ಸಾರಾಂಶ
ಧಾರವಾಡ:
ಕಳೆದ ಎರಡು ದಿನಗಳಿಂದ ಹಗಲು-ರಾತ್ರಿ ಸುರಿದ ಮಹಾ ಮಳೆಗೆ ಧಾರವಾಡ ಜನತೆ ಅದರಲ್ಲೂ ತಗ್ಗು ಪ್ರದೇಶಗಳ ನಿವಾಸಿಗಳು ಹೈರಾಣಾಗಿದ್ದಾರೆ. ಏಕಾಏಕಿ ಗುಡುಗು-ಸಿಡಿಲು ಸಮೇತ ನಿರಂತರವಾಗಿ ಸುರಿದ ಮಳೆಗೆ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿ ತೀವ್ರ ಸಮಸ್ಯೆ ತಂದೊಡ್ಡಿತು.ಮಂಗಳವಾರ ಹಗಲು ಹೊತ್ತು ಸಾಧಾರಣ ಪ್ರಮಾಣದಲ್ಲಾದರೆ, ಅದೇ ದಿನ ರಾತ್ರಿ ಹಾಗೂ ಬುಧವಾರ ಇಡೀ ದಿನ ನಿರಂತರ ಮಳೆಗೆ ಧಾರವಾಡದ ಹತ್ತಾರು ಬಡಾವಣೆಗಳು ನೀರಲ್ಲಿಯೇ ನಿಲ್ಲುವಂತಾಗಿತ್ತು. ಗುರುವಾರ ರಾತ್ರಿಯಿಂದ ಬೆಳಗಿನಜಾವವರೆಗೂ ಸತತವಾಗಿ ಸುರಿದ ಮಳೆಯಿಂದಾಗ ನಗರದಲ್ಲಿ ಸಾಕಷ್ಟು ಅವಾಂತರ ಸೃಷ್ಟಿಯಾಗಿವೆ. ನಗರದ ಹೊರ ಪ್ರದೇಶದಲ್ಲಿನ ಬಹುತೇಕ ಬಡಾವಣೆಗಳು ಜಲಾವೃತವಾಗಿದ್ದರಿಂದ ಜನರು ಪರದಾಡುವಂತಾಗಿದೆ. ಗುರುವಾರ ಬೆಳಗ್ಗೆಯಿಂದ ಮಳೆ ಕೊಂಚ ಬಿಡುವು ನೀಡಿದ್ದರಿಂದ ನೀರಿನ ಹರಿವು ಸ್ವಲ್ಪ ತಗ್ಗಿದೆ. ಆದರೆ ಮಳೆಯಿಂದ ಮನೆಗಳಲ್ಲಿನ ರಾಡಿ ಸ್ವಚ್ಛಗೊಳಿಸುವಲ್ಲಿ ಜನರು ಹೈರಾಣಾದರು.
ಭಾವಿಕಟ್ಟಿ ಪ್ಲಾಟ್, ಸರೋವರನಗರ, ಸಿದ್ಧಾರೂಢ ಕಾಲನಿ, ಸಾಧೂನವರ ಎಸ್ಟೇಟ್, ಚಿಕ್ಕಮಲ್ಲಿಗವಾಡ ಸುತ್ತಲಿನ ಪ್ರದೇಶ, ಹಿರೇಮಠ ಲೇಔಟ್, ಮಾಕಡವಾಲೆ ಪ್ಲಾಟ್, ಬಸವನಗರ, ಗಣೇಶ ನಗರ, ಗೌಡರ ಕಾಲನಿ, ಜಾಧವ ಲೇಔಟ್, ಕೆಲಗೇರಿ, ಸಂಪಿಗೆನಗರ, ಶಿರಡಿನಗರ, ಸಿ.ಬಿ. ನಗರ, ಶ್ರೀಶ ಲೇಔಟ್, ತಪೋವನ ಬಳಿಯ ಕೆಐಡಿಬಿ ಕಾಲನಿ ಸೇರಿ ತಗ್ಗು ಪ್ರದೇಶಗಳಲ್ಲಿನ ಕೆಲ ಬಡಾವಣೆಗಳು ಕೆರೆಗಳಂತೆ ಕಾಣುತ್ತಿವೆ.