ಸಾಮಾಜಿಕ ಸತ್ಯಗಳ ಸಂವಾದ ಇಂದಿನ ಅಗತ್ಯ

| Published : Jul 25 2024, 01:19 AM IST

ಸಾರಾಂಶ

ದೊಡ್ಡಬಳ್ಳಾಪುರ: ದಲಿತ ಬರಹಗಾರರು ತಮ್ಮ ಸಮುದಾಯಕ್ಕೆ ಮುಖಮಾಡಿ ಮಾತನಾಡಬೇಕು. ಬೆನ್ನು ಮಾಡಿ ಅಲ್ಲ. ತಮ್ಮ ಸುತ್ತಲಿನ ಆಗು ಹೋಗುಗಳಿಗೆ ಸ್ಪಂದಿಸುವ ಗುಣ ಬೆಳೆಸಿಕೊಳ್ಳಬೇಕು. ಸಾಮಾಜಿಕ ಸತ್ಯಗಳ ಕುರಿತ ಸಂವಾದವು ಇಂದಿನ ಅಗತ್ಯವಾಗಿದೆ ಎಂದು ನಾಟಕಕಾರ ಡಾ.ಕೆ.ವೈ.ನಾರಾಯಣಸ್ವಾಮಿ ಹೇಳಿದರು.

ದೊಡ್ಡಬಳ್ಳಾಪುರ: ದಲಿತ ಬರಹಗಾರರು ತಮ್ಮ ಸಮುದಾಯಕ್ಕೆ ಮುಖಮಾಡಿ ಮಾತನಾಡಬೇಕು. ಬೆನ್ನು ಮಾಡಿ ಅಲ್ಲ. ತಮ್ಮ ಸುತ್ತಲಿನ ಆಗು ಹೋಗುಗಳಿಗೆ ಸ್ಪಂದಿಸುವ ಗುಣ ಬೆಳೆಸಿಕೊಳ್ಳಬೇಕು. ಸಾಮಾಜಿಕ ಸತ್ಯಗಳ ಕುರಿತ ಸಂವಾದವು ಇಂದಿನ ಅಗತ್ಯವಾಗಿದೆ ಎಂದು ನಾಟಕಕಾರ ಡಾ.ಕೆ.ವೈ.ನಾರಾಯಣಸ್ವಾಮಿ ಹೇಳಿದರು.

ನಗರದಲ್ಲಿ ಡಾ.ಡಿ.ಆರ್.ನಾಗರಾಜ್ ಬಳಗ ಮತ್ತು ಬಿಗ್ ಕನ್ನಡ ಸಹಯೋಗದಲ್ಲಿ ಪ್ರಕಟಿಸಲಾಗಿರುವ ಸಹ ಪ್ರಾಧ್ಯಾಪಕ ಡಾ.ಪ್ರಕಾಶ್ ಮಂಟೇದ ಅವರು ಬರೆದಿರುವ ‘ಅರಿವೇ ಕಂಡಾಯ’ ಪುಸ್ತಕ ಬಿಡುಗಡೆ ಸಮಾರಂಭದದಲ್ಲಿ ಅವರು ಮಾತನಾಡಿದರು.

ಲೋಕ ಸಂಚಾರದ ಅನುಭವ ಇದ್ದಾಗ ಮಾತ್ರ ಭಾರತ ನಮಗೆ ಅರ್ಥವಾಗುವುದು ಸುಲಭವಾಗಲಿದೆ. ಸಾಮಾಜಿಕ ಸತ್ಯ ಸಂಗತಿಗಳನ್ನು ಗುಣವಾಚಕಗಳು ಮುಚ್ಚಿಡುತ್ತವೆ. ಹಾಗಾಗಿ ಬರಹಗಾರರು ಗುಣವಾಚಕಗಳಿಗೆ ಒಳಗಾಗದೆ ಸಂವಾದಗಳನ್ನು ಹುಟ್ಟುಹಾಕಬೇಕು. ನಮ್ಮ ಇಂದಿನ ಓದು ಸಂವಿಧಾನಕ್ಕೆ ಬಂದು ನಿಂತಿದೆ. ಅದರಿಂದ ಮುಂದಕ್ಕೆ ಹೋಗಿಲ್ಲ. ಸಂವಿಧಾನದ ಆಚೆಗಿನ ಓದು ಈಗ ನಮ್ಮದಾಗಬೇಕಿದೆ. ಸದಾ ಜನ ಚಳವಳಿಗಳ ಜತೆಗಿರುವವರು ಬರೆದಾಗ ಅದು ವಾಸ್ತವಕ್ಕೆ ಹತ್ತಿರವಾಗಿರಲಿದೆ. ನಮ್ಮ ಹೊಟ್ಟೆಯ ಹಸಿವು ನೀಗಿದ ತಕ್ಷಣ ಜ್ಞಾನದ ಹಸಿವನ್ನು ಮರೆಯುತ್ತಿದ್ದೇವೆ. ಈ ಬಗ್ಗೆ ನಾವು ಸದಾ ಎಚ್ಚರವಹಿಸಬೇಕಾಗಿದೆ ಎಂದು ಸಲಹೆ ನೀಡಿದರು.

