ರಾಜ್ಯ ಸರ್ಕಾರ ತುಸು ಇಚ್ಛಾಶಕ್ತಿ ತೋರಿದರೆ ಆರು ತಿಂಗಳೊಳಗೆ ಧಾರವಾಡ ಪಾಲಿಕೆ ಸ್ವತಂತ್ರ!

| Published : Jan 14 2025, 01:05 AM IST / Updated: Jan 14 2025, 04:36 AM IST

ರಾಜ್ಯ ಸರ್ಕಾರ ತುಸು ಇಚ್ಛಾಶಕ್ತಿ ತೋರಿದರೆ ಆರು ತಿಂಗಳೊಳಗೆ ಧಾರವಾಡ ಪಾಲಿಕೆ ಸ್ವತಂತ್ರ!
Share this Article
  • FB
  • TW
  • Linkdin
  • Email

ಸಾರಾಂಶ

ರಾಜ್ಯದ ಎಲ್ಲೂ ಒಂದು ಪಾಲಿಕೆಯನ್ನು ಒಡೆದು ಪ್ರತ್ಯೇಕಿಸಿಲ್ಲ. ಹು-ಧಾ ಮಹಾನಗರ ಪಾಲಿಕೆಯನ್ನು ಸಹ ಇಬ್ಭಾಗ ಮಾಡುವುದಿಲ್ಲ ಎಂದವರಿಗೆ ರಾಜ್ಯ ಸರ್ಕಾರ ಪ್ರತ್ಯೇಕ ಪಾಲಿಕೆ ಘೋಷಣೆ ಉತ್ತರ ನೀಡಿದೆ.

ಬಸವರಾಜ ಹಿರೇಮಠ

ಧಾರವಾಡ : ರಾಜ್ಯದ ಎಲ್ಲೂ ಒಂದು ಪಾಲಿಕೆಯನ್ನು ಒಡೆದು ಪ್ರತ್ಯೇಕಿಸಿಲ್ಲ. ಹು-ಧಾ ಮಹಾನಗರ ಪಾಲಿಕೆಯನ್ನು ಸಹ ಇಬ್ಭಾಗ ಮಾಡುವುದಿಲ್ಲ ಎಂದವರಿಗೆ ರಾಜ್ಯ ಸರ್ಕಾರ ಪ್ರತ್ಯೇಕ ಪಾಲಿಕೆ ಘೋಷಣೆ ಉತ್ತರ ನೀಡಿದೆ. ಇದೀಗ ಸ್ವತಂತ್ರ ಪಾಲಿಕೆ ಸ್ಥಾನಮಾನಕ್ಕೆ ಕನಿಷ್ಠ ಎರಡು ವರ್ಷ ಬೇಕಾಗುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿದ್ದು, ರಾಜ್ಯ ಸರ್ಕಾರ ತುಸು ಇಚ್ಛಾಶಕ್ತಿ ತೋರಿದರೆ ಆರೇ ತಿಂಗಳಲ್ಲಿ ಪ್ರತ್ಯೇಕ ಪಾಲಿಕೆ ಕಾರ್ಯಾರಂಭ ಮಾಡಬಹುದು.

ಇಲ್ಲಿಯ ಪಾಲಿಕೆಯ ಎಂಜಿನಿಯರ್‌ ವಿಭಾಗದ ಹಿರಿಯ ಅಧಿಕಾರಿಯೊಬ್ಬರ ಮಾಹಿತಿಯಂತೆ, ನಗರಾಭಿವೃದ್ಧಿ ಇಲಾಖೆಯಿಂದ ಸಾರ್ವಜನಿಕರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಿ 30 ದಿನಗಳ ಕಾಲಾವಕಾಶದ ನಂತರ ರಾಜ್ಯ ಸರ್ಕಾರ ಅಂತಿಮ ಅಧಿಸೂಚನೆ ಪ್ರಕಟಿಸುತ್ತದೆ. ಪ್ರತ್ಯೇಕ ಪಾಲಿಕೆಗೆ ಬೇಕಾದ ಸೌಕರ್ಯ ಮಾಡಿಕೊಂಡು ಸರ್ಕಾರ ಮನಸ್ಸು ಮಾಡಿದರೆ ಐದಾರು ತಿಂಗಳಲ್ಲಿ ಧಾರವಾಡ ಪಾಲಿಕೆಗೆ ಸ್ವತಂತ್ರ ಸ್ಥಾನ ನೀಡಬಹುದು ಎಂದು ಹೇಳಿದ್ದಾರೆ.

