ಧ್ಯಾನಚಂದ್ ಭಾರತಮಾತೆಯ ಹೆಮ್ಮೆಯ ಪುತ್ರ: ಶೇಖರಗೌಡ್ರ ಪಾಟೀಲ

| Published : Aug 30 2025, 01:01 AM IST

ಸಾರಾಂಶ

ಹಾಕಿ ಮಾಂತ್ರಿಕನೆಂದೇ ಕರೆಯಲ್ಪಡುತ್ತಿದ್ದ ಧ್ಯಾನಚಂದ್ ದೇಶದ ಕೀರ್ತಿಯನ್ನು ವಿದೇಶಗಳಲ್ಲಿ ರಾರಾಜಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ಜನ್ಮದಿನದಂದು ರಾಷ್ಟ್ರೀಯ ಕ್ರೀಡಾ ದಿನ ಆಚರಿಸುತ್ತಿರುವುದು ಕೇಂದ್ರ ಸರ್ಕಾರ ಕ್ರೀಡಾ ಕ್ಷೇತ್ರಕ್ಕೆ ಸಲ್ಲಿಸುತ್ತಿರುವ ಗೌರವವಾಗಿದೆ.

ಬ್ಯಾಡಗಿ: ಜರ್ಮನಿಯ ಪರ ಆಡುವಂತೆ ಅಡಾಲ್ಪ್ ಹಿಟ್ಲರ್ ಆಹ್ವಾನ ತಿರಸ್ಕರಿಸಿ ದೇಶಾಭಿಮಾನ ಮೆರೆದ ಧ್ಯಾನಚಂದ್ ಭಾರತದ ಗೌರವಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳುವ ಮೂಲಕ ಭಾರತ ಮಾತೆಯ ಹೆಮ್ಮೆಯ ಪುತ್ರ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಹಿರಿಯ ಕ್ರೀಡಾಪಟು ಶೇಖರಗೌಡ್ರ ಪಾಟೀಲ ತಿಳಿಸಿದರು.

ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ, ಹಾವೇರಿ ಜಿಲ್ಲಾ ಅಮೇಚೂರ್ ಕಬಡ್ಡಿ ಅಸೋಸಿಯೇಶನ್ ಆಶ್ರಯದಲ್ಲಿ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಾಕಿ ಮಾಂತ್ರಿಕನೆಂದೇ ಕರೆಯಲ್ಪಡುತ್ತಿದ್ದ ಧ್ಯಾನಚಂದ್ ದೇಶದ ಕೀರ್ತಿಯನ್ನು ವಿದೇಶಗಳಲ್ಲಿ ರಾರಾಜಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅವರ ಜನ್ಮದಿನದಂದು ರಾಷ್ಟ್ರೀಯ ಕ್ರೀಡಾ ದಿನ ಆಚರಿಸುತ್ತಿರುವುದು ಕೇಂದ್ರ ಸರ್ಕಾರ ಕ್ರೀಡಾ ಕ್ಷೇತ್ರಕ್ಕೆ ಸಲ್ಲಿಸುತ್ತಿರುವ ಗೌರವವಾಗಿದೆ ಎಂದರು.ಚಂದ್ರನ ಬೆಳಕಿನಲ್ಲಿ ಅಭ್ಯಾಸ: ಉಪನ್ಯಾಸಕ ಹಾಗೂ ಹಿರಿಯ ಕ್ರೀಡಾಪಟು ಚಂದ್ರಪ್ಪ ಮಾತನಾಡಿ, ಬಹುತೇಕ ಕ್ರೀಡಾಪಟುಗಳು ನಿಕ್ ನೇಮ್ ಇಟ್ಟುಕೊಳ್ಳುತ್ತಾರೆ. ಆದರೆ ಚಂದ್ರನ ಬೆಳಕಿನಲ್ಲಿ ಆಭ್ಯಾಸ ನಡೆಸಿ ಖ್ಯಾತಿ ಗಳಿಸಿದ ಪರಿಣಾಮ ಧ್ಯಾನ ಸಿಂಗ್ ಎಂಬ ಹೆಸರು ಧ್ಯಾನಚಂದ್ ಆಗಿ ಪರಿವರ್ತನೆಗೊಂಡಿತು. ಅಂತಾರಾಷ್ಟ್ರೀಯ ಪಂದ್ಯಾವಳಿಯಲ್ಲಿ 400 ಗೋಲು ಗಳಿಸಿ ಭಾರತಕ್ಕೆ ಚಿನ್ನದ ಪದಕ ಕೊಡಿಸುವಲ್ಲಿ ಧ್ಯಾನಚಂದ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.ಕ್ರೀಡೆಗಳು ಸೊರಗುತ್ತಿವೆ:

