ಕನ್ನಡಪ್ರಭ ವಾರ್ತೆ ಮಂಡ್ಯ

ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿಯ ಐತಿಹಾಸಿಕ ಶ್ರೀ ವೈರಮುಡಿ ಬ್ರಹ್ಮೋತ್ಸವದ ಹಿನ್ನೆಲೆಯಲ್ಲಿ ವಜ್ರಖಚಿತ ವೈರಮುಡಿ, ರಾಜಮುಡಿ ಮತ್ತು ಇತರೆ ಆಭರಣಗಳನ್ನು ಜಿಲ್ಲಾ ಖಜಾನೆಯಿಂದ ಶನಿವಾರ ಬೆಳಗ್ಗೆ ಮೇಲುಕೋಟೆಗೆ ಕೊಂಡೊಯ್ಯಲಾಯಿತು.

ಜಿಲ್ಲಾ ಖಜಾನೆಯ ಭದ್ರತಾ ಕೊಠಡಿಯಲ್ಲಿಟ್ಟಿದ್ದ ವೈರಮುಡಿ ಸಹಿತ ವಜ್ರಾಭರಣಗಳ ಎರಡು ಗಂಟುಗಳನ್ನು ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಕೆ.ಆರ್.ನಂದಿನಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ, ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದ ನೇತೃತ್ವದಲ್ಲಿ ಬೆಳಗ್ಗೆ 7 ಗಂಟೆಗೆ ಹೊರ ತೆಗೆಯಲಾಯಿತು.

ಬಳಿಕ ಖಜಾನೆ ಮುಖ್ಯದ್ವಾರದಲ್ಲಿ ಆಭರಣಗಳ ಗಂಟುಗಳನ್ನಿಟ್ಟು ಹೂವಿನ ಹಾರ ತೊಡಿಸಿ ಸಾಂಪ್ರದಾಯಿಕವಾಗಿ ಪ್ರಥಮ ಪೂಜೆ ನೆರವೇರಿಸಲಾಯಿತು. ಅಧಿಕಾರಿಗಳು ವೈರಮುಡಿ ಮತ್ತು ವಜ್ರಾಭರಣಗಳಿದ್ದ ಗಂಟುಗಳಿಗೆ ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿದರು.

ಪೂಜೆ ಮುಗಿಸಿ ಆಭರಣಗಳ ಗಂಟುಗಳನ್ನು ಶ್ರೀ ಚೆಲುವನಾರಾಯಣಸ್ವಾಮಿ ದೇವಾಲಯದ ಸ್ಥಾನೀಕಂ ಅವರಿಗೆ ಹಸ್ತಾಂತರಿಸಲಾಯಿತು. ಬೆಳಗ್ಗೆ 7.20ಗಂಟೆಗೆ ಖಜಾನೆ ಆವರಣದಿಂದ ವಾಹನ ನಿರ್ಗಮಿಸಿತು.


ಈ ವೇಳೆ ಪಾಂಡವಪುರ ಉಪ ವಿಭಾಗಾಧಿಕಾರಿ ಕೆ.ಆರ್. ಶ್ರೀನಿವಾಸ್, ಪೊಲೀಸ್ ಅಧಿಕಾರಿಗಳು ಸೇರಿದಂತೆ ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳು, ದೇಗುಲದ ಸಿಬ್ಬಂದಿ ಹಾಜರಿದ್ದರು.

ವಾಹನವೇರಿದ ವೈರಮುಡಿ :

ವೈರಮುಡಿ ಉತ್ಸವದ ಅಂಗವಾಗಿ ವರ್ಷಕ್ಕೊಮ್ಮೆ ಮಾತ್ರ ವೈರಮುಡಿ ಕಿರೀಟವನ್ನು ಖಜಾನೆಯಿಂದ ಹೊರ ತೆಗೆಯಲಾಗುತ್ತದೆ. ಮೈಸೂರಿನ ಶ್ರೀ ಬ್ರಹ್ಮತಂತ್ರ ಸ್ವತಂತ್ರ ಪರಕಾಲಸ್ವಾಮಿ ಮಠದ ವಾಹನದಲ್ಲಿ ವೈರಮುಡಿ, ರಾಜಮುಡಿ ಮತ್ತು ವಜ್ರಾಭರಣಗಳನ್ನು ಪೊಲೀಸ್ ಬಿಗಿ ಬಂದೋಬಸ್ತ್ ನಡುವೆ ಮೇಲುಕೋಟೆಗೆ ಕೊಂಡೊಯ್ಯುವುದು ಸಂಪ್ರದಾಯ. ಅದರಂತೆ ಈ ವರ್ಷವೂ ಅದೇ ವಾಹನದಲ್ಲಿ ಪ್ರಯಾಣ ಬೆಳೆಸಲಾಯಿತು.

ಖಜಾನೆಯಿಂದ ಹೊರಟ ವಾಹನವು ನಂತರ ನಗರದ ಶ್ರೀ ಲಕ್ಷ್ಮಿಜನಾರ್ಧನಸ್ವಾಮಿ ದೇವಾಲಯಕ್ಕೆ ತೆರಳಿತು. ಮಂಗಳವಾದ್ಯಗಳ ಸದ್ದಿನೊಂದಿಗೆ ದೇವಾಲಯ ಅವರಣದಲ್ಲಿ 7.30ಕ್ಕೆ ವೈರಮುಡಿ ಆಭರಣಕ್ಕೆ ಸ್ವಾಗತ ಕೋರಲಾಯಿತು. ಅಲ್ಲಿನ ಮಂಟಪದಲ್ಲಿ ವೈರಮುಡಿ ವಜ್ರಾಭರಣವಿರುವ ಪೆಟ್ಟಿಗೆಗಳನ್ನು ಇಟ್ಟು ಶ್ರೀ ಚೆಲುವನಾರಾಯಣಸ್ವಾಮಿ ದೇವರ ಒಕ್ಕಲಿನವವರು ಸಾಂಪ್ರದಾಯಿಕ ಪೂಜೆ ನೆರವೇರಿಸಿದರು. ಅಲ್ಲಿಂದ 7.45ಕ್ಕೆ ವಾಹನವು ಮೇಲುಕೋಟೆಯತ್ತ ಸಾಗಿತು.

ದಾರಿಯುದ್ದಕ್ಕೂ ಸ್ವಾಗತ :

ಮೇಲುಕೋಟೆಗೆ ತೆರಳುವ ಮಾರ್ಗಮಧ್ಯೆ ಸಿಗುವ ಇಂಡುವಾಳು, ಸುಂಡಹಳ್ಳಿ, ತೂಬಿನಕೆರೆ, ಕಾಳೇನಹಳ್ಳಿ, ರಾಗಿಮುದ್ದನಹಳ್ಳಿ, ಕೋಡಿಶೆಟ್ಟಿಪುರ ಮಾರ್ಗವಾಗಿ ಶ್ರೀರಂಗಪಟ್ಟಣಕ್ಕೆ ತೆರಳಿತು. ವೈರಮುಡಿ, ರಾಜಮುಡಿ ಹೊತ್ತ ವಾಹನ ಮೇಲುಕೋಟೆಗೆ ಸಂಜೆ ವೇಳೆಗೆ ತಲುಪಿತು.

ಮಾರ್ಗದುದ್ದಕ್ಕೂ ಹಳ್ಳಿಗಳ ರಸ್ತೆಗಳಲ್ಲಿ ರಂಗೋಲಿ ಇಟ್ಟು, ತಳಿರು, ತೋರಣ, ಚಪ್ಪರ ಹಾಕಿಕೊಂಡು ಕಾಯುತ್ತಿದ್ದ ಭಕ್ತರು ವೈರಮುಡಿಗೆ ಭಕ್ತಿಪೂರ್ವಕ ಸ್ವಾಗತ ಕೋರಿದರು. ಅಲ್ಲಲ್ಲಿ ಪಾನಕ, ನೀರು ಮಜ್ಜಿಗೆ ಮತ್ತು ಪ್ರಸಾದ ವಿನಿಯೋಗವೂ ನಡೆಯಿತು.