ಸಾರಾಂಶ
ವಿಶೇಷ ವರದಿ
ಧಾರವಾಡ:ಕಳೆದ ಎರಡ್ಮೂರು ವರ್ಷಗಳ ಕಾಲ ಅತಿಯಾದ ಮಳೆಯಿಂದ ತಣ್ಣಗಿದ್ದ ಧಾರವಾಡದ ಪರಿಸರವು ಈ ವರ್ಷ ಬರಗಾಲ ಸೃಷ್ಟಿಯಾಗಿ ಬಿರು ಬಿಸಿಲಿನ ತಾಪಕ್ಕೆ ಕೆಂಡದಂತಾಗಿದೆ.
ಸಂಕ್ರಮಣ ನಂತರದಿಂದ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಹೋಳಿ ಹುಣ್ಣಿಮೆ ನಂತರವಂತೂ ಮಿತಿ ಮೀರಿದೆ. ನಿತ್ಯ ಗರಿಷ್ಠ 39 ಡಿಗ್ರಿ ವರೆಗೂ ತಾಪಮಾನ ತೋರುತ್ತಿದ್ದು, ಮಕ್ಕಳು, ವಯೋವೃದ್ಧರು ಬಿಸಿಲಿನ ಹೊಡೆತಕ್ಕೆ ಅನಾರೋಗ್ಯಕ್ಕೆ ಒಳಗಾಗುವಂತಾಗಿದೆ. ಶಾಲೆಗಳಿಗೆ ರಜೆ ಘೋಷಣೆಯಾಗಿದ್ದು ಪ್ರಾಥಮಿಕ ಶಾಲಾ ಮಕ್ಕಳು ಸಂಜೆ ಹೊತ್ತು ಹೊರತುಪಡಿಸಿ ಇಡೀ ದಿನ ಆಟವಾಡಲು ಹೋಗದ ಸ್ಥಿತಿ ಉಂಟಾಗಿದೆ. ಹೈಸ್ಕೂಲ್ ಮಕ್ಕಳು ಟ್ಯೂಶನ್ ಸೇರಿದಂತೆ ಹೆಚ್ಚಿನ ಅಭ್ಯಾಸಕ್ಕೆ ಹೊರಗೆ ಹೋಗದಂತಾಗಿದೆ. ಬೆಳಗ್ಗೆ 10ರಿಂದ ಸಂಜೆ 5ರ ವರೆಗೂ ತೀವ್ರ ಬಿಸಿಲಿನಿಂದ ಜನರು ತತ್ತರಿಸಿ ಹೋಗಿದ್ದು, ಕಲ್ಲಂಗಡಿ, ಕರ್ಬೂಜ್, ದ್ರಾಕ್ಷಿ ಸೇರಿದಂತೆ ಹಣ್ಣು-ಹಂಪಲ, ಜ್ಯೂಸ್‌ಗಳಿಗೆ ಮೊರೆ ಹೋಗುವಂತಾಗಿದೆ.ಇನ್ನು, ಗ್ರಾಮೀಣ ಪ್ರದೇಶದಲ್ಲಿ ಕೆರೆ-ಕಟ್ಟೆ, ಹಳ್ಳ-ಕೊಳ್ಳ ಬತ್ತಿ ಹೋಗಿದ್ದು ದನಕರುಗಳಿಗೆ ನೀರಿನ ಕೊರತೆ ಉಂಟಾಗಿದೆ. ಕೊಳವೆ ಬಾವಿಗಳ ಮೂಲಕ ದನಕರುಗಳಿಗೆ ನೀರು ಕುಡಿಸುವ ಸ್ಥಿತಿ ಬಂದಿದೆ. ಇನ್ನು, ಆರೋಗ್ಯದ ದೃಷ್ಟಿಯಿಂದ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಮಾರ್ಚ್ ಹಾಗೂ ಏಪ್ರಿಲ್ ತಿಂಗಳು ತುಸು ಎಚ್ಚರಿಕೆಯಿಂದ ಜೀವನ ನಡೆಸಲು ಸೂಚಿಸಿದೆ. ಬರೀ ಬಿಸಿಲಿನ ತಾಪ ಮಾತ್ರವಲ್ಲದೇ ಬರುವ ದಿನಗಳಲ್ಲಿ ಬಿಸಿ ಗಾಳಿ ಬೀಸುವ ಸಾಧ್ಯತೆಗಳನ್ನು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ತಾಪದಿಂದ ಏನಾಗ್ತದೆ:ಸಾಮಾನ್ಯವಾಗಿ ಹೆಚ್ಚಿನ ತಾಪಮಾನದಿಂದ ದೇಹದ ನಿರ್ಜಲೀಕರಣ, ಶಾಖ ಸೆಳತ, ಶಾಖದ ಬಳಲಿಕೆ ಅಥವಾ ಶಾಖದ ಅಘಾತದಂತಹ ಆರೋಗ್ಯದ ದುಷ್ಟರಿಣಾಮಗಳು ಉಂಟಾಗುವ ಸಾಧ್ಯತೆ ಇದೆ. ಶಾಖ ಸಳೆತಗಳಿಂದ ಮೂರ್ಛೆ ಕಾಣಿಸುತ್ತದೆ. ಶಾಖದಿಂದ ಆಯಾಸ, ದೌರ್ಬಲ್ಯ, ತಲೆ ತಿರುಗುವಿಕೆ, ತಲೆ ನೋವು, ವಾಕರಿಕೆ, ವಾಂತಿ, ಸ್ನಾಯು ಸೆಳೆತ ಮತ್ತು ಬೆವರುವುದು ಉಂಟಾಗುತ್ತದೆ. ಉಸಿರಾಟದಲ್ಲಿ ವ್ಯತ್ಯಯ ಮತ್ತು ಪ್ರಜ್ಞ ತಪ್ಪುವುದು ಉಂಟಾಗಬಹುದು. ಅದರಲ್ಲೂ ಮಕ್ಕಳು ಈ ಸಮಯದಲ್ಲಿ ಎಚ್ಚರದಿಂದ ಇರಬೇಕೆಂದು ಮಕ್ಕಳ ವೈದ್ಯರಾದ ಡಾ. ಕವನ ದೇಶಾಪಂಡೆ ಎಚ್ಚರಿಸುತ್ತಾರೆ.