ಕಾಲುವೆಗಳಿಗೆ ಹರಿಯಬೇಕಾದ ಮಳೆ ನೀರು ರಸ್ತೆಗಳಲ್ಲೇ ಹರಿಯುತ್ತಿರುವ ಕಾರಣ ವಾಹನ ಸವಾರರು ಪರದಾಡುವಂತಾಗಿದೆ. ಎನ್ಟಿಟಿಎಫ್, ಕೆಎಂಎಫ್, ಸೇರಿ ಇತರ ಪ್ರಮುಖ ರಸ್ತೆಗಳು ಸಂರ್ಪೂಣ ಜಲಾವೃತವಾಗಿದ್ದವು. ಬಿಆರ್ಟಿಎಸ್ ರಸ್ತೆ ನಿರ್ಮಾಣ ಸಮಯದಲ್ಲಿ ಮಳೆ ನೀರು ಸರಿಯಾಗಿ ಹರಿಯುವಂತೆ ವ್ಯವಸ್ಥೆ ಮಾಡದ ಕಾರಣ ರಸ್ತೆಗಳಿಗೆ ನುಗ್ಗುತ್ತಿವೆ. ರಸ್ತೆಯಲ್ಲಿ ರಭಸವಾಗಿ ಹರಿದ ನೀರು ಕಟ್ಟಡಗಳಿಗೆ ನುಗ್ಗಿದ ಪರಿಣಾಮ ವಾಹನಗಳು ನೀರಿನಲ್ಲಿ ತೇಲುವಂತಹ ಸ್ಥಿತಿ ಉದ್ಭವಿಸಿತು.
ಮಳೆ ಸುರಿದಾಗ ವೀಕ್ಷಣೆಗೆ ಆಗಮಿಸುವ ಮಹಾನಗರ ಪಾಲಿಕೆ ಅಧಿಕಾರಿಗಳು ಶಾಶ್ವತ ಪರಿಹಾರಕ್ಕೆ ಮಾತ್ರ ಮುಂದಾಗುತ್ತಿಲ್ಲ. ಸಕಾಲದಲ್ಲಿ ರಾಜಕಾಲುವೆಗಳ ದುರಸ್ತಿ, ಹೂಳೆತ್ತುವ ಕೆಲಸ ಹಾಗೂ ಉಪ ಕಾಲುವೆಗಳ ನಿರ್ವಹಣೆ, ಒಳಚರಂಡಿ ವ್ಯವಸ್ಥೆ ಸೇರಿ ಇತರ ಕಾರ್ಯಗಳು ಸರಿಯಾಗಿ ನಡೆಯದೇ ಇದ್ದುದರಿಂದ ಪ್ರತಿ ಬಾರಿಯೂ ಮಳೆ ಬಂದಾಗಲೆಲ್ಲಾ ಇದೇ ರೀತಿ ವಾತಾವರಣ ಸೃಷ್ಟಿಯಾಗುತ್ತದೆ. ಜನರು ಸಮಸ್ಯೆಗಳ ಬಗ್ಗೆ ದೂರು ಸಲ್ಲಿಸಿ ಸುಸ್ತಾಗಿದ್ದಾರೆ. ಆದಾಗ್ಯೂ ಪರಿಹಾರ ಮಾತ್ರ ಸಿಗುತ್ತಿಲ್ಲ ಎಂದು ವಾಹನ ಸವಾರರು ಹಾಗೂ ರಸ್ತೆ ಬದಿಯ ನಿವಾಸಿಗಳು ಹಿಡಿಶಾಪ ಹಾಕುತ್ತಿದ್ದರು.ಮಳೆಗಾಲ ಪೂರ್ವದಲ್ಲಿ ಗಟಾರು, ರಾಜಕಾಲುವೆಗಳ ಸ್ವಚ್ಛತೆ ಕಾರ್ಯ ಮಾಡುವುದಾಗಿ ಅಧಿಕಾರಿಗಳು ಹೇಳುತ್ತಾರೆ. ಆದರೆ ಅದು ಸಭೆಗೆ ಮಾತ್ರ ಸೀಮಿತವಾಗಿ ಕಾರ್ಯರೂಪಕ್ಕೆ ಬರುತ್ತಿಲ್ಲ. ಇದರಿಂದ ಮಳೆಯಿಂದ ಅವಾಂತರ ತಪ್ಪಿದ್ದಲ್ಲ. ಇನ್ನಾದರೂ ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು ಎಂದು ಜನರು ಪಾಲಿಕೆ ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮೇಯರ್ ಪರಿಶೀಲನೆ:ಬುಧವಾರ ರಾತ್ರಿಯಿಂದ ಸುರಿದ ಮಳೆಗೆ ಸೃಷ್ಟಿಯಾದ ಅವಾಂತರಗಳ ವೀಕ್ಷಣೆಗೆ ಮೇಯರ್ ರಾಮಣ್ಣ ಬಡಿಗೇರ, ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಪಾಲಿಕೆ ಅಧಿಕಾರಿಗಳೊಂದಿಗೆ ಗುರುವಾರ ನಗರ ಸಂಚಾರ ನಡೆಸಿ ಪರಿಶೀಲನೆ ನಡೆಸಿದರು.
