ಹಾವೇರಿ: ಧರ್ಮದ ಹೆಸರಿನಲ್ಲಿ ಜನರ ಮನಸ್ಸುಗಳನ್ನು ವಿಭಜಿಸುವ ಬಿಜೆಪಿಗೆ ತಕ್ಕ ಉತ್ತರ ನೀಡಲು ಸಾಮರಸ್ಯ ಭಾವದಿಂದ ಜನರ ಮನಸ್ಸನ್ನು ಬೆಸೆಯುವ ಕಾಂಗ್ರೆಸ್ ಪಕ್ಷವನ್ನು ತಳಹಂತದಿಂದ ಸಂಘಟಿಸಬೇಕಿದೆ. ಜಾತ್ಯತೀತ ಹಾಗೂ ಧರ್ಮನಿರಪೇಕ್ಷ ಆಧಾರದಲ್ಲಿ ದೇಶವನ್ನು ಸದೃಢಗೊಳಿಸುವ ಹಾಗೂ ಮುಂದಿನ ದಿನಗಳಲ್ಲಿ ನಡೆಯುವ ಚುನಾವಣೆಗಳಲ್ಲಿ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸಬೇಕಿದೆ ಎಂದು ಅಭಿಯಾನದ ಉಸ್ತುವಾರಿ ಶೇಖ್ ಮಸ್ತಾನ್ ವಲಿ ಹೇಳಿದರು.

ನಗರದ ಸಜ್ಜನರ ಪಂಕ್ಷನ್ ಹಾಲ್‌ನಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಜರುಗಿದ ಸಂಘಟನ್ ಸೃಜನ್ ಅಭಿಯಾನದಲ್ಲಿ ಮಾತನಾಡಿದ ಅವರು, ದೇಶದಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಗಳು ಯುವ ಸಮೂಹದ ಆಕ್ರೋಶಕ್ಕೆ ಕಾರಣವಾಗುತ್ತಿದೆ. ವರ್ಷಗಟ್ಟಲೇ ಓದುವ ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಿ ಬಗ್ಗೆ ಉತ್ಸಾಹ ಹೊಂದಿರುತ್ತಾರೆ. ಏಕಾಏಕಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗುವುದರಿಂದ ತಮ್ಮ ಆತ್ಮಸ್ಥೈರ್ಯವನ್ನೇ ಕಳೆದುಕೊಳ್ಳುತ್ತಿದ್ದಾರೆ. ಬಿಜೆಪಿಯ ಈ ನಿರ್ಲಕ್ಷ್ಯವನ್ನು ಖಂಡಿಸಬೇಕಿದೆ. ದ್ವೇಷದ ಮಾರುಕಟ್ಟೆಯಲ್ಲಿ ಪ್ರೀತಿಯನ್ನು ಹಂಚುವ ರಾಹುಲ್ ಗಾಂಧಿಯವರ ಆಶಯದಂತೆ ಪಕ್ಷದ ಜಿಲ್ಲಾಧ್ಯಕ್ಷರನ್ನು ಬ್ಲಾಕ್ ಮಟ್ಟದ ಕಾರ್ಯಕರ್ತರಿಂದ ನೇಮಕ ಮಾಡಲಾಗುತ್ತಿದೆ. ತಾವೆಲ್ಲರೂ ಮುಕ್ತವಾಗಿ ನೀಡುವ ಅಭಿಪ್ರಾಯಗಳನ್ನು ಪಕ್ಷದ ವೀಕ್ಷಕರು ಗಮನಿಸುವರು. ನಾನೂ ಸಹಿತ ಒಂದು ವಾರ ಹಾವೇರಿ ಜಿಲ್ಲೆಯಲ್ಲಿದ್ದು ಕಾರ್ಯಕರ್ತರ ಅನಿಸಿಕೆ ಆಲಿಸುವೆ ಎಂದರು.

ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್ ಮಾತನಾಡಿ, ಎಐಸಿಸಿ ಗುಜರಾತ್‌ನ ಅಹ್ಮದಾಬಾದ್‌ನಲ್ಲಿ ಸಭೆ ಸೇರಿ ಸಂಘಟನ್ ಸೃಜನ್ ಅಭಿಯಾನಕ್ಕೆ ಮುಂದಾಗಿದೆ. ಬೂತ್ ಮಟ್ಟದ ಕಾರ್ಯಕರ್ತರಿಂದ ನೇಮಕವಾಗುವ ಜಿಲ್ಲಾಧ್ಯಕ್ಷರು ರಾಷ್ಟ್ರಮಟ್ಟದ ವರಿಷ್ಠರೊಂದಿಗೆ ಸಂವಹನ ನಡೆಸುವರು. ಈ ಅಭಿಯಾನಕ್ಕೆ ತಾವು ಹೊಸ ರೂಪ ನೀಡಬೇಕು. ಜಿಲ್ಲಾಧ್ಯಕ್ಷರನ್ನು ಮುಂದುವರಿಸಬೇಕೇ ಅಥವಾ ಬೇರೆಯವರನ್ನು ಆಯ್ಕೆ ಮಾಡಬೇಕೇ ಎಂಬುದರ ಬಗ್ಗೆ ಅಂತಿಮ ನಿರ್ಣಯವನ್ನು ಹೈಕಮಾಂಡ್ ತೆಗೆದುಕೊಳ್ಳಲಿದೆ. ಮುಂದಿನ ಜಿ.ಪಂ, ತಾ.ಪಂ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಸಮರ್ಥ ಜಿಲ್ಲಾಧ್ಯಕ್ಷರನ್ನು ಆಯ್ಕೆ ಮಾಡಲು ಪಕ್ಷ ಮುಂದಾಗಿದೆ. ಇದರಿಂದ ದೊಡ್ಡ ಬದಲಾವಣೆ ಆಗುವ ಸಾಧ್ಯತೆ ಇದೆ ಎಂದರು.

ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷರ ನೇಮಕ ಮಾಡುವ ವಿಶಿಷ್ಟ ಪ್ರಕ್ರಿಯೆಯನ್ನು ಎಐಸಿಸಿ ತೆಗೆದುಕೊಂಡಿದೆ. ಶಾಸಕರ, ಮುಖಂಡರ ಅಷ್ಟೇ ಅಲ್ಲದೇ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ನಿರ್ಣಯ ಕೈಗೊಳ್ಳುತ್ತಿದೆ. ರಾಷ್ಟ್ರಮಟ್ಟದಲ್ಲಿ ಸಂವಹನ ನಡೆಸುವ ಮುಖಂಡರನ್ನು ಗುರುತಿಸೋಣ ಎಂದರು.

ಶಾಸಕ ಶ್ರೀನಿವಾಸ್ ಮಾನೆ ಮಾತನಾಡಿ, ಪ್ರತಿಯೊಬ್ಬರಿಗೂ ತಮ್ಮ ಅನಿಸಿಕೆ ಹೇಳಿಕೊಳ್ಳಲು ಅವಕಾಶವಿದೆ. ಸಂಘಟನೆ ಮಾಡುವ ಉದ್ದೇಶದಿಂದ ಅಭಿಪ್ರಾಯ ಹೇಳಬಹುದು. ಅದನ್ನು ವರಿಷ್ಠರಿಗೆ ಕಳಿಸಲಾಗುತ್ತದೆ. ಇಲ್ಲಿ ಎಲ್ಲರ ಅಭಿಪ್ರಾಯಕ್ಕೂ ಅಷ್ಟೇ ಮಹತ್ವ ಇದೆ. ಇದೊಂದು ಬದಲಾವಣೆ ಸಂಕೇತ ಆಗಲಿ. ಯೋಗ್ಯ ವ್ಯಕ್ತಿಯನ್ನು ಆರಿಸಲು ಕಾರ್ಯಕರ್ತರಿಗೆ ಅವಕಾಶವಿದೆ ಎಂದರು.