ಹೀಗೆ ಮಾಡಿ:ಬಿಸಿಲು, ತಾಪಮಾನ ಹಾಗೂ ಅನಾರೋಗ್ಯದಿಂದ ಕಾಪಾಡಿಕೊಳ್ಳಲು ಹವಾಮಾನ ಇಲಾಖೆ ಹಾಗೂ ವೈದ್ಯರು ಕೆಲವು ಸಲಹೆಗಳನ್ನು ನೀಡಿದ್ದಾರೆ. ಸಾಧ್ಯವಾದಷ್ಟು ಮಟ್ಟಿಗೆ ವಿಶೇಷವಾಗಿ ಗರಿಷ್ಠ ತಾಪಮಾನದ ಅವಧಿಯಲ್ಲಿ ಬಿಸಿಲಿನಲ್ಲಿ ಹೋಗುವುದನ್ನು ತಪ್ಪಿಸುವುದು (ಮಧ್ಯಾಹ್ನ 12 ರಿಂದ 3ರ ವರೆಗೆ), ಕಾಲಕಾಲಕ್ಕೆ ಸಾಕಷ್ಟು ನೀರು ಕುಡಿಯಬೇಕು, ಹಗುರವಾದ, ತಿಳಿ ಬಣ್ಣದ ಸಡಿಲವಾದ ಮತ್ತು ಹತ್ತಿಬಟ್ಟೆ ಧರಿಸುವುದು, ಬಿಸಿಲಿನಲ್ಲಿ ಹೋಗುವಾಗ ರಕ್ಷಣೆಗಾಗಿ ಕನ್ನಡಕ, ಛತ್ರಿ, ಟೋಪಿ, ಬೂಟು ಅಥವಾ ಚಪ್ಪಲಿ ಬಳಸುವುದು. ಹೊರಗಿನ ಉಷ್ಣತೆಯು ಅಧಿಕವಾಗಿರುವಾಗ ಶ್ರಮದಾಯಕ ಚಟುವಟಿಕೆ ತಪ್ಪಿಸುವುದು, ಪ್ರಯಾಣ ಮಾಡುವಾಗ, ನೀರನ್ನು ಜತೆಯಲ್ಲಿ ಒಯ್ಯುವುದು, ದೇಹವನ್ನು ನಿರ್ಜಲೀಕರಣಗೊಳಿಸದಂತೆ ಎಚ್ಚರ ವಹಿಸಲು ತಿಳಿಸಿದ್ದಾರೆ.
ದ್ರವರೂಪ ಸೇವಿಸಿ:ಮೂರ್ಛೆ ಅಥವಾ ಅನಾರೋಗ್ಯ ಅನಿಸಿದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಬೇಕು. ನಿಂಬೆ ನೀರು, ಮಜ್ಜಿಗೆ ಮುಂತಾದ ಮನೆಯಲ್ಲಿ ತಯಾರಿಸಿದ ಪಾನೀಯಗಳು ಮತ್ತು ಒಆರ್‌ಎಸ್ ಬಳಸುವುದು. ಸಾಕುಪ್ರಾಣಿಗಳನ್ನು ನೆರಳಿನಲ್ಲಿ ಇರಿಸಿ ಮತ್ತು ಅವುಗಳಿಗೆ ಕುಡಿಯಲು ಸಾಕಷ್ಟು ನೀರು ಒದಗಿಸುವುದು. ಮನೆಯನ್ನು ತಂಪಾಗಿರಿಸಲು ಪರದೆಗಳು, ಶಟರ್‌ಗಳು ಅಥವಾ ಸನ್‌ಶೇಡ್ ಬಳಸುವುದು ಸೂಕ್ತವೆಂದು ತಿಳಿಸಲಾಗಿದೆ.