ಸಿಎಂ ಆರೋಪ ಹಿಂಪಡೆಯದಿದ್ದರೆ ಗಾಂಧಿ ಪ್ರತಿಮೆ ಮುಂದೆ ಧರಣಿ: ಕೋಟ ಎಚ್ಚರಿಕೆ

| Published : Jul 21 2024, 01:18 AM IST

ಸಾರಾಂಶ

ಸಿದ್ದರಾಮಯ್ಯ ಅವರು ನನ್ನ ಹೆಸರು ಉಲ್ಲೇಖಿಸಿರುವುದನ್ನು ವಾಪಾಸ್ ಪಡೆಯಬೇಕು, ಇಲ್ಲ ತಕ್ಷಣ ಈ ಪ್ರಕರಣವನ್ನು ಸಿಬಿಐಗೆ ವಹಿಸಲಿ, ತಾನು ಯಾವುದೇ ತನಿಖೆ ಎದುರಿಸಲು ಸಿದ್ಧನಿದ್ದೇನೆ ಎಂದು ಕೋಟ ಸವಾಲು ಹಾಕಿದರು.

ಕನ್ನಡಪ್ರಭ ವಾರ್ತೆ ಉಡುಪಿ

''''ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನನ್ನ ವಿರುದ್ಧ ಮಾಡಿರುವ ಭ್ರಷ್ಟಾಚಾರದ ಆರೋಪವನ್ನು ವಾರದೊಳಗೆ ವಾಪಸ್ ಪಡೆಯಬೇಕು, ಇಲ್ಲದಿದ್ದರೆ ವಿಧಾನಸೌಧದ ಮುಂದಿರುವ ಗಾಂಧಿ ಪ್ರತಿಮೆ ಎದುರು ಧರಣಿ ಕುಳಿತು, ಪ್ರಕರಣವನ್ನು ಸಿಬಿಐ ತನಿಖೆಗೆ ಒತ್ತಾಯಿಸುತ್ತೇನೆ'''' ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಎಚ್ಚರಿಕೆ ನೀಡಿದ್ದಾರೆ.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ನನ್ನ ಹೆಸರನ್ನು ಉಲ್ಲೇಖಿಸಿ, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಮಾಜಕಲ್ಯಾಣ ಇಲಾಖೆಯಲ್ಲಿ ಹಗರಣ ನಡೆದಿದೆ ಎಂದು ಆರೋಪಿಸಿದ್ದಾರೆ. ಅವರು ಸಿಎಂ ಆಗಿ ಒಂದು ವರ್ಷವೇ ಕಳೆಯಿತು, ಸಿಐಡಿ ಅವರ ಅಧೀನದಲ್ಲಿದೆ. ನಾನು ತಪ್ಪು ಮಾಡಿದ್ದರೆ ತನಿಖೆ ಮಾಡಿಸಿ, ಜೈಲಿಗೆ ಕಳುಹಿಸಬಹುದಿತ್ತು. ಅದನ್ನು ಮಾಡಿಲ್ಲ, ನಾನು ಮಂತ್ರಿಯಾಗಿದ್ದಾಗ ಅವರು ವಿಪಕ್ಷ ನಾಯಕರಾಗಿದ್ದರು. ಆಗಲೂ ಏನು ಸೊಲ್ಲೆತ್ತಲಿಲ್ಲ, ಈಗ ವಾಲ್ಮೀಕಿ ನಿಗಮದ ಹಗರಣದ ಆರೋಪ ಅವರ ಮೇಲೆ ಬಂದಾಗ, ಬೇರೆಯವರ ತಲೆಗೆ ಆರೋಪ ಹೊರಿಸುವುದು ಎಷ್ಟು ಸರಿ? ಎಂದು ಕೋಟ ಆಕ್ರೋಶದಿಂದ ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರು ನನ್ನ ಹೆಸರು ಉಲ್ಲೇಖಿಸಿರುವುದನ್ನು ವಾಪಾಸ್ ಪಡೆಯಬೇಕು, ಇಲ್ಲ ತಕ್ಷಣ ಈ ಪ್ರಕರಣವನ್ನು ಸಿಬಿಐಗೆ ವಹಿಸಲಿ, ತಾನು ಯಾವುದೇ ತನಿಖೆ ಎದುರಿಸಲು ಸಿದ್ಧನಿದ್ದೇನೆ ಎಂದು ಕೋಟ ಸವಾಲು ಹಾಕಿದರು.

ಪ್ರಜಾಪ್ರಭುತ್ವದಲ್ಲಿ ಸತ್ಯಕ್ಕೆ ಅಪಚಾರವಾಗಬಾರದು, ಬಹುಶಃ ಸಿಎಂ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕಲು ಅನುಮತಿ ಬೇಕಾಗುತ್ತದೆ, ಈ ಬಗ್ಗೆ ಕೂಡ ಯೋಚನೆ ಮಾಡುತ್ತೇನೆ ಎಂದರು.

