ಸಾರಾಂಶ
ಧಾರವಾಡ: ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಧಾರವಾಡ ಜಿಲ್ಲೆಯು ಶೇ. 72.32ರಷ್ಟು ಫಲಿತಾಂಶ ಪಡೆಯುವ ಮೂಲಕ ರಾಜ್ಯದಲ್ಲಿ 17ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಕಳೆದ ಬಾರಿ ಜಿಲ್ಲೆಯು 23ನೇ ಸ್ಥಾನದಲ್ಲಿತ್ತು.
ಕಳೆದ ಮಾ. 1ರಿಂದ 20ರ ವರೆಗೆ ನಡೆದ ಪರೀಕ್ಷೆಯಲ್ಲಿ 25463 ವಿದ್ಯಾರ್ಥಿಗಳು ಹಾಜರಾಗಿ ಈ ಪೈಕಿ 18414 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಲಾ ವಿಭಾಗದಲ್ಲಿ ಶೇ. 55.21ರಷ್ಟು ಫಲಿತಾಂಶ ಬಂದಿದ್ದು, ಹುಬ್ಬಳ್ಳಿಯ ಎಸ್.ಕೆ. ಆರ್ಟ್ಸ್ ಎಚ್‌ಎಸ್‌ಕೆ ಪಿಯು ಕಾಲೇಜಿನ ವಿದ್ಯಾರ್ಥಿನಿ ಇನಿಷ್ಕಾ ನಡುಗಡ್ಡಿ 594 ಅಂಕಗಳನ್ನು ಪಡೆಯುವ ಮೂಲಕ ರಾಜ್ಯಕ್ಕೆ 4ನೇ ಸ್ಥಾನ ಹಾಗೂ ಜಿಲ್ಲೆಗೆ ಮೊದಲ ಸ್ಥಾನ ಪಡೆದಿದ್ದಾರೆ. ಹುಬ್ಬಳ್ಳಿಯ ಗೋಪನಕೊಪ್ಪ ಸರ್ಕಾರಿ ಪಿಯು ಕಾಲೇಜಿನ ನಾಗವೇಣಿ ರಾಯಚೂರ ಕಲಾ ವಿಭಾಗದಲ್ಲಿ 593 ಅಂಕ ಪಡೆದು ರಾಜ್ಯಕ್ಕೆ 6ನೇ ಸ್ಥಾನ ಹಾಗೂ ಜಿಲ್ಲೆಗೆ 2ನೇ ಸ್ಥಾನ ಪಡೆದಿದ್ದಾರೆ. ಕಲಘಟಗಿ ತಾಲೂಕಿನ ಗಳಗಿ ಹುಲಕೊಪ್ಪದ ಶಿವರಾಜದೇವಿ ಪಿಯು ಕಾಲೇಜಿನ ಅಶ್ವಿನಿ ಬದ್ನಿಗಟ್ಟಿ 582 ಅಂಕ ಪಡೆದು ಜಿಲ್ಲೆಗೆ ತೃತೀಯ ಸ್ಥಾನ ಪಡೆದಿದ್ದಾರೆ.ವಾಣಿಜ್ಯ ವಿಭಾಗದಲ್ಲಿ ಶೇ. 65.44ರಷ್ಟು ಫಲಿತಾಂಶ ಬಂದಿದ್ದು, ಹುಬ್ಬಳ್ಳಿಯ ವಿದ್ಯಾನಗರದ ಕೆಎಲ್‌ಇ ವಾಣಿಜ್ಯ ಕಾಲೇಜಿನ ಭುವಿ ಷಾ 592 ಅಂಕ ಪಡೆದು ಜಿಲ್ಲೆಗೆ ಪ್ರಥಮ ಸ್ಥಾನ ಪೆಡಿದ್ದಾಳೆ. ವಿದ್ಯಾನಗರ ಜೆ.ಜಿ. ಪಿಯು ಕಾಲೇಜಿನ ಶ್ರೇಯಾ ಜೋಶಿ ಹಾಗೂ ಕರ್ನಾಟಕ ಕಾಲೇಜಿನ ಸೌಜನ್ಯಾ ಕುಲಕರ್ಣಿ 591 ಅಂಕ ಪಡೆದು ದ್ವಿತೀಯ ಸ್ಥಾನ ಹಾಗೂ ಹುಬ್ಬಳ್ಳಿಯ ಚಿನ್ಮಯ ಕಾಲೇಜಿನ ಚಿನ್ಮಯ ಆದಿತ್ಯ 590 ಅಂಕ ಪಡೆದು ಜಿಲ್ಲೆಗೆ ತೃತೀಯ ಸ್ಥಾನ ಪಡೆದಿದ್ದಾರೆ.