ಕಾರ್ಯಾರಂಭಕ್ಕೆ ಮೌಖಿಕ ಆದೇಶ:

ಇನ್ನೊಂದು ಸಂತಸ ಸುದ್ದಿ ಏನೆಂದರೆ, ಈಗಾಗಲೇ ಧಾರವಾಡ ಪಾಲಿಕೆಗೆ ಬೇಕಾದ ಮೂಲಭೂತ ಸೌಕರ್ಯಗಳ ಸೃಷ್ಟಿಗೆ ಅಧೀಕ್ಷಕ ಅಭಿಯಂತರರು ಮೌಖಿಕ ಆದೇಶ ನೀಡಿದ್ದು ಧಾರವಾಡ ಪಾಲಿಕೆ ಎಂಜಿನಿಯರ್‌ಗಳು ಈ ಕುರಿತು ಕಾರ್ಯಪ್ರವೃತ್ತರಾಗಿದ್ದಾರೆ. ಇಡೀ ಸಿವಿಲ್‌ ಎಂಜಿನಿಯರಿಂಗ್‌ ಸೇರಿದಂತೆ ಸ್ವಚ್ಛತಾ ಕಾರ್ಯ ನಿರ್ವಹಿಸುವ ಅಧೀಕ್ಷಕ ಎಂಜಿನಿಯರಿಂಗ್‌ ವಿಭಾಗ ಈಗ ಹುಬ್ಬಳ್ಳಿಯಲ್ಲಿದೆ. ವಾಣಿಜ್ಯ ಕಟ್ಟಡಗಳಿಗೆ ನೀಡುವ ಪರವಾನಗಿಯನ್ನು ನಗರ ಯೋಜನೆ ವಿಭಾಗ ನೀಡುತ್ತಿದ್ದು ಅದೂ ಸಹ ಹುಬ್ಬಳ್ಳಿಯಲ್ಲಿದೆ. ಅಕೌಂಟ್ಸ್‌, ಆರೋಗ್ಯ ವಿಭಾಗಗಳು ಸಹ ಹುಬ್ಬಳ್ಳಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಈ ಕಚೇರಿಗಳು ಧಾರವಾಡದಲ್ಲಿ ಸ್ಥಾಪನೆಯಾದರೆ, ಸ್ವತಂತ್ರ ಮಹಾನಗರ ಪಾಲಿಕೆ ಕಾರ್ಯಾರಂಭ ಮಾಡಬಹುದು.

ಇನ್ನುಳಿದಂತೆ, ಸಭಾಪತಿ ಕೊಠಡಿ, ಆಯುಕ್ತರ ಸಭಾಭವನ, ಕೌನ್ಸಿಲ್‌ ಕಚೇರಿಗಳು, ಆರೋಗ್ಯ ಕಚೇರಿಗಳು ನಿರ್ಮಾಣವಾಗಬೇಕು. ಸದ್ಯ ಧಾರವಾಡ ಪಾಲಿಕೆಯ ಪಾರ್ಕಿಂಗ್‌ ಸ್ಥಳದಲ್ಲಿ ಕೆಲವು ಕಚೇರಿಗಳ ನಿರ್ಮಾಣಕ್ಕಾಗಿ ಯೋಜನೆ ರೂಪಿಸಲಾಗುತ್ತಿದೆ. ಪಾಲಿಕೆ ಎಡಭಾಗದ ಖಾಲಿ ಜಾಗದಲ್ಲಿ ಸಾರ್ವಜನಿಕರಿಗೆ ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗುತ್ತದೆ. ಸದ್ಯದ ಪಾಲಿಕೆ ಮುಖ್ಯ ಕಟ್ಟಡದ ಹಿಂಬದಿ ಹೊಸ ಕಟ್ಟಡ ನಿರ್ಮಿಸಿದ್ದು, ಅದರ ಮೇಲೆ ಮತ್ತೊಂದು ಮಹಡಿ ನಿರ್ಮಾಣದ ಯೋಜನೆ ಸಿದ್ಧವಾಗಿದೆ.

ಶತಮಾನದ ಸಂಭ್ರಮ:

