ಧಾರವಾಡ ನೆಲದ ಪುಣ್ಯದಿಂದ ಎತ್ತರಕ್ಕೆ ಬೆಳೆದೆ: ನಿರ್ಗಮಿತ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

| Published : Mar 03 2024, 01:31 AM IST

ಧಾರವಾಡ ನೆಲದ ಪುಣ್ಯದಿಂದ ಎತ್ತರಕ್ಕೆ ಬೆಳೆದೆ: ನಿರ್ಗಮಿತ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಧಾರವಾಡ ಅಕ್ಷರ, ನೈತಿಕ ಶಿಕ್ಷಣ, ಸಂಸ್ಕೃತಿ ಮತ್ತು ಉತ್ತಮ ಸಂಸ್ಕಾರ ಬೆಳೆಸುತ್ತದೆ. ಪ್ರಾಮಾಣಿಕವಾಗಿ ಬದುಕುವ ಕಲೆ, ಜೀವನಶೈಲಿ ಕಲಿಸುತ್ತದೆ ಎಂದು ಪ್ರಸ್ತುತ ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.

ಕನ್ನಡಪ್ರಭ ವಾರ್ತೆ ಧಾರವಾಡ

ಧಾರವಾಡ ನನ್ನ ನೆಲ. ಹುಟ್ಟಿ ಬೆಳೆದ ಪ್ರದೇಶ. ಆಡಿ ನಲಿದ, ಅಕ್ಷರ ಕಲಿಸಿದ ಊರು. ಈ ನೆಲದ ಪುಣ್ಯದಿಂದ ನಾನು ಈ ಎತ್ತರಕ್ಕೆ ಬೆಳೆದಿದ್ದೇನೆ. ಹುಟ್ಟಿ, ಬೆಳೆದ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಲು ಅವಕಾಶ ಸಿಕ್ಕಿದ್ದು ನನ್ನ ಪುಣ್ಯ ಎಂದು ನಿರ್ಗಮಿತ ಧಾರವಾಡ ಜಿಲ್ಲಾಧಿಕಾರಿ, ಪ್ರಸ್ತುತ ಶಿವಮೊಗ್ಗ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.

ಜಿಲ್ಲಾಡಳಿತದ ನೇತೃತ್ವದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಶನಿವಾರ ಆಲೂರು ವೆಂಕಟರಾವ್ ಭವನದಲ್ಲಿ ಆಯೋಜಿಸಿದ್ದ ಗುರುದತ್ತ ಹೆಗಡೆ ಅವರಿಗೆ ಬೀಳ್ಕೊಡುಗೆ ಹಾಗೂ ನೂತನ ಡಿಸಿ ದಿವ್ಯ ಪ್ರಭು ಅವರ ಸ್ವಾಗತ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ ಮಾತನಾಡಿದರು.

ಧಾರವಾಡ ಅಕ್ಷರ, ನೈತಿಕ ಶಿಕ್ಷಣ, ಸಂಸ್ಕೃತಿ ಮತ್ತು ಉತ್ತಮ ಸಂಸ್ಕಾರ ಬೆಳೆಸುತ್ತದೆ. ಪ್ರಾಮಾಣಿಕವಾಗಿ ಬದುಕುವ ಕಲೆ, ಜೀವನಶೈಲಿ ಕಲಿಸುತ್ತದೆ. ಇದು ನಮ್ಮ ಬದುಕು ರೂಪಿಸಿದ ಭೂಮಿ. ಇಲ್ಲಿಂದ ವೈಯಕ್ತಿಕವಾಗಿ ದೂರವಿರಲು ಸಾಧ್ಯವಾಗದು ಎಂದು ಭಾವುಕರಾದರು.