ಹಾಗೆಯೇ, ವಿಜ್ಞಾನ ವಿಭಾಗದಲ್ಲಿ ಶೇ. 84.29ರಷ್ಟು ಫಲಿತಾಂಶ ಬಂದಿದ್ದು, ಹುಬ್ಬಳ್ಳಿಯ ವಿದ್ಯಾನಿಕೇತನ ಪಿಯು ಕಾಲೇಜಿನ ಸುಮೀತ ರಾಶಿನಕರ 594 ಅಂಕ ಪಡೆದು ರಾಜ್ಯಕ್ಕೆ 6ನೇ ರ್‍ಯಾಂಕ್ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾನೆ. ಇದೇ ಕಾಲೇಜಿನ ಅಭಿನವ ಹಿರೇಕುಂಬಿ, ಶ್ರೀಶೈಲ ಭಂಡಿವಾಡ ಹಾಗೂ ಧಾರವಾಡದ ವಿದ್ಯಾ ಹಂಚಿನಮನಿ ಕಾಲೇಜಿನ ಕಾವೇರಿ ಕೇವಟಿ 592 ಅಂಕ ಪಡೆದು ರಾಜ್ಯಕ್ಕೆ 8ನೇ ಸ್ಥಾನ ಪಡೆದಿದ್ದಾರೆ. ಹಾಗೆಯೇ, ವಿದ್ಯಾ ಪಿ. ಹಂಚಿನಮನಿ ಕಾಲೇಜಿನ ಆಯುಷ್ ಜೋಗಳೇಕರ 591 ಅಂಕ ಪಡೆದು ರಾಜ್ಯಕ್ಕೆ 9ನೇ ರ್‍ಯಾಂಕ್ ಹಾಗೂ ಜಿಲ್ಲೆಗೆ ತೃತೀಯ ಸ್ಥಾನ ಪಡೆದಿದ್ದಾನೆ.ಪಿಯುಸಿ ಪರೀಕ್ಷೆಯ ಮೂರು ವಿಭಾಗಗಳಲ್ಲಿ ಉತ್ತಮ ಅಂಕ ಪಡೆದು ರಾಜ್ಯ ಹಾಗೂ ಜಿಲ್ಲೆಗೆ ರ್‍ಯಾಂಕ್ ಪಡೆದ ಅಭ್ಯರ್ಥಿಗಳಿಗೆ ಜಿಲ್ಲಾಧಿಕಾರಿ ದಿವ್ಯಪ್ರಭು ಸಿಹಿ ತಿನ್ನಿಸಿ ಅಭಿನಂದಿಸಿದರು.
