ದೋಣಿಖಣ ಕೊಲ್ಲಾಪುರದಮ್ಮ ರಾಜಬೀದಿ ಉತ್ಸವ

| Published : May 19 2024, 01:55 AM IST

ಸಾರಾಂಶ

ದೋಣಿಖಣದ ಜಾತ್ರೆಯ ಅಂಗವಾಗಿ ಶ್ರೀ ಕೊಲ್ಲಾಪುರದಮ್ಮನವರ ರಾಜಬೀದಿ ಉತ್ಸವ ನಗರದಲ್ಲಿ ವಿಜೃಂಭಣೆಯಿಂದ ಜರುಗಿತು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ದೋಣಿಖಣದ ಜಾತ್ರೆಯ ಅಂಗವಾಗಿ ಶ್ರೀ ಕೊಲ್ಲಾಪುರದಮ್ಮನವರ ರಾಜಬೀದಿ ಉತ್ಸವ ನಗರದಲ್ಲಿ ವಿಜೃಂಭಣೆಯಿಂದ ಜರುಗಿತು.

ಬೋಳರಾಮೇಶ್ವರ ಸ್ವಾಮಿ ದೇವಸ್ಥಾನದಿಂದ ಆರಂಭಗೊಂಡ ಅಲಂಕೃತ ಅಮ್ಮನವರ ಉತ್ಸವ ಮೂರ್ತಿಗಳ ಮೆರವಣಿಗೆ ತೊಗರಿಹಂಕಲ್ ಸರ್ಕಲ್ ಹಾದು ಶೆಟ್ಟರಬೀದಿ, ಎಂ.ಜಿ.ರಸ್ತೆ, ಆಜಾದ್‌ ಪಾರ್ಕ್ ಮೂಲಕ ಬೇಲೂರು ರಸ್ತೆಯಲ್ಲಿ ಸಾಗಿ ದೇವಸ್ಥಾನ ತಲುಪುವ ವೇಳೆಗೆ ತಡ ರಾತ್ರಿಯಾಗಿತ್ತು.

ದೇವಸ್ಥಾನದ ಆವರಣದಲ್ಲಿ ರಂಗು-ರಂಗಿನ ಸಿಡಿಮದ್ದುಗಳ ಪ್ರದರ್ಶನ ಬಾನಂಗಳದಲ್ಲಿ ಚಿತ್ತಾರ ಮೂಡಿಸಿತು. ಸಾವಿರಾರು ಜನ ಸಾಕ್ಷೀಕರಿಸಿ ಸಂತಸ ಪಟ್ಟರು. ವರುಣನ ಸಿಂಚನವೂ ಉತ್ಸಾಹಕ್ಕೆ ಅಡ್ಡಿಯಾಗಲಿಲ್ಲ.

ಗೋಧೂಳಿ ಸಮಯದಲ್ಲಿ ದೋಣಿಖಣದ ಕೊಲ್ಲಾಪುರದಮ್ಮ, ದುರ್ಗಮ್ಮ ಮತ್ತು ಭೂತಪ್ಪ ಉತ್ಸವಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಅಡ್ಡಪಲ್ಲಕ್ಕಿಯಲ್ಲಿ ಪುಷ್ಪಾಲಂಕೃತದೊಂದಿಗೆ ಶ್ರೀ ಬೋಳರಾಮೇಶ್ವರಸ್ವಾಮಿ ದೇವಸ್ಥಾನ ತಲುಪುವ ವೇಳೆಗೆ ಕತ್ತಲು ಆವರಿಸಿತ್ತು. ಶಂಕರಪುರದ ಮುತ್ತಿನಮ್ಮ ಮತ್ತು ಹೊಸಮನೆಯ ಗುಂಡಮ್ಮ ದೇವಿಗೆ ಅಲಂಕೃತ ಅಡ್ಡಪಲ್ಲಕ್ಕಿಗಳೂ ವಾದ್ಯಗೋಷ್ಠಿಯೊಂದಿಗೆ ಸ್ವಾಗತ ಕೋರಲಾಯಿತು.

