ಸಾರಾಂಶ
ಧಾರವಾಡ: ಪಂ.ಪಂಚಾಕ್ಷರಿ ಗವಾಯಿಗಳು, ಡಾ. ಮಲ್ಲಿಕಾರ್ಜುನ ಮನಸೂರ, ಭೀಮಸೇನ ಜೋಶಿ, ಗಂಗೂಬಾಯಿ ಹಾನಗಲ್, ಡಾ. ಪುಟ್ಟರಾಜ ಗವಾಯಿಗಳಂಥ ಅನೇಕ ದಿಗ್ಗಜರು ತಮ್ಮ ಅಮೋಘ ಸಾಧನೆಯಿಂದ ಧಾರವಾಡ ನೆಲಕ್ಕೆ ಘನತೆ ತಂದು ಕೊಟ್ಟಿದ್ದಾರೆ ಎಂದು ಸ್ತ್ರೀರೋಗ ತಜ್ಞರಾದ ಡಾ. ಸೌಭಾಗ್ಯ ಕುಲಕರ್ಣಿ ಹೇಳಿದರು.
ಇಲ್ಲಿಯ ಆಲೂರು ವೆಂಕಟರಾವ್ ಸಾಂಸ್ಕೃತಿಕ ಭವನದಲ್ಲಿ ಏರ್ಪಡಿಸಿದ್ದ ಪಂ. ಶಂಕ್ರಪ್ಪ ಮತ್ತು ಭೀಮಾಬಾಯಿ ಹೂಗಾರ 40ನೇ ಪುಣ್ಯಸ್ಮರಣೋತ್ಸವ ಉದ್ಘಾಟಿಸಿ ಮಾತನಾಡಿದರು.ಧಾರವಾಡ ಸಂಗೀತದ ನೆಲ, ದೇಶದಲ್ಲಿಯೇ ಇದಕ್ಕೊಂದು ಮಹತ್ವದ ಸ್ಥಾನವಿದೆ. ಶ್ರೀಮಂತ ಸಂಸ್ಕೃತಿ ಹೊಂದಿದ ನಗರವಿದು. ಪ್ರಸ್ತುತ ಯುವ ಪೀಳಿಗೆ ಸಂಗೀತದತ್ತ ಒಲವು ತೋರುತ್ತಿರುವುದು ಧನಾತ್ಮಕ ಬೆಳವಣಿಗೆ. ಈ ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಿರಂತರ ಕಾರ್ಯಕ್ರಮಗಳಾಗಬೇಕು ಎಂದರು.
ಹಿರಿಯ ರಂಗಕರ್ಮಿ ವೀರಣ್ಣ ಪತ್ತಾರ ಮಾತನಾಡಿ, ಭಾರತೀಯ ಸಂಗೀತ ಪರಂಪರೆಯಲ್ಲಿ ಅನೇಕ ಸಾಧಕರು ತಮ್ಮದೇ ಕೊಡುಗೆ ನೀಡಿದ್ದಾರೆ. ಆ ಪೈಕಿ ಶಂಕ್ರಪ್ಪ ಹೂಗಾರ ಕೊಡುಗೆ ಅಪಾರ, ಇಂಥ ಸಾಧಕರನ್ನು ಸ್ಮರಿಸುವ ಮೂಲಕ ಪರಂಪರೆಯನ್ನು ಗೌರವಿಸಬೇಕಿದೆ. ಮಕ್ಕಳಿಗೆ ಸಂಗೀತಗಾರರ ಇತಿಹಾಸ ತಿಳಿಸುವ ಕೆಲಸವಾಗಬೇಕಿದೆ. ಸಂಗೀತ ಪರಂಪರೆ ಉಳಿದು ಬೆಳೆಯಬೇಕಾದರೆ, ಕಲಾ ಪೋಷಕರ ಸಹಕಾರ ಅಗತ್ಯ ಎಂದರು.ನ್ಯಾಯವಾದಿ ಡಾ. ಉದಯಕುಮಾರ ದೇಸಾಯಿ ಇದ್ದರು. ಕಲಾವಿದ ಪಂ. ಸಿದ್ಧಣ್ಣ ಹೂಗಾರ ಅಧ್ಯಕ್ಷತೆ ವಹಿಸಿದ್ದರು. ಕೃಷಿ ವಿವಿ ನಿವೃತ್ತ ಪ್ರಾಧ್ಯಾಪಕ ಪಾಂಡುರಂಗ ಶ್ರೀನಿವಾಸ ಕಾವಿ ಅವರನ್ನು ಸನ್ಮಾನಿಸಲಾಯಿತು. ನಂತರ ಜರುಗಿದ ಸಂಗೀತೋತ್ಸವದಲ್ಲಿ ಸೋಲಾಪುರದ ಪಂ. ಭೀಮಣ್ಣ ಜಾಧವ ಅವರು ಸುಂದರಿವಾದನದಲ್ಲಿ ರಾಗ ಹಂಸಧ್ವನಿ ಪ್ರಸ್ತುತ ಪಡಿಸಿದರು. ಸಹವಾದನದಲ್ಲಿ ಗುರುನಾಥ ಜಾಧವ, ಗೋರಖನಾಥ ಜಾಧವ, ಮಯೂರೇಶ ಜಾಧವ, ವೆಂಕಟೇಶಕುಮಾರ ಜಾಧವ ಇದ್ದರು.
ಡಾ. ಮೋಹಸಿನ್ ಖಾನ್ ಸಿತಾರವಾದನ, ಸದಾಶಿವ ಐಹೊಳೆ ಅವರಿಂದ ಗಾಯನ ಪ್ರಸ್ತುತ ಪಡಿಸಿದರು. ತಬಲಾದಲ್ಲಿ ಪಂ. ಸಾತಲಿಂಗಪ್ಪ ದೇಸಾಯಿ ಕಲ್ಲೂರ, ರಘುನಂದನ ಗೋಪಾಲ ಹಾಗೂ ಸಂವಾದಿನಿಯಲ್ಲಿ ವಿನೋದ ಪಾಟೀಲ ಸಾಥ್ ಸಂಗತ ನೀಡಿದರು. ಸಂಸ್ಥೆಯ ಸಂಗೀತ ವಿದ್ಯಾರ್ಥಿಗಳಿಂದ ಸಮೂಹ ಗಾಯನ ಜರುಗಿತು. ಮಾಯಾ ರಾಮನ್ ನಿರೂಪಿಸಿದರು. ಮಳೆಮಲ್ಲೇಶ ಹೂಗಾರ ಸ್ವಾಗತಿಸಿದರು. ಉಮೇಶ ಮುನವಳ್ಳಿ ವಂದಿಸಿದರು.