ನಾಳೆ ಧಾರವಾಡ ಐಐಐಟಿ 7ನೇ ಘಟಿಕೋತ್ಸವ: ಡಾ. ಮಹಾದೇವ ಪ್ರಸನ್‌

| Published : Jul 02 2025, 11:49 PM IST

ಸಾರಾಂಶ

ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ (ಸಿಎಸ್ಇ) ಯಿಂದ 131, ಡೇಟಾ ಸೈನ್ಸ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (DSAI) ನಿಂದ 69, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ (ECE) ದಿಂದ 54 ವಿದ್ಯಾರ್ಥಿಗಳು ಸೇರಿ ಒಟ್ಟು 254 ಪದವಿಧರರು ಪದವಿ ಸ್ವೀಕರಿಸಲಿದ್ದಾರೆ.

ಧಾರವಾಡ: ದಶಮಾನೋತ್ಸವದ ಸಂಭ್ರಮದಲ್ಲಿರುವ ಇಲ್ಲಿಯ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆ (ಐಐಐಟಿ)ಯು ತನ್ನ 7ನೇ ಘಟಿಕೋತ್ಸವವನ್ನು ಜು. 4 ರಂದು ಹಮ್ಮಿಕೊಂಡಿದೆ ಎಂದು ನಿರ್ದೇಶಕ ಡಾ. ಮಹಾದೇವ ಪ್ರಸನ್‌ ಹೇಳಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ ಮಹಾನಿರ್ದೇಶಕ ಎನ್. ಕಲೈಸೆಲ್ವಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ಐಐಐಟಿ ಧಾರವಾಡದ ಅಧ್ಯಕ್ಷ ಹಾಗೂ ಕೈಗಾರಿಕೋದ್ಯಮಿ ಡಾ. ಶ್ರೀಧರ್ ವೆಂಬು ವಹಿಸಲಿದ್ದಾರೆ. ಈ ವರ್ಷ ಒಟ್ಟು 254 ಪದವಿ ವಿದ್ಯಾರ್ಥಿಗಳು ಮತ್ತು ಓರ್ವ ಪಿಎಚ್‌ಡಿ ವಿದ್ಯಾರ್ಥಿಗೆ ಪದವಿಗಳನ್ನು ಪ್ರದಾನ ಮಾಡಲಾಗುವುದು ಎಂದರು.

160ಕ್ಕೂ ಹೆಚ್ಚು ಉದ್ಯೋಗ: ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ (ಸಿಎಸ್ಇ) ಯಿಂದ 131, ಡೇಟಾ ಸೈನ್ಸ್ ಮತ್ತು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (DSAI) ನಿಂದ 69, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ (ECE) ದಿಂದ 54 ವಿದ್ಯಾರ್ಥಿಗಳು ಸೇರಿ ಒಟ್ಟು 254 ಪದವಿಧರರು ಪದವಿ ಸ್ವೀಕರಿಸಲಿದ್ದಾರೆ ಎಂದ ಅವರು, ಧಾರವಾಡದ ಐಐಐಟಿ 160ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಪಡೆದಿದ್ದು, ಅತ್ಯಧಿಕ ವಾರ್ಷಿಕ ₹71.94 ಲಕ್ಷ ವೇತನ ಪಡೆಯುತ್ತಿದ್ದಾರೆ. ಸುಮಾರು 40 ವಿದ್ಯಾರ್ಥಿಗಳು ಭಾರತ ಮತ್ತು ವಿದೇಶಗಳಲ್ಲಿನ ಪ್ರತಿಷ್ಠಿತ ವಿವಿಗಳಲ್ಲಿ ಉನ್ನತ ಅಧ್ಯಯನ ಆರಿಸಿಕೊಂಡಿದ್ದಾರೆ ಎಂಬುದು ಸಂಸ್ಥೆಗೆ ಹೆಮ್ಮೆಯ ವಿಷಯ ಎಂದು ಡಾ. ಮಹಾದೇವ ಪ್ರಸನ್‌ ತಿಳಿಸಿದರು.

ಐಐಐಟಿ ಡೀನ್‌ ಡಾ.ಕೆ. ಗೋಪಿನಾಥ ಮಾತನಾಡಿ, ಕ್ಯಾಂಪಸ್‌ನಲ್ಲಿ 2ನೇ ಹಂತದ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದ್ದು, 1000 ವಿದ್ಯಾರ್ಥಿಗಳ ಹಾಸ್ಟೇಲ್‌, ಅಕಾಡೆಮಿಕ್ ಬ್ಲಾಕ್‌, ಕ್ರೀಡಾಂಗಣ ಕಾಮಗಾರಿ ನಡೆಯುತ್ತಿದೆ. ವಿದ್ಯಾರ್ಥಿಗಳ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಕಳೆದ ವರ್ಷ 1250 ಇದ್ದ ಸಂಖ್ಯೆ ಈ ವರ್ಷ 1450ಕ್ಕೆ ಏರಿಕೆಯಾಗಿದ್ದು ಎರಡು ವರ್ಷಗಳಲ್ಲಿ 2 ಸಾವಿರ ಮುಟ್ಟಲಿದೆ ಎಂದರು.

ಐಐಐಟಿ ಸಂಶೋಧನಾ ಮುಖ್ಯಸ್ಥ ಡಾ. ದೀಪಕ ಮಾತನಾಡಿ, ನಮ್ಮ ಸಂಸ್ಥೆಯು ಅತ್ಯಾಧುನಿಕ ಸಂಶೋಧನೆ, ತಂತ್ರಜ್ಞಾನ ಅಭಿವೃದ್ಧಿ ಮತ್ತು ಉದ್ಯಮ ನಿರ್ಮಾಣದತ್ತ ಹೆಚ್ಚು ಒಲವು ತೋರುತ್ತಿದೆ. ಸ್ಟಾರ್ಟ್ಅಪ್ ಇನ್ಕ್ಯುಬೇಶನ್ ಮತ್ತು ಯುವ ಉದ್ಯಮಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಅಗ್ರಿಟೆಕ್, ಆರೋಗ್ಯ ತಂತ್ರಜ್ಞಾನ, ಎಡ್ಟೆಕ್, ಆಟೋಟೆಕ್, ಡೀಪ್ ಟೆಕ್, ವಾಣಿಜ್ಯ ಟೆಕ್, ಸೈಬರ್ ಭದ್ರತೆಯಲ್ಲಿ ನವೋದ್ಯಮಗಳಿಗೆ ಮಾರ್ಗದರ್ಶನ, ಮಾರುಕಟ್ಟೆಗಳಿಗೆ ಪ್ರವೇಶ, ಮೂಲಮಾದರಿ ಪ್ರಯೋಗಾಲಯಗಳು ಮತ್ತು ಹಣಕಾಸು ಅವಕಾಶಗಳ ಮೂಲಕ ಬೆಂಬಲ ನೀಡಲಾಗುತ್ತದೆ ಎಂದರು.

ರಿಜಿಸ್ಟ್ರಾರ್ ಡಾ. ಮುರುಗನಾಥಂ ಪೊನ್ನುಸ್ವಾಮಿ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರೊ. ಪರ್ವತಿ ಇದ್ದರು.