ಕನ್ನಡಪ್ರಭ ವಾರ್ತೆ ಬಾಗಲಕೋಟೆದಾಂಪತ್ಯ ಜೀವನದಲ್ಲಿ ಪರಸ್ಪರ ಅರ್ಥೈಸಿಕೊಳ್ಳುವುದು, ಮುಕ್ತವಾಗಿ ಸಂವಹನ ನಡೆಸುವುದು ಹಾಗೂ ಒಬ್ಬರ ಭಾವನೆಗಳನ್ನು ಮತ್ತೊಬ್ಬರು ಗೌರವಿಸುವುದರಿಂದ ಕುಟುಂಬದಲ್ಲಿ ಸಂತಸ ಮತ್ತು ನೆಮ್ಮದಿ ನೆಲೆಸಲು ಸಾಧ್ಯ. ದಾಂಪತ್ಯ ಜೀವನದ ಸಂತಸಕ್ಕೆ ಸಂವಾದವೇ ಬುನಾದಿ ಎಂದು ವಿಸ್ತಾರ ಜಿಂದಗಿಯ ಮಹೇಶ ಮಾಶ್ಯಾಳ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ದಾಂಪತ್ಯ ಜೀವನದಲ್ಲಿ ಪರಸ್ಪರ ಅರ್ಥೈಸಿಕೊಳ್ಳುವುದು, ಮುಕ್ತವಾಗಿ ಸಂವಹನ ನಡೆಸುವುದು ಹಾಗೂ ಒಬ್ಬರ ಭಾವನೆಗಳನ್ನು ಮತ್ತೊಬ್ಬರು ಗೌರವಿಸುವುದರಿಂದ ಕುಟುಂಬದಲ್ಲಿ ಸಂತಸ ಮತ್ತು ನೆಮ್ಮದಿ ನೆಲೆಸಲು ಸಾಧ್ಯ. ದಾಂಪತ್ಯ ಜೀವನದ ಸಂತಸಕ್ಕೆ ಸಂವಾದವೇ ಬುನಾದಿ ಎಂದು ವಿಸ್ತಾರ ಜಿಂದಗಿಯ ಮಹೇಶ ಮಾಶ್ಯಾಳ ಹೇಳಿದರು.

ಬಿವಿವಿ ಸಂಘದ ಬಿಪ್ಸ್ ಶಾಲೆ ಹಾಗೂ ವಿಸ್ತಾರ ಜಿಂದಗಿ ವತಿಯಿಂದ ಬಿಇಸಿ ಸಭಾಂಗಣದಲ್ಲಿ ದಂಪತಿಗಳಿಗಾಗಿ ಪ್ರಥಮ ಬಾರಿಗೆ ಆಯೋಜಿಸಿದ್ದ ‘ನಾ ಹಿಂಗೆ, ನೀ ಹಂಗೆ’ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮಯ ಪಾಲನೆ, ಪರಸ್ಪರ ಗೌರವ ಹಾಗೂ ನಿರಂತರ ಸಂವಾದದ ಮೂಲಕ ಕೌಟುಂಬಿಕ ಕರ್ತವ್ಯಗಳನ್ನು ಅರಿತು ಸಮೃದ್ಧ ಜೀವನ ನಡೆಸಬೇಕು. ತಂದೆ-ತಾಯಿ, ಮಕ್ಕಳು ಹಾಗೂ ಹಿರಿಯರ ನಡುವಿನ ಕುಟುಂಬ ಸಂಬಂಧಗಳ ಗಟ್ಟಿತನವನ್ನು ಕಾಪಾಡಿಕೊಳ್ಳುವುದು ಅಗತ್ಯ. ಹಿಂದಿನ ಮತ್ತು ಮುಂದಿನ ಪೀಳಿಗೆಗಳ ನಡುವೆ ಪರಸ್ಪರ ಅರಿವು ಹಾಗೂ ಉತ್ತಮ ಸಂವಹನ ಬೆಳೆಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಸಂಘದ ಕಾರ್ಯಾಧ್ಯಕ್ಷ ಡಾ. ವೀರಣ್ಣ ಚರಂತಿಮಠ ಅವರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅವಿಭಕ್ತ ಕುಟುಂಬ ಭಾರತೀಯ ಪರಂಪರೆಯ ಪ್ರಮುಖ ಭಾಗವಾಗಿದೆ. ಪರಸ್ಪರರನ್ನು ಅರ್ಥೈಸಿಕೊಂಡು ಹೊಂದಾಣಿಕೆಯಿಂದ ಬದುಕುವ ಮೂಲಕ ಕುಟುಂಬ ವ್ಯವಸ್ಥೆಯನ್ನು ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಶಾಲಾ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಮಹಾಂತೇಶ ಶೆಟ್ಟರ, ಬಿಪ್ಸ್ ಶಾಲೆಯ ನಿರ್ದೇಶಕ ಸುರೇಶ ಹೆಗಡೆ, ಪ್ರಾಚಾರ್ಯೆ ಮಂಗಳಾದೇವಿ ಹೆಗಡೆ ಸೇರಿದಂತೆ ವಿವಿಧ ಶಾಲೆಗಳ ಪ್ರಾಚಾರ್ಯರು, ಶಿಕ್ಷಕ-ಶಿಕ್ಷಕಿಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.