ಇನ್ನೊಂದು ವಿಶೇಷ ಎಂದರೆ, ಧಾರವಾಡದ ಪಾಲಿಕೆ ಕಚೇರಿ ಬ್ರಿಟಿಷರ ಕಾಲದ್ದು. 1927ರಿಂದ ಈ ಕಟ್ಟಡ ಕಾರ್ಯಾರಂಭ ಮಾಡಿದ್ದು, 2027ಕ್ಕೆ ಶತಮಾನ ಕಾಣಲಿದೆ. ಈ ಹಿನ್ನೆಲೆಯಲ್ಲಿ ಇದೇ ಸಮಯದಲ್ಲಿ ಈ ಕಟ್ಟಡದ ನವೀಕರಣ ಕಾಮಗಾರಿ ಸಹ ಆಗಬೇಕಿದೆ. ಹು-ಧಾ ಮಹಾನಗರ ಪಾಲಿಕೆಗೆ 2011ರಲ್ಲಿ ವೃಂದ ಮತ್ತು ನೇಮಕಾತಿಯನ್ನು 2001ರ ಜನಗಣತಿ ಪ್ರಕಾರ ಮಾಡಲಾಗಿತ್ತು. ಇದೀಗ ಪ್ರತ್ಯೇಕ ಪಾಲಿಕೆಯಾಗಿರುವ ಕಾರಣ, ಹೊಸದಾಗಿ ಸಿಬ್ಬಂದಿ ನೇಮಕಾತಿಗೆ ಈಗ ಉತ್ತಮ ಅವಕಾಶವಿದೆ.

ಆರ್ಥಿಕ ಸಮಸ್ಯೆ ಏನಿಲ್ಲ:

ಇನ್ನು, ಬಹಳಷ್ಟು ಜನರಿಗೆ ತಪ್ಪು ಕಲ್ಪನೆ ಇದೆ. ಧಾರವಾಡದಿಂದ ಅಷ್ಟೇನು ತೆರಿಗೆ ಸಂಗ್ರಹ ಆಗುವುದಿಲ್ಲ. ಪ್ರತ್ಯೇಕ ಪಾಲಿಕೆಯಿಂದಾಗಿ ಆರ್ಥಿಕ ತೊಂದರೆಗೆ ಒಳಗಾಗುತ್ತದೆ ಎಂದು. ಆದರೆ, ಈಗಾಗಲೇ ವಾರ್ಷಿಕ ₹ 48 ಕೋಟಿ ತೆರಿಗೆ ಪಡೆಯುತ್ತಿರುವ ಧಾರವಾಡ ಇನ್ಮುಂದೆ ಇನ್ನಷ್ಟು ಹೆಚ್ಚಿನ ಆದಾಯದ ಮೂಲ ಹುಡುಕಲಿದೆ. ಕೇಂದ್ರದ ಸ್ವಚ್ಛ ಭಾರತ ಯೋಜನೆ ಹಾಗೂ ಅಮೃತ ಯೋಜನೆ ಅಡಿ ಜನಸಂಖ್ಯೆ ಆಧಾರದ ಮೇಲೆ ಅನುದಾನ ಬರಲಿದೆ. ಇದಕ್ಕಿಂತ ಹೆಚ್ಚಾಗಿ ರಾಜ್ಯ ಸರ್ಕಾರ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ ಹಾಗೂ ವಿಶೇಷ ಅನುದಾನವಾಗಿ ಪ್ರತಿ ಪಾಲಿಕೆಗೂ ಅಷ್ಟೇ ಪ್ರಮಾಣದ ಅನುದಾನ ನೀಡುತ್ತಿದ್ದು, ಹೊಸ ಪಾಲಿಕೆಗೆ ಅನುದಾನ ಕೊರತೆ ಪ್ರಶ್ನೆಯೇ ಉದ್ಭವಿಸುವುದಿಲ್ಲ..

ಹೊಸ ಪಾಲಿಕೆ ಅಸ್ತಿತ್ವಕ್ಕೆ ಬಂದಾಗ ಪ್ರಾಮಾಣಿಕ, ಗಟ್ಟಿ ನಿರ್ಧಾರ ತೆಗೆದುಕೊಳ್ಳುವ ಅನುಭವಿ ಆಯುಕ್ತರ, ಅಧಿಕಾರಿಗಳ ಅಗತ್ಯವಿದೆ. ಶೇ. 100ರಷ್ಟು ಕರ ವಸೂಲಿ, ಸಮರ್ಥವಾಗಿ ಗಡಿ ನಿರ್ಧಾರ, ಪಾಲಿಕೆ ಆಸ್ತಿಗಳನ್ನು ಉಳಿಸಿಕೊಂಡು ಪಾಲಿಕೆಗೆ ಹೆಚ್ಚಿನ ಆದಾಯ ತರುವ ಯೋಜನೆ ಜಾರಿ ಮಾಡುವ, ಧಾರವಾಡದ ಸ್ವಚ್ಛತೆ, ಪೌರಕಾರ್ಮಿಕರ ನಿರ್ವಹಣೆ ಹಾಗೂ ವಿಶೇಷ ಅನುದಾನ ತಂದು ಧಾರವಾಡ ಅಭಿವೃದ್ಧಿ ವಿಷಯವಾಗಿ ಕಾಳಜಿಯ ಆಯುಕ್ತರು ಬೇಕು ಎನ್ನುವುದು ಧಾರವಾಡ ಜನರ ಆಶಯ.