ಪ.ಪಂಗಡಕ್ಕೆ ಮೀಸಲಾಗಿದ್ದ ಹಣವನ್ನು ಚುನಾವಣೆ ಹಾಗೂ ಮದ್ಯ ಖರೀದಿಗೆ ಬಳಸಿಕೊಂಡ ಕಾಂಗ್ರೆಸ್ ಸರ್ಕಾರ, ತನ್ನ ಹುಳುಕನ್ನು ಮುಚ್ಚಿಡಲು, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದಿರುವ ಪ್ರಕರಣಗಳನ್ನು ಹಗರಣ ಎಂದು ಬಿಂಬಿಸಿ ಜನತೆಯ ದಿಕ್ಕು ತಪ್ಪಿಸಲು ಯತ್ನಿಸುತ್ತಿದ್ದಾರೆ ಎಂದು ಪ್ರತ್ಯಾರೋಪಿಸಿದರು.

ಕೋಟ ಶ್ರೀನಿವಾಸ ಪೂಜಾರಿ ಕೊಳವೆಬಾವಿ ಹಗರಣ ಮಾಡಿದ್ದಾನೆ ಎಂದಿದ್ದೀರಿ. ನಾನು ಮಂತ್ರಿಯಾಗಿದ್ದಾಗ ಕೊಳವೆಬಾವಿ ಟೆಂಡರಿನಲ್ಲಿ ಅಕ್ರಮವಾಗಿದೆ ಎಂಬ ದೂರು ಕೇಳಿ ಬಂದಿತ್ತು, ಆಗ ತಕ್ಷಣ ಕಡತ ತರಿಸಿಕೊಂಡು ಪ್ರಕರಣವನ್ನು ಸಿಐಡಿ ತನಿಖೆಗೆ ಆದೇಶಿಸಿದೆ. ರಾಜ್ಯದ ಇತಿಹಾಸದಲ್ಲಿ ಟೆಂಡರ್ ಬಿಟ್ಟರೆ ಬೇರೆ ವ್ಯವಸ್ಥೆ ಇರಲಿಲ್ಲ. ನಾನು ಪ್ರಥಮ ಬಾರಿಗೆ ರೈತರು ತಮಗಿಷ್ಟವಾದ ಏಜೆನ್ಸಿಯಿಂದ ಕೊಳವೆಬಾವಿ ಕೊರೆಸಿ, ಹಣ ನೇರ ಅವರ ಖಾತೆಗೆ ಜಮಾ ಮಾಡುವ ವ್ಯವಸ್ಥೆ ಜಾರಿಗೆ ತಂದೆ. ಈ ವ್ಯವಸ್ಥೆ ಇವತ್ತಿಗೂ ನಡೆಯುತ್ತಿದೆ, ಅದರಲ್ಲೇನು ಹಗರಣ ನಡೆದಿದೆ ಎಂದವರು ಪ್ರಶ್ನಿಸಿದರು.

ಕೋಟ ಶ್ರೀನಿವಾಸ ಪೂಜಾರಿ ಸಮಾಜ ಕಲ್ಯಾಣ ಮಂತ್ರಿಯಾಗಿದ್ದಾಗ ಹಗರಣ ಆಗಿಲ್ಲ ಎಂದು ಅಧಿಕಾರಿಗಳೇ ಸ್ವತಃ ಸಿಎಂಗೆ ಹೇಳಿದ್ದಾರೆ. ಆದರೂ ನನ್ನ ಮೇಲೆ ಉದ್ದೇಶಪೂರ್ವಕವಾಗಿ ಆರೋಪ ಮಾಡುತ್ತಿದ್ದಾರೆ. ನಾನು ಸ್ಪಷ್ಟೀಕರಣ ಕೇಳಿ ಅವರಿಗೆ ಪತ್ರ ಬರೆದಿದ್ದೇನೆ ಎಂದರು.

ಭೋವಿ ನಿಗಮದ ವ್ಯವಹಾರದ ಬಗ್ಗೆ ಸಿಎಂ ಮಾಡಿದ ಆರೋಪಕ್ಕೆ ಪ್ರತಿಕ್ರಿಯಿಸಿದ ಕೋಟ, ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಈ ನಿಗಮಕ್ಕೆ ಕೆಲ ಅಧಿಕಾರಿಗಳನ್ನು ನೇಮಕ ಮಾಡಿದ್ದರು. ಅವರು ದುರ್ನಡತೆಯ ಜೊತೆಗೆ ಹಗರಣ ಮಾಡಿದ್ದರು, ಅಂತಹ ಅಧಿಕಾರಿಗಳನ್ನು ತಕ್ಷಣ ಅಮಾನತು ಮಾಡಿ ಸಿಐಡಿ ತನಿಖೆಗೆ ಆದೇಶ ಮಾಡಿದ್ದೇನೆ ಎಂದು ಹೇಳಿದರು.