ಪ್ರಗತಿಪರ ಚಿಂತಕ ಮಂಜುನಾಥ ಎಂ.ಅದ್ದೆ ಮಾತನಾಡಿ, ಕಲ್ಯಾಣ ರಾಜ್ಯದ ನಿರ್ಮಾಣಕ್ಕಾಗಿ ರಾಜಕಾರಣ ನಡೆಯಬೇಕು. ಆದರೆ ಈಗ ಒಬ್ಬರನ್ನು ಮತ್ತೊಬ್ಬರು ಬಗ್ಗುಬಡಿಯುವ ರಾಜಕಾರಣ ನಡೆಯುತ್ತಿದೆ. ಇದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ ಎಂದು ಕಳವಳ ವ್ಯಕ್ತಪಡಿಸಿದರು.

ಭಾಷೆ ದುಡಿಯುವ ಜನರ ಗುರುತಿಸುವಿಕೆಯಾಗಿದೆ. ಹೆಚ್ಚು ವಿದ್ಯೆ ಕಲಿತವರಲ್ಲಿ ಜಾತಿ ವ್ಯವಸ್ಥೆ ಇಲ್ಲದಾಗಬೇಕಿತ್ತು. ಆದರೆ ವಿಶ್ವ ವಿದ್ಯಾಲಯಗಳಿಗೆ ಹೋಗುತ್ತಿದ್ದಂತೆ ಜಾತಿವಾದಿಗಳಾಗಿ ರೂಪುಗೊಳ್ಳುತ್ತಿರುವುದು ಅತ್ಯಂತ ಅಪಾಯಕಾರಿ ಸಂಗತಿಯಾಗಿದೆ. ಇದು ದುರಿತಕಾಲವಾಗಿದ್ದು, ಇಲ್ಲಿ ಜಾತಿ ಮೇಲಾಟದಲ್ಲಿ ಮುಳುಗದೆ ಮುನ್ನಡೆಯಬೇಕು. ಪ್ರಯೋಗಾಲಯದಲ್ಲಿ ಕಪ್ಪೆಯನ್ನು ಸೀಳುವಂತೆ ಸೀಳಿ ನೋಡುವುದನ್ನು ಬಿಟ್ಟು ನಡೆಯಬೇಕಾಗಿದೆ. ನಮ್ಮ ಹಕ್ಕುಗಳನ್ನು ಪಡೆಯುವ ಮಾರ್ಗ ಸದಾ ಕಾಲ ನ್ಯಾಯಯುತ ಆಗಿರಬೇಕಾಗಿದೆ ಎಂದರು.

ಪುಸ್ತಕ ಕುರಿತು ಮಾತನಾಡಿದ ಪುಸ್ತಕ ಪ್ರಕಾಶಕ ಆಕೃತಿ ಗುರುಪ್ರಸಾದ್, ಪ್ರತಿ ನಿತ್ಯವೂ ರಾಜಕಾರಣ, ಪ್ರಸ್ತುತ ಸಂಗತಿಗಳ ಕುರಿತ ಅಂಕಣಗಳನ್ನು ಎಲ್ಲರೂ ಬರೆಯುತ್ತಾರೆ. ಆದರೆ ತಮ್ಮ ಸಮುದಾಯದ ಕುರಿತು ಅಂಕಣಗಳು ಬರೆಯುವುದು ಕಡಿಮೆ. ಇಂತಹ ಸಂದರ್ಭದಲ್ಲಿ ಸಹ ಪ್ರಾಧ್ಯಾಪಕ ಡಾ.ಪ್ರಕಾಶ್ ಮಂಟೇದ ಅವರ ‘ಅರಿವೇ ಕಂಡಾಯ’ ಅಂಕಣ ಬರಹಗಳ ಪುಸ್ತಕ ಉತ್ತಮವಾಗಿ ಮೂಡಿ ಬಂದಿದೆ ಎಂದರು.

ಕಾರ್ಯಕ್ರಮದಲ್ಲಿ ವಿವಿಧ ವಿಷಯಗಳ ಅಧ್ಯಯನ ಮಾಡಿ ಪ್ರಬಂಧ ಮಂಡಿಸಿ ಡಾಕ್ಟರೇಟ್ ಪಡೆದವರು ಹಾಗೂ ರಾಜ್ಯದ ವಿವಿಧ ಪ್ರಾಧಿಕಾರದಲ್ಲಿ ಸಹ ಸದಸ್ಯರಾಗಿ ಆಯ್ಕೆಯಾದವರನ್ನು ಸನ್ಮಾನಿಸಲಾಯಿತು.

‘ಅರಿವೇ ಕಂಡಾಯ’ ಪುಸ್ತಕ ಕುರಿತು ಲೇಖಕಿ ಡಾ.ಕೆ.ವಿ.ನೇತ್ರಾವತಿ, ಡಾ.ರವಿಕುಮಾರ್ ನೀಹ, ಡಾ.ಸುಭಾಷ್ ರಾಜಮಾನೆ, ರವಿಕುಮಾರ್ ಬಾಗಿ ಮಾತನಾಡಿದರು. ಉದ್ಯಮಿ ಜಿ.ರಾಜಗೋಪಾಲ್, ಪ್ರಕಾಶಕಿ ಜಗದಾಂಬ ಇತರರಿದ್ದರು.

ಫೋಟೋ: 22ಕೆಡಿಬಿಪಿ1:

ದೊಡ್ಡಬಳ್ಳಾಪುರದಲ್ಲಿ ಡಾ.ಡಿ.ಆರ್.ನಾಗರಾಜ್ ಬಳಗದ ಕಾರ್ಯಕ್ರಮದಲ್ಲಿ ಡಾ.ಪ್ರಕಾಶ್‌ ಮಂಟೇದ ಅವರ ‘ಅರಿವೇ ಕಂಡಾಯ’ ಪುಸ್ತಕ ಬಿಡುಗಡೆ ಮಾಡಲಾಯಿತು.