ವಾಲ್ಮೀಕಿ ನಿಗಮದಲ್ಲಿಯೇ ಹಗರಣ ಮಾಡುವ ನೀಚ ಕೆಲಸಕ್ಕೆ ಕೈ ಹಾಕಿಲ್ಲ: ಶಾಸಕ ನಾಗೇಂದ್ರ

| Published : Oct 18 2024, 12:13 AM IST

ವಾಲ್ಮೀಕಿ ನಿಗಮದಲ್ಲಿಯೇ ಹಗರಣ ಮಾಡುವ ನೀಚ ಕೆಲಸಕ್ಕೆ ಕೈ ಹಾಕಿಲ್ಲ: ಶಾಸಕ ನಾಗೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಬಳ್ಳಾರಿ ನಗರದ ವಾಲ್ಮೀಕಿ ಭವನದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಹಗರಣದಿಂದಾದ ಅಪಮಾನ ಹಾಗೂ ಜೈಲುವಾಸ ನೆನೆದು ವೇದಿಕೆಯಲ್ಲಿಯೇ ಬಿಕ್ಕಿಬಿಕ್ಕಿ ಅತ್ತ ಶಾಸಕ ನಾಗೇಂದ್ರ, ವಿನಾಕಾರಣ ನನ್ನನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಗಿದೆ. ಬಳ್ಳಾರಿ ಜಿಲ್ಲೆಗೆ ಬರಲು ವಾಲ್ಮೀಕಿಯೇ ಬಂದು ಜಾಮೀನು ಕೊಟ್ಟಂತಾಗಿದೆ ಎಂದರು.

ಬಳ್ಳಾರಿ: ವಾಲ್ಮೀಕಿ ಸಮುದಾಯದಲ್ಲಿ ಹುಟ್ಟಿರುವ ನಾನು, ಸಮುದಾಯದ ನಿಗಮದಲ್ಲಿಯೇ ಹಗರಣ ಮಾಡುವಂತಹ ನೀಚ ಕೆಲಸಕ್ಕೆ ಕೈ ಹಾಕಿಲ್ಲ ಎಂದು ಶಾಸಕ ನಾಗೇಂದ್ರ ಸ್ಪಷ್ಟಪಡಿಸಿದರು.

ನಗರದ ವಾಲ್ಮೀಕಿ ಭವನದಲ್ಲಿ ಜಿಲ್ಲಾಡಳಿತದಿಂದ ಆಯೋಜಿಸಿದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಹಗರಣದಿಂದಾದ ಅಪಮಾನ ಹಾಗೂ ಜೈಲುವಾಸ ನೆನೆದು ವೇದಿಕೆಯಲ್ಲಿಯೇ ಬಿಕ್ಕಿಬಿಕ್ಕಿ ಅತ್ತ ಶಾಸಕ ನಾಗೇಂದ್ರ, ವಿನಾಕಾರಣ ನನ್ನನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲಾಗಿದೆ. ಬಳ್ಳಾರಿ ಜಿಲ್ಲೆಗೆ ಬರಲು ವಾಲ್ಮೀಕಿಯೇ ಬಂದು ಜಾಮೀನು ಕೊಟ್ಟಂತಾಗಿದೆ ಎಂದರು.

