ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ಆಡಳಿತದಿಂದ ಧಾರವಾಡ ಮುಕ್ತಗೊಳಿಸಿ ಅಭಿವೃದ್ಧಿಗೆ ಅನುಕೂಲ ಮಾಡಿಕೊಡಿ ಎಂದು ಪಾಲಿಕೆ ಕೇಂದ್ರ ಕಚೇರಿ ಎದುರು ನಡೆದ ಬೃಹತ್ ಪ್ರತಿಭಟನೆಯಲ್ಲಿ ವಿವಿಧ ಸಮುದಾಯಗಳು, ಮುಖಂಡರು ಹಾಗೂ ಸಾರ್ವಜನಿಕರು ನಾಮಫಲಕವನ್ನು ಮೆರವಣಿಗೆ ಮೂಲಕ ತಂದು ಕಚೇರಿ ಮೇಲ್ಭಾಗದಲ್ಲಿ ಅಳವಡಿಸಿದರು.

ಧಾರವಾಡ:

ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ರಚಿಸಬೇಕೆಂದು ಆಗ್ರಹಿಸಿ ನಡೆಯುತ್ತಿರುವ ಹೋರಾಟದ ಭಾಗವಾಗಿ ಬುಧವಾರ ಹೋರಾಟಗಾರರು ಇಲ್ಲಿನ ಮಹಾನಗರ ಕಚೇರಿಗೆ "ಧಾರವಾಡ ಮಹಾನಗರ ಪಾಲಿಕೆ " ಎಂದು ನಾಮಕರಣ ಮಾಡುವ ಮೂಲಕ ಹೋರಾಟ ಚುರುಕುಗೊಳಿಸಿದ್ದಾರೆ.

ಹುಬ್ಬಳ್ಳಿ-ಧಾರವಾಡ ಅವಳಿ ನಗರಗಳ ಆಡಳಿತದಿಂದ ಧಾರವಾಡ ಮುಕ್ತಗೊಳಿಸಿ ಅಭಿವೃದ್ಧಿಗೆ ಅನುಕೂಲ ಮಾಡಿಕೊಡಿ ಎಂದು ಪಾಲಿಕೆ ಕೇಂದ್ರ ಕಚೇರಿ ಎದುರು ನಡೆದ ಬೃಹತ್ ಪ್ರತಿಭಟನೆಯಲ್ಲಿ ವಿವಿಧ ಸಮುದಾಯಗಳು, ಮುಖಂಡರು ಹಾಗೂ ಸಾರ್ವಜನಿಕರು ನಾಮಫಲಕವನ್ನು ಮೆರವಣಿಗೆ ಮೂಲಕ ತಂದು ಕಚೇರಿ ಮೇಲ್ಭಾಗದಲ್ಲಿ ಅಳವಡಿಸಿದರು.

ಹಿರಿಯ ನಟ ಹಾಗೂ ಪರಿಸರವಾದಿ ಸುರೇಶ ಹೆಬ್ಳೀಕರ ಭಾಗವಹಿಸಿ, ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆಯ ಸ್ಥಾಪನೆ ಅವಶ್ಯಕ. ಧಾರವಾಡವು ಇತಿಹಾಸ ಪ್ರಸಿದ್ಧ ಕೆರೆ ಹಾಗೂ ಸಮೃದ್ಧ ಪರಿಸರ ಹೊಂದಿರುವ, ಕಲಾವಿದರು ಮತ್ತು ಸಾಹಿತಿಗಳ ತವರೂರಾಗಿದೆ. ಇಲ್ಲಿನ ವಿಶಿಷ್ಟ ಸಂಸ್ಕೃತಿ ಮತ್ತು ನೈಸರ್ಗಿಕ ಸಂಪತ್ತನ್ನು ಉಳಿಸಿಕೊಳ್ಳಲು ಹಾಗೂ ಸ್ವತಂತ್ರ ಅಭಿವೃದ್ಧಿ ಕಾಣಲು ಪ್ರತ್ಯೇಕ ಪಾಲಿಕೆಯೊಂದೇ ಏಕೈಕ ಮಾರ್ಗ ಎಂದು ಪ್ರತಿಪಾದಿಸಿದರು.

ಹೋರಾಟಗಾರ ಗುರುರಾಜ ಹುಣಸಿಮರ ಮಾತನಾಡಿ, ಬಿಜೆಪಿ ಮುಖಂಡರು ಅದರಲ್ಲೂ ಶಾಸಕ ಅರವಿಂದ ಬೆಲ್ಲದ ಪ್ರತ್ಯೇಕ ಪಾಲಿಕೆ ವಿಚಾರದಲ್ಲಿ ಧಾರವಾಡದ ಜನತೆಗೆ ದ್ರೋಹ ಬಗೆದಿದ್ದಾರೆ. ಮುಂಬರುವ ದಿನಗಳಲ್ಲಿ ಇಲ್ಲಿನ ಸಾರ್ವಜನಿಕರು ಅವರಿಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಎಚ್ಚರಿಸಿದರು.

ಸಮುದಾಯಗಳ ಬೆಂಬಲ:

ಈ ನ್ಯಾಯಸಮ್ಮತ ಹೋರಾಟಕ್ಕೆ ಕ್ಷತ್ರಿಯ ಸಮಾಜವು ತನ್ನ ಸಂಪೂರ್ಣ ಬೆಂಬಲ ಪ್ರಕಟಿಸಿದೆ. ಜಿಲ್ಲಾ ಮಾದಿಗರ ಸಮಾಜದ ಮುಖಂಡರಾದ ಅಶೋಕ ದೊಡಮನಿ, ವೆಂಕಟೇಶ ಸಗಬಾಳ, ಹನಮಂತ ಮರಡಗಿ ಹಾಗೂ ಅರ್ಜುನ್ ಪತ್ರೆನ್ನವರ ಹೋರಾಟದಲ್ಲಿ ಪಾಲ್ಗೊಂಡು ಧ್ವನಿಗೂಡಿಸಿದರು. ನಿವೃತ್ತ ಅರಣ್ಯ ಇಲಾಖೆ ಅಧಿಕಾರಿಗಳ ಸಂಘದ ಪರವಾಗಿ ಶಂಕರ ಸಾದನಿ ಮಾತನಾಡಿದರು. ಮುಖಂಡರಾದ ವೆಂಕಟೇಶ ಮಾಚಕನೂರ, ಅರವಿಂದ ಏಗನಗೌದರ, ರಾಜಶೇಖರ ಕಮತಿ, ವಿಠ್ಠಲ್ ಕಮ್ಮಾರ, ಎಸ್.ಸಿ. ನೀರಾವರಿ, ವಸಂತ ಅರ್ಕಚಾರ, ರವಿ ಮಳಿಗೇರ್‌, ಪ್ರಕಾಶ ಘಾಟಗೆ, ಕವಿತಾ ಕಬ್ಬೆರ, ದೀಪಾ ನೀರಲಕಟ್ಟಿ, ನವೀನ್ ಕದಂ ಇದ್ದರು. ನಗರದ ಸಿ.ಬಿ. ನಗರ, ನವಲೂರು, ಸತ್ತೂರು, ಕಲ್ಯಾಣನಗರ ಹಾಗೂ ಶಿವಗಿರಿ ಬಡಾವಣೆಗಳಿಂದ ನೂರಾರು ಹಿರಿಯರು ಮತ್ತು ಯುವಕರು ಸ್ವಯಂಪ್ರೇರಿತರಾಗಿ ಪಾಲ್ಗೊಂಡು ಹೋರಾಟಕ್ಕೆ ಸಾಥ್ ನೀಡಿದರು.