ಸಾರಾಂಶ
ಕನ್ನಡಪ್ರಭ ವಾರ್ತೆ, ತುಮಕೂರು
ಕೆ.ಎನ್.ರಾಜಣ್ಣನವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಿರುವುದನ್ನು ಖಂಡಿಸಿ, ಅವರನ್ನು ಮತ್ತೆ ಮಂತ್ರಿ ಮಂಡಲಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿ ಕೆ.ಎನ್.ಆರ್ ಹಾಗೂ ಆರ್.ಆರ್. ಅಭಿಮಾನಿ ಬಳಗ ನೇತೃತ್ವದಲ್ಲಿ ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳ, ಸಮಾಜಗಳ ಮುಖಂಡರೊಂದಿಗೆ ಈ ತಿಂಗಳ 25 ರಂದು ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಕೆಎನ್ ಆರ್ ಬಳಗದ ಮುಖಂಡ, ನಗರಸಭೆ ಮಾಜಿ ಅಧ್ಯಕ್ಷ ಟಿ.ಪಿ,ಮಂಜುನಾಥ್ ಹೇಳಿದರು.ಗುರುವಾರ ನಗರದ ಕೆಎನ್‌ಆರ್ ಮಾನಿ ಬಳಗದಿಂದ ನಡೆದ ದೇವರಾಜ ಅರಸು ಅವರ 110ನೇ ಜಯಂತಿ ಆಚರಣೆಯಲ್ಲಿ ಅರಸು ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಕೆ.ಎನ್.ರಾಜಣ್ಣನವರು ದೇವರಾಜ ಅರಸು ಅವರ ತತ್ವಾದರ್ಶಗಳನ್ನು ತಮ್ಮ ರಾಜಕೀಯ ಬದುಕಿನಲ್ಲಿ ಅಳವಡಿಸಿಕೊಂಡು ಅವರಂತೆಯೇ ಹಿಂದುಳಿದ ವರ್ಗ, ಶೋಷಿತರ ಧ್ವನಿಯಾಗಿ ನೆರವಿಗೆ ನಿಂತವರು. ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ದೇವರಾಜ ಅರಸು ಅವರ ಹೆಸರಿಡಲು ರಾಜಣ್ಣನವರು ಪ್ರಮುಖ ಪಾತ್ರವಹಿಸಿದರು ಎಂದು ಹೇಳಿದರು.ಇದೇ ದಿನ ಮಾಜಿ ಪ್ರಧಾನಿ ರಾಜೀವ್ ಗಾಂಧಿಯವರ ಜನ್ಮದಿನ. ರಾಜೀವ್ ಗಾಂಧಿಯವರು ದೇಶಕಂಡ ಅಪ್ರತಿಮ ನಾಯಕ. ಅವರ ನೇತೃತ್ವದಲ್ಲಿ 1984ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 405 ಸ್ಥಾನಗಳನ್ನು ಗಳಿಸಿತ್ತು. ಆನಂತರದಿಂದ ಪಕ್ಷ ಕುಸಿತ ಕಂಡಿತು. ಪಕ್ಷದ ಸಂಘಟನಾ ಕೊರತೆ ಹಾಗೂ ನಿಷ್ಠಾವಂತರ ಕಡಿಗಣಿಕೆಯೂ ಇದಕ್ಕೆ ಕಾರಣ ಎಂದರು.
ಮುಖ್ಯಮಂತ್ರಿಯಾಗಿ ಜನಪರ ಕಾರ್ಯಕ್ರಮ ಜಾರಿಗೆ ತಂದು ಜನರ ಮೆಚ್ಚುಗೆಗೆ ಪಾತ್ರರಾದ ದೇವರಾಜ ಅರಸು ಅವರನ್ನೇ ಕಾಂಗ್ರೆಸ್ ಪಕ್ಷ ಕಡೆಗಣಿಸಿತ್ತು. ಅರಸು ಅವರ ದಾರಿಯಲ್ಲಿ ಸಾಗಿರುವ ಕೆ.ಎನ್.ರಾಜಣ್ಣನವರನ್ನೂ ಕಾಂಗ್ರೆಸ್ ಹೈಕಮಾಂಡ್ ಸಂಪುಟದಿಂದ ವಜಾಗೊಳಿಸಿರುವುದು ವಿಷಾದನೀಯ ಎಂದರು.ಸೋಮವಾರ ನಡೆಯುವ ಧರಣಿ ಸತ್ಯಾಗ್ರಹದಲ್ಲಿ ಕೆ.ಎನ್.ರಾಜಣ್ಣನವರಿಗೆ ಮತ್ತೆ ಮಂತ್ರಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲೆಯಾದ್ಯಂತ ಎಲ್ಲಾ ಜಾತಿವರ್ಗದವರು, ಸಂಘಸಂಸ್ಥೆಗಳು, ಸಾಹಿತಿ, ಕಲಾವಿದರೂ ಭಾಗವಹಿಸುವರು ಎಂದು ಹೇಳಿದರು.
ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಧನಿಯಾಕುಮಾರ್ ಮಾತನಾಡಿ, ದೇವರಾಜ ಅರಸು ಅವರು ಹಿಂದುಳಿದ ವರ್ಗ, ಶೋಷಿತ ಸಮುದಾಯದ ಆಶಾಕಿರಣವಾಗಿದ್ದರು, ಅವರು ಕೊಟ್ಟ ಕಾರ್ಯಕ್ರಮಗಳನ್ನು ಈ ವರ್ಗಗಳು ಮರೆಯುವಂತಿಲ್ಲ. ಅರಸುವ ಅವರ ಹುಟ್ಟಿದ ಮನೆ, ಸಮಾಧಿ ಶಿಥಿಲಗೊಂಡಿದ್ದು ಇವನ್ನು ರಾಜ್ಯ ಸರ್ಕಾರ ಸ್ಮಾರಕವಾಗಿ ಅಭಿವೃದ್ಧಿಪಡಿಸಬೇಕು ಎಂದು ಒತ್ತಾಯಿಸಿದರು.ಅರಸು ಅವರ ಆದರ್ಶಗಳನ್ನೇ ಅನುಸರಿಸಿಕೊಂಡು ಬಂದಿರುವ ಕೆ.ಎನ್.ರಾಜಣ್ಣನವರು ಶೂ ಭಾಗ್ಯ, ಕ್ಷೀರ ಭಾಗ್ಯದಂತಹ ಸರ್ಕಾರದ ಅನೇಕ ಜನಪರ ಯೋಜನೆಗಳ ಅನುಷ್ಠಾನಕ್ಕೆ ಕಾರಣಕರ್ತರಾಗಿದ್ದಾರೆ. ಕಾಂಗ್ರೆಸ್ ಪಕ್ಷದ ಸಂಘಟನೆಯ ಶಕ್ತಿಯಾಗಿದ್ದಾರೆ. ಇಂತಹ ನಾಯಕನನ್ನು ಸಚಿವ ಸಂಪುಟದಿಂದ ವಜಾಗೊಳಿಸಿ ಅಪಮಾನ ಮಾಡಿರುವುದು ಅವರ ಅಪಾರ ಅಭಿಮಾನಿಗಳಿಗೆ ನೋವಾಗಿದೆ. ಕೂಡಲೇ ಅವರಿಗೆ ಮತ್ತೆ ಮಂತ್ರಿ ಸ್ಥಾನ ನೀಡಬೇಕು. 25ರಂದು ನಡೆಯುವ ಧರಣಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳಯ ಭಾಗವಹಿಸಿ ಹೋರಾಟ ಬೆಂಬಲಿಸಬೇಕು ಎಂದು ಕೋರಿದರು.
ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಬಿ.ಜಿ.ವೆಂಕಟೇಗೌಡ ಮಾತನಾಡಿ, ಕೆ.ಎನ್.ರಾಜಣ್ಣನವರು ತಳಸಮುದಾಯಗಳನ್ನು ಗುರುತಿಸಿ ಅವರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ. ಸಹಕಾರಿ ಕ್ಷೇತ್ರದಲ್ಲಿ ಕ್ರಾಂತಿ ಮಾಡಿರುವ ಅವರು ಎಲ್ಲಾ ಸಮುದಾಯಗಳೂ ಸಹಕಾರ ಕ್ಷೇತ್ರದಲ್ಲಿ ತೊಡಗಿಕೊಂಡು ಆರ್ಥಿಕವಾಗಿ ಶಕ್ತಿ ಬೆಳೆಸಿಕೊಳ್ಳಲು ಕಾರಣಕರ್ತರಾಗಿದ್ದಾರೆ ಎಂದರು.ಈ ವೇಳೆ ಜಿಲ್ಲಾ ದೇವರಾಜ ಅರಸು ಪ್ರಶಸ್ತಿ ಪುರಸ್ಕೃತರು, ವಿವಿಧ ಕ್ಷೇತ್ರಗಳ ಸಾಧಕರಾದ ಆರ್ಯ ಈಡಿಗ ಸಮಾಜದ ಅಜಯ್‌ಕುಮಾರ್, ಮುಂಡರಾದ ಕೆ.ವಿ.ಕೃಷ್ಣಮೂರ್ತಿ, ಪದ್ಮನಾಭ್(ಗೋಲ್ಡ್ ಮಧು), ಗುರುರಾಘವೇಂದ್ರ, ನಿಸಾರ್ ಅಹ್ಮದ್, ಅನಿಲ್‌ಕುಮಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ವಾಲ್ಮೀಕಿ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಪುರುಷೋತ್ತಮ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಲಕ್ಷ್ಮೀನಾರಾಯಣ, ಮುಖಂಡರಾದ ನಾರಾಯಣಗೌಡ, ಚಂದ್ರಗಿರಿ ಲಕ್ಷ್ಮೀನಾರಾಯಣ, ಎಂ.ಎಚ್.ನಾಗರಾಜು, ಕೆ.ವಿ.ಕೃಷ್ಣಮೂರ್ತಿ, ಕರಾಟೆ ಕೃಷ್ಣಮೂರ್ತಿ, ಗುರುಮೂರ್ತಿ, ನವರತ್ನಕುಮಾರ್, ಶಿವಕುಮಾರ್, ರಮೇಶ್, ಗಂಗಾಧರ್, ಶಿವಣ್ಣ, ಜಿ.ಆರ್.ನಾಗರಾಜು, ರಮೇಶ್ ಮೊದಲಾದವರು ಭಾಗವಹಿಸಿದ್ದರು.