ಸಾರಾಂಶ
ಧಾರವಾಡ: ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘದ 136 ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಭಾನುವಾರ ನಡೆದ ಸಮಾರಂಭದಲ್ಲಿ ಹಾವೇರಿ ಗೆಳೆಯರ ಬಳಗದ ಅಧ್ಯಕ್ಷ ಡಾ. ಸುದೀಪ ಪಂಡಿತ್ ಅವರಿಗೆ ಸಿರಿಗನ್ನಡಂ ಗೆಲ್ಗೆ ಶ್ರೀ ರಾ.ಹ. ದೇಶಪಾಂಡೆ ಪ್ರಶಸ್ತಿಯನ್ನು ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಪ್ರದಾನ ಮಾಡಿದರು.
ಕಾರ್ಯಕ್ರಮ ಉದ್ಘಾಟಿಸಿದ ವಿಜಯಪುರ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಕುಲಪತಿ ಡಾ. ವಿಜಯ ಕೋರಿಶೆಟ್ಟಿ ಮಾತನಾಡಿ, ಕನ್ನಡದ ಅಸ್ತಿತ್ವ ಉಳಿಸಿ, ಬೆಳೆಸಿಕೊಂಡು ಬರುವ ಕೆಲಸವನ್ನು ಕರ್ನಾಟಕ ವಿದ್ಯಾವರ್ಧಕ ಸಂಘದ ಮಾಡಿದೆ. ಕನ್ನಡ ನಾಡಿನ ಕಲೆ, ಸಂಸ್ಕೃತಿ, ಪರಂಪರೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಧಾರವಾಡ ನೆಲವು ತನ್ನದೇ ಆದ ಕೊಡುಗೆ ನೀಡಿದೆ. ಕರ್ನಾಟಕ ಏಕೀಕರಣ ಚಳುವಳಿಯಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘದ ಪಾತ್ರ ದೊಡ್ಡದು ಎಂದರು.ಬೈಲಹೊಂಗಲ ಶಾಸಕ ಮಹಾಂತೇಶ ಕೌಜಲಗಿ ಮಾತನಾಡಿ, ಕನ್ನಡ ನೆಲ, ಭಾಷೆ ವಿಷಯದಲ್ಲಿ ಹೋರಾಟಕ್ಕೆ ಅಣಿಯಾದ ಕರ್ನಾಟಕ ವಿದ್ಯಾವರ್ಧಕ ಸಂಘ ನಿರಂತರವಾಗಿ ಕನ್ನಡ ಪರ ಹೋರಾಟ ಮಾಡಿದೆ. ಅದರಂತೆ ಕನ್ನಡ ಕಟ್ಟುವ ಕೆಲಸ ಮಾಡಿದವರನ್ನು ಗುರುತಿಸಿದೆ ಎಂದರು.
ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು, ಶಶಿಧರ ತೋಡಕರ, ಡಾ. ಸಂಜೀವ ಕುಲಕರ್ಣಿ, ಶಂಕರ ಹಲಗತ್ತಿ, ಸತೀಶ ತುರಮರಿ, ಶಂಕರ ಕುಂಬಿ, ಮಹೇಶ ಹೋರಕೇರಿ ಇತರರಿದ್ದರು.ವಿವಿಧ ಕಾರ್ಯಕ್ರಮಗಳು: ಜು. 21ರ ಸಂಜೆ 5.30ಕ್ಕೆ ಕೆ.ಪಿ. ಪೂರ್ಣಚಂದ್ರ ತೇಜಸ್ವಿ, ಭಾನು ಮುಷ್ತಾಪ್ ಕಥೆಗಳಾಧರಿಸಿದ ಮಾಯಾಮೃಗ, ಎದೆಯ ಹಣತೆ ನಾಟಕ ಜನಮನದಾಟವು ಅಭಿನಯ ಮಾಡಲಿದೆ. ಜು. 22ಕ್ಕೆ ಶ್ರೀನಿವಾಸ ವೈದ್ಯರ ಕಥೆ ಆಧಾರಿತ ಬಾಸಿಂಗ ಬಲ, ಜು. 23ರ ಸಂಜೆ 5.30ಕ್ಕೆ ಡಾ. ನಿಂಗು ಸೊಲಗಿ ಅವರ ನನ್ನಿನ್ನ ನಗೆ ನೋಡಿ ಪ್ರೇಮ ಪತ್ರಗಳ ಕೃತಿಯರಂಗ ಪ್ರಯೋಗ ದಾಂಪತ್ಯ ಗೀತ ನಾಟಕ ಪ್ರದರ್ಶನ ನಡೆಯಲಿದೆ. ಸಮಾರಂಭದಲ್ಲಿ ಮೂರು ದಿನಗಳ ಕಾಲ ಕಲಾವಿದರಿಂದ ಸುಗಮ ಸಂಗೀತ ಜರುಗಲಿದೆ.
ಜು. 24ಕ್ಕೆ ಡಾ. ರಾಜೇಶ್ವರಿ ಹಿರೇಮಠ ಹಾಗೂ ಶಿವು ಹಿರೇಮಠ ಅವರಿಂದ ಸುಗಮ ಸಂಗೀತ ಜರುಗಲಿದೆ. ಡಾ. ರಾಜೇಶ್ವರಿ ಮಹೇಶ್ವರಯ್ಯ ಪತ್ರಿಕೆ ಬಿಡುಗಡೆ ಮಾಡಲಿದ್ದು, ಏಳು ದಿನವೂ ಸಂಘದ ಹಿರಿಯ ಸದಸ್ಯರಿಗೆ ಗೌರವ ಸನ್ಮಾನವೂ ನಡೆಯಲಿದೆ.ಜು. 26ರ ಸಂಜೆ 5.30ಕ್ಕೆ ₹50 ಸಾವಿರ ನಗದು ಒಳಗೊಂಡ ಕನ್ನಡ ಪ್ರಪಂಚ ಡಾ. ಪಾಟೀಲ ಪುಟ್ಟಪ್ಪ ಪ್ರಶಸ್ತಿಯನ್ನು ಹಿರಿಯ ಸಾಹಿತಿ ಡಾ. ಶಾ.ಮಂ. ಕೃಷ್ಣರಾಯ ಅವರಿಗೆ ಕವಿವಿಯ ಕುಲಪತಿ ಡಾ. ಎ.ಎಂ. ಖಾನ್ ಪ್ರದಾನ ಮಾಡಲಿದೆ. ಸಂಘದ ಕಾರ್ಯಾಧ್ಯಕ್ಷ ಬಸವಪ್ರಭು ಹೊಸಕೇರಿ ಅಧ್ಯಕ್ಷತೆ ವಹಿಸಲಿದ್ದಾರೆ.