ಸಾರಾಂಶ
ಬಸವರಾಜ ಹಿರೇಮಠ
ಧಾರವಾಡ:ಧಾರವಾಡದ ರೈಲು ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಹಸಿರಿನಿಂದ ಕಂಗೊಳಿಸುತ್ತಿದ್ದ, ಎಷ್ಟೇ ಅವಸರ ಇದ್ದರೂ ಈ ಜಾಗದಲ್ಲಿ ನಿಂತು ಸೆಲ್ಫಿ ತೆಗೆಸಿಕೊಳ್ಳುವಷ್ಟು ಮನಸ್ಸಾಗುತ್ತಿದ್ದ ಪರಿಸ್ಥಿತಿ ಈಗಿಲ್ಲ. ಐ ಲವ್ ಯೂ ಧಾರವಾಡ ಸೆಲ್ಫಿ ಪಾಯಿಂಟ್ ಮತ್ತು ಅದರ ಮೇಲಿರುವ ವಾಲ್ ಗಾರ್ಡನ್ ಸ್ಥಿತಿ ಈಗ ಅಯೋಮಯವಾಗಿದೆ.
ಕೋಟಿ ಕೋಟಿ ವ್ಯಯಿಸಿ ಧಾರವಾಡ ರೈಲು ನಿಲ್ದಾಣ ಅಭಿವೃದ್ಧಿಗೊಳಿಸಲಾಗಿದೆ. ಅದರ ಭಾಗವಾಗಿ ನಿಲ್ದಾಣದ ಎಡ ಬದಿ ಬಗೆ-ಬಗೆಯ ಅಲಂಕಾರಿಕ ಸಸ್ಯಗಳ ವಾಲ್ ಗಾರ್ಡನ್ ಮಾಡಲಾಗಿತ್ತು. ನಿಲ್ದಾಣದ ನವೀಕರಣ ಕಾರ್ಯ ಕೈಗೆತ್ತಿಕೊಂಡಾಗ ಸೌಂದರ್ಯ ಹೆಚ್ಚಳಕ್ಕಾಗಿ ಈ ಗಾರ್ಡನ್ ನಿರ್ಮಾಣದ ಕನಸು ನನಸಾಗಿ ರೂಪುಗೊಂಡಿತ್ತು. ಅಲ್ಲದೇ ಅದರ ಮುಂದೆ ಸೆಲ್ಫಿ ಪಾಯಿಂಟ್ ಕೂಡ ಮಾಡಲಾಗಿತ್ತು. ಧಾರವಾಡದ ಹೆಮ್ಮೆಯ ಭಾಗವಾಗಿದ್ದ ಈ ಸೆಲ್ಫಿ ಪಾಯಿಂಟ್ ಈಗ ಒಣಗಿದೆ. ಅಲ್ಲಿ ನಿಂತುಕೊಂಡು ಐ ಲವ್ ಯೂ ಧಾರವಾಡ ಎನ್ನುವ ನಾಮಫಲಕ ಮಾತ್ರ ಇದ್ದು ಹಸಿರು ಮಾಯವಾಗಿದೆ. ನಿರ್ವಹಣೆ ಕೊರತೆ ಎದ್ದು ಕಾಣುತ್ತಿದೆ. ₹ 10 ಲಕ್ಷ ವೆಚ್ಚದಲ್ಲಿ ವಾಲ್ ಗಾರ್ಡನ್ ನಿರ್ಮಿಸಲಾಗಿತ್ತು. ಆದರೆ ಇದೀಗ ಎಲ್ಲವೂ ಒಣಗಿದೆ.ಈ ವಾಲ್ ಗಾರ್ಡನ್‌ಗೆ ನೀರುಣಿಸಲು ಹನಿ ನೀರಾವರಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಮೂರು ದಿನಗಳಿಗೆ ಒಮ್ಮೆ ನೀರುಣಿಸಿದರೆ ಸಾಕಿತ್ತು. ಈ ಗೋಡೆ ಗಾರ್ಡನ್ ನಿರ್ಮಾಣದಿಂದ ಕಟ್ಟಡದ ಒಳಭಾಗದಲ್ಲಿ 5 ಡಿಗ್ರಿ ಉಷ್ಣಾಂಶ ಕಡಿಮೆಯಾಗುತ್ತಿತ್ತು. ಹೀಗಾಗಿ ಈ ವರ್ಟಿಕಲ್ ಗಾರ್ಡನ್ ಪರಿಸರ ಪ್ರಿಯರ ಹಾಗೂ ಸಾರ್ವಜನಿಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಉತ್ತರ ಕರ್ನಾಟಕದಲ್ಲಿಯೇ ಮೊದಲು ಎನ್ನುವ ಹೆಗ್ಗಳಿಕೆ ಪಾತ್ರವಾಗಿದ್ದ ಈ ಗಾರ್ಡನ್ ಸುಮಾರು