ಸುಮಾರು ಮೂರು ವರ್ಷಗಳ ಕಾಲ ಧಾರವಾಡ ಜಿಲ್ಲೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದೇನೆ. ಜಿಲ್ಲಾಧಿಕಾರಿಯಾಗಿ ಧಾರವಾಡದಲ್ಲಿ ಸೇವೆ ಸಲ್ಲಿಸಿದ್ದು, ನನ್ನ ವೃತ್ತಿ ಜೀವನದ ಅಮೂಲ್ಯ ಕ್ಷಣಗಳು ಎಂದು ಸಂತೋಷ ವ್ಯಕ್ತಪಡಿಸಿ, ತಮ್ಮ ಆಡಳಿತ ಅವಧಿಯುದ್ದಕ್ಕೂ ಸಹಕರಿಸಿದ ಜಿಲ್ಲೆಯ ಎಲ್ಲ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮತ್ತು ಜಿಲ್ಲೆಯ ಜನತೆಗೆ ಕೃತಜ್ಞತೆ ಸಲ್ಲಿಸಿದರು.

ನೂತನ ಜಿಲ್ಲಾಧಿಕಾರಿ ದಿವ್ಯ ಪ್ರಭು ಸನ್ಮಾನ ಸ್ವೀಕರಿಸಿ, ಸೌಮ್ಯಸ್ವಭಾವದ ಗುರುದತ್ತ ಹೆಗಡೆ ಮತ್ತು ನಾನು ಒಂದೇ ಬ್ಯಾಚ್. ಜಿಲ್ಲೆಗೆ ಉತ್ತಮ ಆಡಳಿತ ನೀಡಿದ್ದಾರೆ. ಜಿಲ್ಲೆಯ ಎಲ್ಲ ನೌಕರ ಬಂಧುಗಳು ಅವರಿಗೆ ನೀಡಿದ್ದ ಸಹಕಾರವನ್ನು ನನಗೂ ನೀಡುತ್ತಾರೆ ಎಂಬ ಭರವಸೆ ಇದೆ. ಎಲ್ಲರೂ ಸೇರಿ ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ದುಡಿಯೋಣ ಎಂದು ತಿಳಿಸಿದರು.

ಪೊಲೀಸ್‌ ಆಯುಕ್ತರಾದ ರೇಣುಕಾ ಸುಕುಮಾರ, ಎಸ್ಪಿ ಡಾ. ಗೋಪಾಲ ಬ್ಯಾಕೋಡ, ಗುರುದತ್ತ ಹೆಗಡೆ ಅವರೊಂದಿಗಿನ ಆಡಳಿತದ ಅನುಭವಗಳನ್ನು ನೆನಪಿಸಿಕೊಂಡರು ಮತ್ತು ಮುಂದಿನ ದಿನಗಳಲ್ಲಿ ಇನ್ನೂ ಉನ್ನತ ಹುದ್ದೆಗೆ ಏರಿ ಜಿಲ್ಲೆಗೆ ಅವರು ಮಾರ್ಗದರ್ಶನ ಮಾಡಲಿದ್ದಾರೆ ಎಂದರು.

ಹಿರಿಯ ಅಧಿಕಾರಿಗಳಾದ ಮೇಜರ್ ಸಿದ್ದಲಿಂಗಯ್ಯ ಹಿರೇಮಠ, ತಹಸೀಲ್ದಾರ್ ಯಲ್ಲಪ್ಪ ಗೊಣೆನ್ನನವರ, ಮಲ್ಲಿಕಾರ್ಜುನ ಸೋಲಗಿ, ವೆಂಕಟೇಶ ಹಟ್ಟಿ, ಭರತ ಎಸ್., ಮೂನಾ ರಾವುತ, ರಾಜೀವ ಪಿ., ಡಾ. ಸಂತೋಷಕುಮಾರ ಬಿರಾದಾರ, ಎಸ್.ಎಫ್. ಸಿದ್ದನಗೌಡರ ಮತ್ತಿತರರು ಇದ್ದರು. ಧಾರವಾಡ ತಹಸೀಲ್ದಾರ್ ಡಾ. ಡಿ.ಎಚ್. ಹೂಗಾರ ವಂದಿಸಿದರು. ವಿಜಯಲಕ್ಷ್ಮೀ ಎಚ್. ನಿರೂಪಿಸಿದರು.