ಶಾಸಕ ಯು.ಬಿ. ಬಣಕಾರ ಮಾತನಾಡಿ, ಮುಂದಿನ ದಿನಗಳಲ್ಲಿ ಮಹತ್ವದ ಚುನಾವಣೆ ಎದುರಿಸಬೇಕಿದೆ. ಆ ಸಂದರ್ಭದಲ್ಲಿ ಗ್ರಾಮ ಮಟ್ಟದಲ್ಲಿ ಪಕ್ಷವನ್ನು ಸಂಘಟನೆ ಮಾಡುವ ದೃಷ್ಟಿಯಿಂದ ಈ ಅಭಿಯಾನ ಬ್ಲಾಕ್ ಮಟ್ಟದಲ್ಲಿ ಯಶಸ್ವಿಯಾಗಲಿದೆ. ಹಾವೇರಿ ಜಿಲ್ಲೆಯಲ್ಲಿ ಅಭಿಯಾನವನ್ನು ಮಾದರಿ ಆಗುವಂತೆ ಮಾಡೋಣ ಎಂದರು.

ಶಾಸಕ ಯಾಸೀರ್‌ಅಹ್ಮದ್ ಖಾನ್ ಪಠಾಣ ಮಾತನಾಡಿ, ಇದು ನಮ್ಮ ಪಕ್ಷದ ಆಂತರಿಕ ಪ್ರಜಾಪ್ರಭುತ್ವದ ಲಕ್ಷಣ. ಜಿಲ್ಲಾ ಅಧ್ಯಕ್ಷರನ್ನೂ ಕೂಡ ಬ್ಲಾಕ್ ಮಟ್ಟದಲ್ಲಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ನೇಮಕ ಮಾಡುತ್ತಿರುವುದು ಮುಂದಿನ ದಿನಗಳಲ್ಲಿ ಬಿಜೆಪಿ ಮುಕ್ತ ಜಿಲ್ಲೆಯಾಗಿಸಲು ಸಹಕಾರಿ ಆಗಲಿದೆ ಎಂದರು.

ಮುಖಂಡ ಆನಂದಸ್ವಾಮಿ ಗಡ್ಡದ್ದೇವರಮಠ ಮಾತನಾಡಿ, ಕಾರ್ಯಕರ್ತರ ಶಕ್ತಿಯನ್ನು ಪ್ರದರ್ಶಿಸಲು ಇದೊಂದು ಉತ್ತಮ ಅವಕಾಶ. ನಿಷ್ಪಕ್ಷಪಾತವಾಗಿ ನಡೆಯುವ ಈ ಪ್ರಕ್ರಿಯೆಯಲ್ಲಿ ಎಲ್ಲರೂ ಮುಕ್ತವಾಗಿ ಪಾಲ್ಗೊಳ್ಳಬಹುದು ಎಂದರು.

ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ ಕಾರ್ಯಕ್ರಮ ನಿರ್ವಹಿಸಿದರು. ಹೆಸ್ಕಾಂ ಅಧ್ಯಕ್ಷ ಅಜ್ಜಿಂಫೀರ್ ಎಸ್. ಖಾದ್ರಿ, ಮುಖಂಡರಾದ ನೆಹರು ಓಲೇಕಾರ, ಎಸ್.ಎಫ್.ಎನ್ ಗಾಜಿಗೌಡ್ರ, ಕೊಟ್ರೇಶಪ್ಪ ಬಸೇಗಣ್ಣಿ, ಡಿ.ಬಸವರಾಜು, ಶಶಿಧರ ಪೂಜಾರ, ಲಲಿತಮ್ಮ ಹುಗ್ಗಿ, ಶಾಂತಕ್ಕ ಶಿರೂರ ಸೇರಿದಂತೆ ಪಕ್ಷದ ವಿವಿಧ ಘಟಕಗಳ ಮುಖ್ಯಸ್ಥರು ಇದ್ದರು.