ಹಗರಣದಲ್ಲಿ ನನ್ನನ್ನು ಸಿಲುಕಿಸಲಾಗಿದೆ. ಇದರಿಂದ ನಾನು ತೀವ್ರವಾಗಿ ನೊಂದಿದ್ದೇನೆ. ಜಿಲ್ಲೆಗೆ ಬರಬಾರದು ಎಂದುಕೊಂಡಿದ್ದೆ. ನನ್ನಿಂದ ಹೀಗಾಗಿದೆ ಎಂದು ರಾಜಕೀಯದಲ್ಲಿ ಇರಬಾರದೆಂದು ನಿರ್ಧರಿಸಿ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ತೀರ್ಮಾನಿಸಿದ್ದೆ. ಆದರೆ, ಅನೇಕ ಹಿರಿಯರ ಸಲಹೆಯಂತೆ ಆರೋಪದಿಂದ ಮುಕ್ತನಾಗಿ ಹೊರ ಬಂದು, ನನ್ನ ಮೇಲಿರುವುದು ಸುಳ್ಳು ಆರೋಪವೆಂದು ಸಾಬೀತುಪಡಿಸಲು ನಿರ್ಧರಿಸಿ, ರಾಜಿನಾಮೆ ನಿರ್ಧಾರದಿಂದ ಹಿಂದೆ ಸರಿದಿದ್ದೇನೆ. ಕೆಟ್ಟ ರಾಜಕೀಯದವರನ್ನು ಈ ಜಿಲ್ಲೆಯಿಂದ ಕಿತ್ತೊಗೆಯುವ ಕೆಲಸ ಮಾಡುವೆ. ಅದನ್ನು ಜನತೆಗೆ ತಿಳಿಸಬೇಕೆಂದು ಕಾರ್ಯಕ್ರಮಕ್ಕೆ ಬಂದಿರುವೆ ಎಂದು ತಿಳಿಸಿದರು.

ಕಣ್ಣೀರು ಹಾಕಿದ ನಾಗೇಂದ್ರ ಅವರನ್ನು ಶಾಸಕ ನಾರಾ ಭರತ್ ರೆಡ್ಡಿ, ಸಹೋದರ ವೆಂಕಟೇಶ್ ಪ್ರಸಾದ್ ಸಮಾಧಾನಪಡಿಸಿದರು.

ಜೈಲು ಗೋಡೆ ಮೇಲೆ ಬರೆದಿಟ್ಟು ಬಂದಿರುವೆ: ಬಿಜೆಪಿಯವರು ಕ್ಷುಲ್ಲಕ ಕಾರಣಕ್ಕೆ ಸರ್ಕಾರವನ್ನು ಅಸ್ಥಿರಗೊಳಿಸುವ ಕಾರ್ಯ ಮಾಡುತ್ತಿದ್ದಾರೆ. ಜನಗಳ ಮಧ್ಯೆ ರಾಜಕೀಯ, ಹೋರಾಟ ಮಾಡಬೇಕು. ಅದರಲ್ಲಿ ಸೋಲು-ಗೆಲುವು ಸಾಮಾನ್ಯ. ಆದರೆ, ಇಂತಹ ಕ್ಷುಲ್ಲಕ ರಾಜಕೀಯ ಮಾಡಬಾರದು. ನಾನು ಜೈಲು ಅನೇಕ ಬಾರಿ ನೋಡಿದ್ದೇನೆ. ಆದರೆ, ಸುಳ್ಳು ಆರೋಪದಲ್ಲಿ ನನ್ನ ಮೇಲೆ ಗೂಬೆ ಕೂರಿಸಿದ, ಹಗರಣವೆಂದು ಆರೋಪ ಮಾಡುತ್ತಿರುವ ಬಿಜೆಪಿಯವರ ಹೆಸರನ್ನು ಪರಪ್ಪನ ಅಗ್ರಹಾರದ ಜೈಲಿನ ಗೋಡೆಯ ಮೇಲೆ ಬರೆದಿಟ್ಟು ಬಂದಿದ್ದೇನೆ. ಬಿಜೆಪಿಯವರು ಮುಂದಿನ ದಿನಗಳಲ್ಲಿ ಅದೇ ಜೈಲು ಪಾಲಾಗಲಿದ್ದಾರೆ. ಆಗಲಾದರೂ ಅವರಿಗೆ ತಾವು ಮಾಡಿದ ತಪ್ಪು ಅರಿವಾಗಲಿ ಎಂದು ನಾಗೇಂದ್ರ ಭಾವುಕರಾಗಿ ಮಾತನಾಡಿದರು.

ಜನಾರ್ದನ ರೆಡ್ಡಿ ಸಂಡೂರಿನಲ್ಲಿ ಅರಮನೆ ಮಾಡಿದರೂ ಕೈ ಗೆಲುವು ಖಚಿತ: ಜನಾರ್ದನ ರೆಡ್ಡಿ ಸಂಡೂರಿನಲ್ಲಿ ಮನೆ ಅಲ್ಲ, ಅರಮನೆಯನ್ನೇ ಮಾಡಲಿ; ಕಾಂಗ್ರೆಸ್ ಗೆಲುವು ಖಚಿತ ಎಂದು ಶಾಸಕ ಬಿ. ನಾಗೇಂದ್ರ ತಿರುಗೇಟು ನೀಡಿದ್ದಾರೆ.

ವಾಲ್ಮೀಕಿ ಜಯಂತಿ ಹಿನ್ನೆಲೆಯಲ್ಲಿ ನಗರದಲ್ಲಿ ಜರುಗಿದ ಮೆರವಣಿಗೆಯಲ್ಲಿ ಪಾಲ್ಗೊಂಡ ಅವರು ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.ಜನಾರ್ದನ ರೆಡ್ಡಿ ಬಳ್ಳಾರಿಗೆ ಬಂದಿರುವುದರಿಂದ ರಾಜಕೀಯದ ಮೇಲೆ ಯಾವುದೇ ಪರಿಣಾಮ ಆಗುವುದಿಲ್ಲ. ಕಾಂಗ್ರೆಸ್‌ ಗೆ ಯಾವುದೇ ಸಮಸ್ಯೆಯಿಲ್ಲ. ಇಡಿ, ಸಿಬಿಐ ಭಯಕ್ಕೆ ಜನಾರ್ದನ ರೆಡ್ಡಿ ಬಿಜೆಪಿ ಸೇರಿದ್ದಾರೆ. ಅವರು ಕೆಆರ್‌ಪಿ ಪಕ್ಷ ಸ್ಥಾಪನೆ ಮಾಡಿದಾಗ ಬಿಜೆಪಿ ವಿರುದ್ಧ ಸಾಕಷ್ಟು ಆರೋಪ ಮಾಡಿದ್ದರು. ಇದೀಗ ಮಾತಿನ ವರಸೆಯೇ ಬದಲಾಯಿಸಿದ್ದಾರೆ. ಜನಾರ್ದನ ರೆಡ್ಡಿ ಅನುಕೂಲಕ್ಕೆ ತಕ್ಕಂತೆ ಮಾತನಾಡುತ್ತಾರೆ ಎಂದು ಟೀಕಿಸಿದರು.

ಇದೀಗ ಜನಾರ್ದನ ರೆಡ್ಡಿ ನನ್ನ ವಿರುದ್ಧ ಮಾತನಾಡುತ್ತಿದ್ದಾರೆ. ಮೊದಲು ಅವರ ಜತೆ ಇದ್ದಾಗ ಒಳ್ಳೆಯವನಾಗಿದ್ದೆ. ಈಗ ಪಕ್ಷ ಬದಲಾದ ಕೂಡಲೇ ನಾಗೇಂದ್ರ ಕೆಟ್ಟವನಾಗಿಬಿಟ್ಟನೇ ಎಂದು ಪ್ರಶ್ನಿಸಿದರು.ಬಿಜೆಪಿಯಿಂದ ಸಿಬಿಐ, ಇಡಿ ಬಳಸಿಕೊಂಡು ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಹುನ್ನಾರ ನಡೆದಿದೆ. ಈ ಕಾರಣಕ್ಕಾಗಿಯೇ ನನ್ನನ್ನು ಟಾರ್ಗೆಟ್‌ ಮಾಡಲಾಗಿದೆ. ಈ ಪ್ರಕರಣದಿಂದ ಶೀಘ್ರದಲ್ಲೇ ಆರೋಪ ಮುಕ್ತನಾಗುವೆ. ಬಿಜೆಪಿ ಕುತಂತ್ರ ಬಯಲಾಗಲಿದೆ ಎಂದು ನಾಗೇಂದ್ರ ತಿಳಿಸಿದರು.