೆಹಲಿಯಿಂದ ಆಗಮಿಸಿದ ಡ್ರೋನ್ ಮೌಂಟೆಡ್ ಜಿಪಿಆರ್ (ಗ್ರೌಂಡ್ ಪೆನೆಟ್ರೇಟೆಡ್ ರಾಡಾರ್) ಮೂಲಕ ಪ್ರಾಯೋಗಿಕ ಕಾರ್ಯಾಚರಣೆ ನಡೆಸಲಾಯಿತು. ಕ್ಲಿಷ್ಟಕರವಾದ 13ನೇ ಸ್ಥಳದಲ್ಲಿ ಶೋಧ ಕಾರ್ಯಾಚರಣೆ ಕಳೆದ ಕೆಲವು ದಿನಗಳಿಂದ ಮುಂದೂಡಲ್ಪಡುತ್ತಿದ್ದು, ಮಂಗಳವಾರ ಅಧಿಕೃತವಾಗಿ ಆರಂಭಗೊಳ್ಳುವ ನಿರೀಕ್ಷೆ ಇದೆ.
ನೇತ್ರಾವತಿ-ಅಜೆಕುರಿ ರಸ್ತೆಯಲ್ಲಿ ನೇತ್ರಾವತಿ ನದಿ ಪಕ್ಕದ ಕಿಂಡಿ ಅಣೆಕಟ್ಟಿನ ಸಮೀಪದ 13ನೇ ಪಾಯಿಂಟ್‌ನಲ್ಲಿ ಸೋಮವಾರ ಮಧ್ಯಾಹ್ನ 3 ರಿಂದ 3.30ರ ವರೆಗೆ ಜಿಪಿಆರ್ ಹಾರಾಟ ನಡೆಸಿ, ಪ್ರಾಯೋಗಿಕ ಕಾರ್ಯಾಚರಣೆ ನಡೆಸಿತು. ಬಳಿಕ, ಪೌರ ಕಾರ್ಮಿಕರು ಸುಮಾರು 60 ಅಡಿ ಉದ್ದ, 30 ಅಗಲದ ಈ ಜಾಗದಲ್ಲಿ ಬೆಳೆದಿದ್ದ ಗಿಡ-ಗಂಟಿಗಳನ್ನು ತೆರವುಗೊಳಿಸಿದರು. ಸ್ಥಳದಲ್ಲಿರುವ ವಿದ್ಯುತ್ ಲೈನ್‌ಗೆ ಸಂಬಂಧಿಸಿದ ಕಾಮಗಾರಿಯನ್ನು ಮೆಸ್ಕಾಂ ಸಿಬ್ಬಂದಿ ನಡೆಸಿದರು.
ಇಲ್ಲಿನ ಸ್ಥಳ ಸ್ವಚ್ಛತೆ ಮಾಡಿರುವುದರಿಂದ ಇಲ್ಲಿ ಮಂಗಳವಾರ ಅಧಿಕೃತ ಕಾರ್ಯಾಚರಣೆ ಮುಂದುವರಿಯುವ ಸೂಚನೆ ಸಿಕ್ಕಿದೆ. ಪ್ರಾಯೋಗಿಕ ಕಾರ್ಯಾಚರಣೆಗಳ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ ಇದ್ದು, ನೇತ್ರಾವತಿ-ಅಜೆಕುರಿ ರಸ್ತೆಯಲ್ಲಿ ಜನ, ವಾಹನ ಸಂಚಾರ ನಿಷೇಧಿಸಲಾಗಿತ್ತು. ಕಾರ್ಯಾಚರಣೆ ವೇಳೆ ದೂರುದಾರ ಹಾಜರಿರಲಿಲ್ಲ. ಆತ ಎಸ್ಐಟಿ ಕಚೇರಿಯಲ್ಲಿ ಇದ್ದನೆಂದು ಹೇಳಲಾಗಿದೆ. ಈ ಮಧ್ಯೆ, ಸೋಮವಾರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದವರು ಎಸ್ಐಟಿ ಠಾಣೆಗೆ ಭೇಟಿ ನೀಡಿದ್ದು, ಪ್ರಕರಣ ಕುರಿತು ಮಾಹಿತಿ ಕೋರಿದರು ಎಂದು ತಿಳಿದು ಬಂದಿದೆ.