ಸಾರಾಂಶ
ಧಾರವಾಡ: ಜಿಲ್ಲೆಯು ಸಂಗೀತ, ಸಾಹಿತ್ಯ, ಚಿತ್ರಕಲೆ ಮತ್ತು ನಾಟಕ, ವೃತ್ತಿ ರಂಗಭೂಮಿ ಕ್ಷೇತ್ರದ ಕಾರ್ಯಕ್ರಮಗಳನ್ನು ಎಲ್ಲ ಟ್ರಸ್ಟ್ ಗಳ ಸಮನ್ವದಿಂದ ಸಂಘಟಿಸುವ ಮೂಲಕ ಜಿಲ್ಲೆಯ ಸಾಂಸ್ಕೃತಿಕ ಶ್ರೀಮಂತಿಕೆ ಹೆಚ್ಚಿಸುವ ಮಹತ್ವದ ಜವಾಬ್ದಾರಿ ಎಲ್ಲ ರಾಷ್ಟ್ರೀಯ ಟ್ರಸ್ಟ್ ಗಳದ್ದಾಗಿದೆ. ಧಾರವಾಡ ಶಿಕ್ಷಣದೊಂದಿಗೆ ಸಂಗೀತ, ಸಾಹಿತ್ಯದ ಕಾಶಿ ಆಗಬೇಕು ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಆಶಯ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ನೂತನ ಸಭಾಂಗಣದಲ್ಲಿ ಧಾರವಾಡ ಜಿಲ್ಲೆಯ ಐದು ರಾಷ್ಟ್ರೀಯ ಸ್ಮಾರಕ ಟ್ರಸ್ಟ್‌ಗಳಿಗೆ ಸರ್ಕಾರ ನೂತನವಾಗಿ ನೇಮಕವಾಗಿರುವ ಅಧ್ಯಕ್ಷ, ಸದಸ್ಯರಿಗೆ ಜಿಲ್ಲಾಡಳಿತದ ಪರವಾಗಿ ಶುಕ್ರವಾರ ಅಭಿನಂದಿಸಿದ ಅವರು, ರಾಜ್ಯದ ಇತರ ಜಿಲ್ಲೆಗಳಿಗೆ ಹಾಗೂ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಧಾರವಾಡ ಜಿಲ್ಲೆ ನಿಜರ್ಥದಲ್ಲಿ ಸಾಂಸ್ಕೃತಿಕ ನಗರಿ. ಇಲ್ಲಿ ರಾಷ್ಟ್ರಮಟ್ಟದ ಕೀರ್ತಿಗಳಿಸಿರುವ ಸಂಗೀತ, ಸಾಹಿತ್ಯ, ಚಿತ್ರಕಲೆ, ನಾಟಕ, ವೃತ್ತಿರಂಗಭೂಮಿ ಸಾಧಕರಿದ್ದಾರೆ. ಅವರ ಸಾಧನೆಯ ಸ್ಮರಣೆಗಾಗಿ ಮತ್ತು ಪರಂಪರೆ ಮುಂದುವರಿಸಲು ರಾಜ್ಯ ಸರ್ಕಾರವು ಅನೇಕ ವರ್ಷಗಳ ಹಿಂದೆ ರಾಷ್ಟ್ರಮಟ್ಟದ ಸ್ಮಾರಕ ಟ್ರಸ್ಟ್‌ಗಳನ್ನು ರಚಿಸಿ, ಕಾರ್ಯೋನ್ಮುಕವಾಗಿದೆ ಎಂದರು.ಸಂಗೀತ, ಸಾಹಿತ್ಯದ ಪರಂಪರೆ ಯುವ ಪೀಳಿಗೆಗೆ ಮುಂದುವರಿಸಲು ಟ್ರಸ್ಟ್‌ಗಳು ವಿಭಿನ್ನ ಕಾರ್ಯಕ್ರಮ ಆಯೋಜಿಸುವ ಮೂಲಕ ಪ್ರೋತ್ಸಾಹಿಸಬೇಕು. ಎಲ್ಲ ಟ್ರಸ್ಟಗಳು ಒಂದೇ ವೇದಿಕೆಯಡಿ ಕೂಡಿ ವಿಶೇಷವಾದ ಕಾರ್ಯಕ್ರಮ ರೂಪಿಸಬೇಕು. ಜಿಲ್ಲಾಡಳಿತ ಅಗತ್ಯ ನೆರವು ಸಹಕಾರ ನೀಡಲಿದೆ ಎಂದ ಅವರು, ಸಾಂಸ್ಕೃತಿಕ ಕಾರ್ಯಕ್ರಮಗಳಿಗಾಗಿ ಶೀಘ್ರದಲ್ಲಿ ಕಲಾಭವನ ಸಾರ್ವಜನಿಕ ಬಳಕೆ ಮುಕ್ತಗೊಳಿಸಲು ಕ್ರಮ ವಹಿಸಲಾಗುತ್ತದೆ. ಕಲಾಭವನ ಆವರಣದಲ್ಲಿ ನಿಲ್ಲುತ್ತಿದ್ದ ತಾಜ್ಯ ಸಂಗ್ರಹ ವಾಹನಗಳನ್ನು ಬೇರೆಡೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದರು.
ಡಾ. ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ ಅಧ್ಯಕ್ಷ ಡಾ. ಸರಜೂ ಕಾಟ್ಕರ್, ಡಾ. ಎಂ.ಎಂ. ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಡಾ.ವೀರಣ್ಣ ರಾಜೂರ, ಡಾ. ಬಸವರಾಜ ರಾಜಗುರು ರಾಷ್ಟ್ರೀಯ ಟ್ರಸ್ಟನ್ ಅಧ್ಯಕ್ಷ ಪಂಡಿತ ಕೈವಲ್ಯಕುಮಾರ ಗುರವ, ಡಿ.ವಿ. ಹಾಲಭಾವಿ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಬಿ. ಮಾರುತಿ, ರಂಗಾಯಣದ ನಿರ್ದೇಶಕ ರಾಜು ತಾಳಿಕೋಟಿ ಹಾಗೂ ಚಂದ್ರಕಾಂತ ಬೆಲ್ಲದ ಅವರನ್ನು ಸತ್ಕರಿಸಲಾಯಿತು.ಹನುಮಾಕ್ಷಿ ಗೋಗಿ, ಡಾ.ಶರಣಮ್ಮ ಗೊರೆಬಾಳ, ನಿಜಗುಣಿ ರಾಜಗುರು ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಸ್ವಾಗತಿಸಿದರು. ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಸುರೇಶ ಹಿರೇಮಠ ವಂದಿಸಿದರು. ಆರತಿ ದೇವಶಿಖಾಮಣಿ ನಿರೂಪಿಸಿದರು.