ಮೂರುಮನೆಹಳ್ಳಿ ಪಾರಂಪರಿಕ ಕುಟುಂಬದ ನೇಮನಿಷ್ಠ ಬಾಲಕಿಯನ್ನು ಕರೆತರಲಾಯಿತು. ವಿಶೇಷ ಪೂಜೆ ಕಳಸ ಸ್ಥಾಪನೆ ನಂತರ ದೇವಿಯನ್ನು ಆಹ್ವಾನಿಸಲಾಯಿತು. ಮಂಗಲವಾದ್ಯಗಳು ಜೋರಾದಂತೆ ಕಳಸವನ್ನು ಬಾಲಕಿ ನೆತ್ತಿಯ ಮೇಲಿರಿಸಿ ನೆಡಮುಡಿಯೊಂದಿಗೆ ಮೆರವಣಿಗೆ ಆರಂಭಿಸಲಾಯಿತು.

ವಿದ್ಯುದ್ದೀಪಾಂಕೃತ ಪುಷ್ಪಮಂಟಪದಲ್ಲಿ ಕೊಲಪುರದಮ್ಮ ಹಾಗೂ ಉಗ್ರಾಣದಮ್ಮ, ಮತ್ತೊಂದು ಮಂಟಪದಲ್ಲಿ ಮುತ್ತಿನಮ್ಮ ಮತ್ತು ಗುಂಡಮ್ಮ ಉತ್ಸವಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು. ಮಗದೊಂದು ವಾಹನದಲ್ಲಿ ಭೂತಪ್ಪ ದೇವರನ್ನು ಇರಿಸಲಾಗಿತ್ತು. ಸಾಂಪ್ರದಾಯಕ ಪೂಜಾದಿಗಳ ನಂತರ ಉತ್ಸವ ಆರಂಭಗೊಳ್ಳುವ ವೇಳೆಗೆ ವರುಣಸಿಂಚನದೊಂದಿಗೆ ಕತ್ತಲಾವರಿಸಿದ್ದು ಝಗಮಗಿಸುವ ಬಣ್ಣದ ವಿದ್ಯುದ್ದೀಪಾಲಂಕಾರದಲ್ಲಿ ಉತ್ಸವಮೂರ್ತಿಗಳನ್ನು ಭಕ್ತರು ಕಣ್ತುಂಬಿಕೊಂಡರು.

ಕೊಂಬು, ಕಹಳೆ, ಹಳ್ಳಿವಾದ್ಯ ತಂಡಗಳ ವಾದ್ಯಸಂಭ್ರಮಕ್ಕೆ ಅಬಾಲವೃದ್ಧರು ಹೆಜ್ಜೆಹಾಕಿ ಕುಣಿದು ಕುಪ್ಪಳಿಸಿದರು. ಅಲ್ಲಲ್ಲಿ ಅರ್ಚನೆಯೊಂದಿಗೆ ಸಾಗಿದ ಉತ್ಸವಕ್ಕೆ ಚಾಮದೇವರುಗಳು ವಿಶೇಷ ಕಳೆಕಟ್ಟಿತ್ತು. ದೇವಸ್ಥಾನಕ್ಕೆ ಆಗಮಿಸಿದ ಉತ್ಸವಮೂರ್ತಿಗಳನ್ನು ಪೂಜಾ ಸಮಿತಿ ಮುಖ್ಯಸ್ಥರುಗಳಾದ ಕೆ.ರಾಮಣ್ಣ, ಕೋಟೇ ಈಶಣ್ಣ, ರವಿಕುಮಾರ್ ನೇತೃತ್ವದಲ್ಲಿ ಬರಮಾಡಿಕೊಂಡು ಮಹಾಮಂಗಳಾರತಿಯೊಂದಿಗೆ ರಾಜಬೀದಿ ಉತ್ಸವ ಸಮಾಪನಗೊಂಡಿತು.