ಸಾವಿರ ಚದರ ಅಡಿ ವಿಸ್ತೀರ್ಣದಾಗಿದೆ. ಇದಕ್ಕಾಗಿ ಒಟ್ಟು 4300 ಚಿಕ್ಕ ಚಿಕ್ಕ ಸಸಿಗಳನ್ನು ನೆಡಲಾಗಿತ್ತು. ಪ್ರಯಾಣಿಕರ ಕಣ್ಣಿಗೆ ಸ್ವರ್ಗದ ಅನುಭವ ತಂದು ಕೊಡುತ್ತಿದ್ದ ಈ ಗಾರ್ಡನ್ ಇದೀಗ ತನ್ನ ಅಂತಿಮ ಕ್ಷಣಗಳನ್ನು ಎಣಿಸುತ್ತಿದೆ. ಇದು ಸಹಜವಾಗಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಯಾವುದೇ ಸರ್ಕಾರದ ಇಂತಹ ಯೋಜನೆಗಳು ಆರಂಭದಲ್ಲಿ ಪರಿಸರ ಪ್ರಿಯ ಎನ್ನಿಸಿದರೂ ನಂತರದಲ್ಲಿ ಅವುಗಳ ಬಣ್ಣ ತಿಳಿಯಲಿದೆ ಎನ್ನುವುದಕ್ಕೆ ಧಾರವಾಡದ ರೈಲ್ವೆ ನಿಲ್ದಾಣವೇ ಸಾಕ್ಷಿ. ತುಸು ನಿರ್ವಹಣೆ ಅಂದರೆ ನೀರುಣಿಸಿದರೆ ಸಾಕಿತ್ತು ವಾಲ್ ಗಾರ್ಡನ್ ಎಂತಹ ಬಿಸಿಲಿನಲ್ಲೂ ನಳನಳಿಸುತ್ತಿತ್ತು. ಇಂದು ಹಸಿರಾಗಿ ಕಾಣುತ್ತಿತ್ತು. ಧಾರವಾಡದ ಹೆಮ್ಮೆಯಾಗಿದ್ದ ವಾಲ್ ಗಾರ್ಡನ್ ಎದುರು ನೂರಾರು ಜನ ಧಾರವಾಡ ಪ್ರಿಯರು ಸೆಲ್ಪಿ ತೆಗೆಸಿಕೊಂಡಿದ್ದು, ಈಗ ಅದೇ ಜಾಗದಲ್ಲಿ ಸೆಲ್ಫಿ ತೆಗೆದುಕೊಳ್ಳಲು ಅಸಹ್ಯ ಎನ್ನುವಂತಾಗಿದೆ. ಕೂಡಲೇ ರೈಲ್ವೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕೆಂದು ಪರಿಸರವಾದಿ ಶಂಕರ ಕುಂಬಿ ಆಗ್ರಹಿಸಿದರು.ರೈಲ್ವೆ ಸ್ಟೇಶನ್ ನವೀಕರಣ ವೇಳೆ ರೈಲ್ವೆ ಇಲಾಖೆ ಅಧಿಕಾರಿಗಳು ಅನೇಕ ಗಿಡಗಳನ್ನು ಕತ್ತರಿಸಿ, ಪರಿಸರ ಪ್ರಿಯರ ಕಂಗೆಣ್ಣಿಗೆ ಗುರಿಯಾಗಿದ್ದರು. ಆದರೆ ಆ ಸಿಟ್ಟನ್ನು ಈ ವಾಲ್ ಗಾರ್ಡನ್ ನಿರ್ಮಿಸಿ ಕಡಿಮೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಆದರೆ ಇದೀಗ ಈ ಗಾರ್ಡನ್ ದುಸ್ಥಿತಿ ನೋಡಿದರೆ ಅತ್ತ ಹಣವೂ ಹೋಯಿತು, ಇತ್ತ ನಿರ್ವಹಣೆ ಇಲ್ಲದೇ ಗಾರ್ಡನ್ ಕೂಡ ಒಣಗಿದೆ. ಒಟ್ಟಿನಲ್ಲಿ ಇದರ ನಿರ್ವಹಣೆಯಲ್ಲಿ ತೋರಿಸಿರುವ ನಿರ್ಲಕ್ಷದ ಬಗ್ಗೆ ರೈಲ್ವೆ ಇಲಾಖೆ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಿ ವಾಲ್ ಗಾರ್ಡನಗೆ ಮತ್ತೆ ಜೀವದಾನ ನೀಡಬೇಕಾಗಿದೆ.