ಅಲ್ಲದೇ, ಸುದ್ದಿಗಾರರೊಂದಿಗೆ ಮಾತನಾಡಿ, ಎಸ್ಸೆಸ್ಸೆಲ್ಸಿ ಪರೀಕ್ಷೆ ಸುಧಾರಣೆ ಹಿನ್ನೆಲೆಯಲ್ಲಿ ಮಿಷನ್ ವಿದ್ಯಾಕಾಶಿ ರೀತಿಯಲ್ಲಿಯೇ ಬರುವ ದಿನಗಳಲ್ಲಿ ಪಿಯುಸಿ ಫಲಿತಾಂಶ ಸುಧಾರಣೆಗೂ ಪ್ರಯತ್ನ ಮಾಡಲು ಉಪ ನಿರ್ದೇಶಕರಿಗೆ ಸೂಚನೆ ನೀಡಲಾಗಿದೆ. ಮುಂದಿನ ವರ್ಷದಲ್ಲಿ ಪಿಯುಸಿ ಫಲಿತಾಂಶ ಏರಿಕೆಯಾಗಿ ರಾಜ್ಯದಲ್ಲಿ ಧಾರವಾಡ ಜಿಲ್ಲೆಯು 5ನೇ ಸ್ಥಾನಕ್ಕೆ ಏರುವಂತೆ ಪ್ರಯತ್ನಿಸಲಾಗುವುದು ಎಂದರು. ಈ ಸಂಧರ್ಭದಲ್ಲಿ ಜಿಪಂ ಸಿಇಒ ಭುವನೇಶ ಪಾಟೀಲ, ಪದವಿಪೂರ್ವ ಕಾಲೇಜು ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸುರೇಶ ಕೆ.ಪಿ. ಇದ್ದರು.ಕೆಎಎಸ್ ಮಾಡುವ ಗುರಿ593 ಅಂಕ ಪಡೆದು ಕಲಾ ವಿಭಾಗದಲ್ಲಿ ರಾಜ್ಯಕ್ಕೆ 6ನೇ ಸ್ಥಾನ ಹಾಗೂ ಜಿಲ್ಲೆಗೆ 2ನೇ ಸ್ಥಾನ ಪಡೆದಿದ್ದು ಹೆಮ್ಮೆ ಎನಿಸುತ್ತಿದೆ. ಗ್ರಾಮೀಣ ಪ್ರದೇಶದಿಂದ ಬಂದ ನಾನು ಜಿಲ್ಲೆಗೆ ರ್‍ಯಾಂಕ್ ಬರುತ್ತೇನೆಂದು ಅಂದುಕೊಂಡಿರಲಿಲ್ಲ. ಬಿ.ಎ. ಪದವಿ ಮಾಡುತ್ತಲೇ ಸ್ಪರ್ಧಾತ್ಮಕ ಪರೀಕ್ಷೆಗೆ ಓದುತ್ತೇನೆ. ಈ ಮೂಲಕ ಕೆಎಎಸ್ ಮಾಡುವ ಗುರಿ ಹೊಂದಿದ್ದೇನೆ.
- ನಾಗವೇಣಿ ರಾಯಚೂರ.ನ್ಯಾಯಾಲಯದಲ್ಲಿ ಸೇವೆ ಸಲ್ಲಿಸುವ ಆಶಯವಿದ್ಯಾನಗರ ಜೆ.ಜಿ. ಪಿಯು ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಪಿಯುಸಿ ಓದಿದ್ದು, 591 ಅಂಕ ಪಡೆದು ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದೇನೆ. ಬಿಎ ಎಲ್‌ಎಲ್‌ಬಿ ಮಾಡಿ ನ್ಯಾಯಾಲಯದಲ್ಲಿ ಸೇವೆ ಸಲ್ಲಿಸುವ ಆಶಯವಿದೆ.
-ಶ್ರೀಯಾ ಜೋಶಿನೀಟ್ ಪ್ರಯತ್ನಧಾರವಾಡದ ವಿದ್ಯಾ ಹಂಚಿನಮನಿ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ 592 ಅಂಕ ಪಡೆದು ರಾಜ್ಯಕ್ಕೆ 8ನೇ ಸ್ಥಾನ ಹಾಗೂ ಜಿಲ್ಲೆಗೆ 2ನೇ ಸ್ಥಾನ ಪಡೆದಿದ್ದು, ವೈದ್ಯೆ ಆಗುವ ಹಿನ್ನೆಲೆಯಲ್ಲಿ ನೀಟ್ ಪ್ರಯತ್ನ ಮಾಡುತ್ತಿದ್ದೇನೆ.
-ಕಾವೇರಿ ಕೇವಟಿ