ಬೈಪಾಸ್ ಬಂದ್:ರಸ್ತೆ ಅಗಲೀಕರಣ ನಿಮಿತ್ತ ಹು-ಧಾ ಮಧ್ಯೆದ ಬೈಪಾಸ್ ರಸ್ತೆ ಕಾಮಗಾರಿ ಕೆಲ ದಿನಗಳಿಂದ ಆರಂಭವಾಗಿದೆ. ಕಾಮಗಾರಿಗಳಿಂದ ಅಲ್ಲಲ್ಲಿ ರಸ್ತೆ ಅಗೆದ ಪರಿಣಾಮ ಹಾಗೂ ಮನಸೂರು ಭಾಗದಿಂದ ಹರಿದು ಬಂದ ಹಳ್ಳದ ನೀರಿನಿಂದ ಇಡೀ ರಸ್ತೆ ಜಲಾವೃತವಾಗಿ ಬುಧವಾರ ರಾತ್ರಿ ಸಾರಿಗೆ ಬಸ್ ಸಿಲುಕಿಕೊಂಡಿತ್ತು. ಬಸ್ನಲ್ಲಿದ್ದ 30 ಜನರನ್ನು ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ಸ್ಥಳಿಯರ ಸಹಕಾರದಿಂದ ಪ್ರಯಾಣಿಕರನ್ನು ರಸಿದ್ದಾರೆ. ಹೀಗಾಗಿ ಗುರುವಾರ ಬೆಳಗ್ಗೆವರೆಗೂ ರಸ್ತೆಯಲ್ಲಿನ ಸಂಚಾರ ಬಂದಾಗಿತ್ತು. ಮಧ್ಯಾಹ್ನದಿಂದ ಸಂಚಾರ ಆರಂಭಿಸಲಾಯಿತು. ಧಾರವಾಡ ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ 8ರಿಂದ ಗುರುವಾರ ಬೆಳಗ್ಗೆ 8ರ ವರೆಗೆ ಕಳೆದ 24 ಗಂಟೆಗಳಲ್ಲಿ ದಾಖಲೆ ಮಳೆಯಾಗಿದೆ. ಜಿಲ್ಲೆಯಲ್ಲಿ ವಾಡಿಕೆ 2.6 ಮಿಮೀ ಮಳೆ ಪೈಕಿ 39.2ರಷ್ಟು ಮಳೆಯಾಗಿದೆ. ಧಾರವಾಡ ನಗರದಲ್ಲಿ 2.2 ಮಿಮೀ ಪೈಕಿ 61.3ರಷ್ಟು, ಹುಬ್ಬಳ್ಳಿಯಲ್ಲಿ 3.7 ಮಿಮೀ ಪೈಕಿ 35.3ರಷ್ಟು ಕಲಘಟಗಿಯಲ್ಲಿ 1.8 ಮಿಮೀ ಪೈಕಿ 26.7ರಷ್ಟು, ಕುಂದೋಗಳದಲ್ಲಿ 4.1 ಮಿಮೀ ಪೈಕಿ 55.5ರಷ್ಟು, ನವಲಗುಂದದಲ್ಲಿ 2.0 ಮೀಮೀ ಪೈಕಿ 27ರಷ್ಟು, ಹುಬ್ಬಳ್ಳಿ ನಗರದಲ್ಲಿ 2.1 ಮಿ.ಮೀ. ಪೈಕಿ 51ರಷ್ಟು. ಅಳ್ನಾವರದಲ್ಲಿ 3.0 ಮಿ.ಮೀ. ಪೈಕಿ 51ರಷ್ಟು ಹಾಗೂ ಅಣ್ಣಿಗೇರಿಯಲ್ಲಿ 1.7 ಮಿ.ಮೀ. ಪೈಕಿ 3ರಷ್ಟು ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದರು.