ಪ್ರಧಾನಿ ಮೋದಿಯಿಂದ ಸರ್ವಾಧಿಕಾರಿ ಧೋರಣೆ: ಚಿಂತಕ ಶಿವಸುಂದರ

| Published : Apr 23 2024, 12:48 AM IST

ಸಾರಾಂಶ

ಸಿಂಧನೂರು ನಗರದಲ್ಲಿ ಕೋಟೆ ಈರಣ್ಣ ಕಲ್ಯಾಣ ಮಂಟಪದಲ್ಲಿ ಪ್ರಜಾಪ್ರಭುತ್ವ ರಕ್ಷಣಾ ವೇದಿಕೆಯಿಂದ ಹಮ್ಮಿಕೊಂಡಿದ್ದ ಸಂವಿಧಾನ-ಪ್ರಜಾತಂತ್ರ ಉಳಿವಿಗಾಗಿ ಬಿಜೆಪಿ ಸೋಲಿಸಿ ಜನಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಚಿಂತಕ ಶಿವಸುಂದರ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಸಿಂಧನೂರು

ಯುಪಿಎ ಸರ್ಕಾರದ ಭ್ರಷ್ಟಾಚಾರ ಬಳಸಿಕೊಂಡು ಅಧಿಕಾರಕ್ಕೆ ಬಂದ ಪ್ರಧಾನಿ ಮೋದಿ ಜಾತಿ, ಧರ್ಮದ ಹೆಸರಿನಲ್ಲಿ ಒಡೆದಾಳುವ ನೀತಿ ಅನುಸರಿಸಿ ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ. ಈ ದೇಶವನ್ನು ಕೆಲವೇ ಕೆಲವರ ಕೈಗೆ ಒಪ್ಪಿಸುವ ಹುನ್ನಾರ ನಡೆಸಿದ್ದಾರೆ ಎಂದು ಚಿಂತಕ ಶಿವಸುಂದರ ಆರೋಪಿಸಿದರು.

ನಗರದ ಕೋಟೆ ಈರಣ್ಣ ಕಲ್ಯಾಣ ಮಂಟಪದಲ್ಲಿ ಪ್ರಜಾಪ್ರಭುತ್ವ ರಕ್ಷಣಾ ವೇದಿಕೆಯಿಂದ ಸೋಮವಾರ ಹಮ್ಮಿಕೊಂಡಿದ್ದ ‘ಸಂವಿಧಾನ ಮತ್ತು ಪ್ರಜಾತಂತ್ರದ ಉಳಿವಿಗಾಗಿ ಕೋಮುವಾದಿ ಬಿಜೆಪಿ ಸೋಲಿಸಿ’ ಜನಜಾಗೃತಿ ಸಮಾವೇಶವನ್ನು ಹಲಗೆ ಬಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಈ ದೇಶದಲ್ಲಿ ಹುಟ್ಟಿದ ನಾವೆಲ್ಲರೂ ಈ ದೇಶದ ಪ್ರಜೆಗಳೆ. ಅಂಬೇಡ್ಕರ್ ರಚಿಸಿದ ಸಂವಿಧಾನವು ಸ್ವಾಭಿಮಾನ ಮತ್ತು ಘನತೆಯಿಂದ ಬದುಕುವ ಹಕ್ಕನ್ನು ಕೊಟ್ಟಿದೆ. ಇದು ಭಿಕ್ಷೆ ಅಲ್ಲ. ಆದರೆ ಮೋದಿ ಸರ್ಕಾರ ಸಿಎಎ, ಎನ್ಆರ್‌ಪಿ, ಎನ್ಆರ್‌ಸಿ ಜಾರಿಗೊಳಿಸಿ ದೇಶದ 140 ಕೋಟಿ ಜನರ ನಾಗರಿಕತ್ವಕ್ಕಾಗಿ ದಾಖಲೆ ಕೇಳುತ್ತಿರುವುದರ ಹಿಂದಿನ ಉದ್ದೇಶ ಈ ದೇಶದ ಬಡವರು, ಆದಿವಾಸಿಗಳು, ಅಲ್ಪಸಂಖ್ಯಾತರನ್ನು ಎರಡನೇ ದರ್ಜೆಯ ನಾಗರಿಕರೆಂದು ಗುರುತಿಸಿ ಅವರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳಿಂದ ವಂಚಿತರನ್ನಾಗಿ ಮಾಡುವ ಕುತಂತ್ರ ರೂಪಿಸಿದೆ ಎಂದು ದೂರಿದರು.

ದೇಶದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವವಾಡುತ್ತಿದೆ. ಕಳೆದ ವರ್ಷ 1 ಲಕ್ಷ 67 ಸಾವಿರ ಜನ ನಿರುದ್ಯೋಗಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅದರಲ್ಲಿ ಶೇ.60 ಜನ ದಿನಗೂಲಿಗಳು, ನಿರುದ್ಯೋಗಿ ಯುವಕರು. ಇಸ್ರೇಲ್, ರಷ್ಯಾದ ಯುದ್ಧ ಭೂಮಿಯಲ್ಲಿ ಕೆಲಸ ಮಾಡಲು ಭಾರತೀಯ ಜನರನ್ನು ರಫ್ತು ಮಾಡಲಾಗುತ್ತಿದೆ. ಹೀಗೆ ದೇಶದಲ್ಲಿ ನೂರಾರು ಜ್ವಲಂತ ಸಮಸ್ಯೆಗಳಿದ್ದರೂ ಆ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದೆ ಸದಾ ಹಿಂದೂ-ಮುಸ್ಲಿಂ ಎಂದು ಜಪಿಸುವ ಮೂಲಕ ಸೌಹಾರ್ದದ ಹಂದರಕ್ಕೆ ಬೆಂಕಿ ಬಿಜೆಪಿ ಹಚ್ಚುವ ಕೆಲಸ ಮಾಡಲಾಗುತ್ತಿದೆ. ಇಂತಹ ದುರ್ದಿನಗಳಲ್ಲಿ ಚಳವಳಿ ಮತ್ತು ಜನರ ಅರಿವು ಮಾತ್ರ ದೇಶವನ್ನು ಉಳಿಸಿಕೊಳ್ಳಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಬಂಡಾಯ ಸಾಹಿತಿ ಅಲ್ಲಮಪ್ರಭು ಬೆಟ್ಟದೂರು, ಅಧ್ಯಕ್ಷತೆ ವಹಿಸಿದ್ದ ವೇದಿಕೆಯ ಸಂಚಾಲಕ ಚಂದ್ರಶೇಖರ ಗೊರಬಾಳ ಮಾತನಾಡಿದರು. ಸಿಪಿಐಎಂಎಲ್ ಮಾಸ್ಲೈನ್ ರಾಜ್ಯ ಕಾರ್ಯದರ್ಶಿ ಡಿ.ಎಚ್.ಪೂಜಾರ್, ಸಿಪಿಐ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಬಾಷುಮಿಯಾ, ಕೆಪಿಆರ್‌ಎಸ್‌ ಬಸವಂತರಾಯ, ಬಸವಪರ ಸಂಘಟನೆಯ ರುದ್ರಪ್ಪ ಪಗಡದಿನ್ನಿ, ಜಮಾಅತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಹುಸೇನ್ಸಾಬ್, ಸಿಪಿಐಎಂಎಲ್ ಲಿಬರೇಶನ್ ರಾಜ್ಯ ಸಮಿತಿ ಸದಸ್ಯ ನಾಗರಾಜ ಪೂಜಾರ್ ಇದ್ದರು. ದೇವೇಂದ್ರಗೌಡ ನಿರೂಪಿಸಿದರು. ಬಸವರಾಜ ಬಾದರ್ಲಿ, ಬಸವರಾಜ ಏಕ್ಕಿ, ಬಿ.ಎನ್.ಯರದಿಹಾಳ, ಶಿವಪುತ್ರ ತುರ್ವಿಹಾಳ ಕ್ರಾಂತಿಗೀತೆ ಹಾಡಿದರು.