ನಾಗರಾಜ ಹಾವನೂರ ಮಾತನಾಡಿ, ಜಿಲ್ಲೆಯಲ್ಲಿರುವ ತಾಲೂಕು ಕ್ರೀಡಾಂಗಣಗಳಿಗೆ ತರಬೇತುದಾರರು ಸೇರಿದಂತೆ ಮೂಲ ಸೌಕರ್ಯವಿಲ್ಲದೇ ಕ್ರೀಡಾ ಪ್ರತಿಭೆಗಳು ಅರಳುವ ಮುನ್ನವೇ ಕಮರುತ್ತಿವೆ. ಕ್ರೀಡಾ ಇಲಾಖೆ ಅಧಿಕಾರಿಗಳು ಕ್ರೀಡಾಂಗಣಗಳಿಗೆ ಮೂಲ ಸೌಕರ್ಯ ಕಲ್ಪಿಸಿದರೆ ಮಾತ್ರ ರಾಷ್ಟ್ರೀಯ ಕ್ರೀಡಾ ದಿನಾಚರಣೆಗೆ ನಿಜವಾದ ಅರ್ಥ ಬರಲಿದೆ ಎಂದರು.ಕಬಡ್ಡಿ ಕೋಚ್ ಮಂಜುಳ ಭಜಂತ್ರಿ ಮಾತನಾಡಿ, ಪ್ರೊ ಕಬಡ್ಡಿ ಪರಿಚಯದ ಬಳಿಕ ವಿಶ್ವದೆಲ್ಲೆಡೆ ಕಬಡ್ಡಿ ಆಟಕ್ಕೆ ಬೇಡಿಕೆ ಹೆಚ್ಚಾಗಿದೆ. ಒಟ್ಟು 23 ದೇಶಗಳಲ್ಲಿ ಕಬಡ್ಡಿ ಪರಿಚಯಿಸಲಾಗಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಕ್ರೀಡಾ ಚಟುವಟಿಕೆಗಳಿಗೆ ಮೀಸಲಿರುವ ಶೇ. 2 ಅನುದಾನವನ್ನು ಶೇ. 20ಕ್ಕೆ ಹೆಚ್ಚಿಸಿದಲ್ಲಿ ಇನ್ನಷ್ಟು ಪ್ರತಿಭೆಗಳಿಗೆ ಅವಕಾಶ ಸಿಗಬಹುದು ಎಂದರು.

ಇದಕ್ಕೂ ಮುನ್ನ ಧ್ಯಾನಚಂದ ಭಾವಚಿತ್ರಕ್ಕೆ ಪುಷ್ಪಾರ್ಪಣೆ ನೆರವೇರಿಸಲಾಯಿತು. ಹಾವೇರಿ ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಗೌರವಾಧ್ಯಕ್ಷ ಗಂಗಣ್ಣ ಎಲಿ, ಕಾರ್ಯದರ್ಶಿ ಶಿವಾನಂದ ಮಲ್ಲನಗೌಡ್ರ, ನಿರ್ದೇಶಕ ಎಂ.ಆರ್. ಕೋಡಿ ಹಳ್ಳಿ, ಎ.ಟಿ. ಪೀಠದ, ತಾಲೂಕು ಕ್ರೀಡಾಧಿಕಾರಿ ಎಚ್.ಬಿ. ದಾಸರ, ಖೊಖೋ ತರಬೇತುದಾರ ಮಾಲತೇಶ ಸೇರಿದಂತೆ ಕಬಡ್ಡಿ, ಖೋಖೋ, ವಾಲಿಬಾಲ್ ಕ್ರೀಡಾಪಟುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.