ಹಿಂದಿನ ಶಾಸಕರು ರಸ್ತೆಗೆ ಮಣ್ಣನ್ನಾದರೂ ಹಾಕಿಸಿದ್ದರಾ?

| Published : Feb 28 2025, 12:45 AM IST

ಸಾರಾಂಶ

ಭರಮಸಾಗರ ಸಮೀಪದ ಹುಲ್ಲೆಹಾಳ್‌ ಗೊಲ್ಲರಹಟ್ಟಿಯಲ್ಲಿ ವಿವಿಧ ಕಾಮಗಾರಿಗಳಿಗೆ ಶಾಸಕ ಡಾ.ಎಂ.ಚಂದ್ರಪ್ಪ ಭೂಮಿ ಪೂಜೆ ನೆರವೇರಿಸಿದರು.

ಹುಲ್ಲೇಹಾಳ್‌ ಗೊಲ್ಲರಹಟ್ಟಿಯಲ್ಲಿ 2 ಕೋಟಿ ರು. ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಶಾಸಕ ಎಂ.ಚಂದ್ರಪ್ಪ ಪ್ರಶ್ನೆ?ಕನ್ನಡಪ್ರಭ ವಾರ್ತೆ ಸಿರಿಗೆರೆ

ಈ ಹಿಂದೆ ಭರಮಸಾಗರ ಮತ್ತು ಹೊಳಲ್ಕೆರೆ ಕ್ಷೇತ್ರದಲ್ಲಿ ಶಾಸಕರಾಗಿದ್ದವರು ರಸ್ತೆಗೆ ಮಣ್ಣನ್ನಾದರೂ ಹಾಕಿಸಿದ್ದರಾ ಎಂಬುದಾಗಿ ಶಾಸಕ ಡಾ.ಎಂ.ಚಂದ್ರಪ್ಪ ಪ್ರಶ್ನೆ ಮಾಡಿದರು.

ಭರಮಸಾಗರ ಸಮೀಪದ ಹುಲ್ಲೇಹಾಳು ಗೊಲ್ಲರಹಟ್ಟಿಯಲ್ಲಿ 2 ಕೋಟಿ ರು.ವೆಚ್ಚದ ನೂತನ ಸಿಸಿ ರಸ್ತೆ ಕಾಮಗಾರಿ, ಆಶ್ರಯ ಬಡಾವಣೆ ನಿರ್ಮಾಣ ಹಾಗೂ ಎರಡು ಶಾಲಾ ಕೊಠಡಿ ನಿರ್ಮಾಣಕ್ಕೆ ಗುರುವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಏಕೀಕೃತ ಕ್ಷೇತ್ರದಲ್ಲಿ ಹತ್ತಾರು ಶಾಸಕರು ಬಂದು ಹೋದರು. ಯಾರಾದರೂ ಕನಿಷ್ಠ ರಸ್ತೆಗೆ ಮಣ್ಣನ್ನಾದರೂ ಹಾಕಿಸಲಿಲ್ಲ. ನಾನು ಶಾಸಕನಾದ ಮೇಲೆ ಇಡೀ ಕ್ಷೇತ್ರದಲ್ಲಿ ರಸ್ತೆ ನಿರ್ಮಾಣಗಳಿಗೆ ಆದ್ಯತೆಯ ಮೇಲೆ ಕೆಲಸ ಮಾಡಿದ್ದೇನೆ. ಕ್ಷೇತ್ರದ ತುಂಬೆಲ್ಲಾ ರಸ್ತೆಗಳು ಆಗಿವೆ. ಅದಕ್ಕಾಗಿಯೇ ನೀವು ನನಗೆ ರಸ್ತೆರಾಜ ಎಂದು ಕರೆದಿರಿ ಎಂದು ಹೇಳಿದರು.

ನನ್ನ ಅಭಿವೃದ್ಧಿ ಕೆಲಸಗಳ ಬಗ್ಗೆ ನಿಮಗೆ ತಿಳಿಯಬೇಕೆಂದಿದ್ದರೆ ಹೊಳಲ್ಕೆರೆ ಪಟ್ಟಣಕ್ಕೆ ಬನ್ನಿ. ಅಲ್ಲಿನ ಸುಸಜ್ಜಿತ ಆಸ್ಪತ್ರೆ, ಬಸ್‌ ನಿಲ್ದಾಣ, ಶಾಲೆಗಳ ನಿರ್ಮಾಣ ನೋಡಿ ಕಣ್ಣುತುಂಬಿಕೊಳ್ಳಿ. ಅಂಹದ್ದೆ ಕೆಲಸಗಳನ್ನು ಇಡೀ ಕ್ಷೇತ್ರದಲ್ಲಿ ಮಾಡುತ್ತಿದ್ದೇನೆ. ಗ್ರಾಮಗಳ ಅಗತ್ಯಗಳನ್ನು ಅರಿತು ಗುಣಮಟ್ಟದ ಶಾಲೆಗಳ ನಿರ್ಮಾಣ, ನೀರಿನ ಟ್ಯಾಂಕ್‌, ಪೈಪ್‌ ಲೈನ್‌, ಅಂಗನವಾಡಿ ಕಟ್ಟಡಗಳನ್ನು ನಿರ್ಮಾಣ ಮಾಡಿದ್ದೇನೆ ಎಂದರು.

ಕ್ಷೇತ್ರದ ಮಕ್ಕಳ ಶಿಕ್ಷಣವೂ ನನ್ನ ಆದ್ಯತೆಯ ಪಟ್ಟಿಯಲ್ಲಿದೆ. ಅದಕ್ಕಾಗಿಯೇ ಕ್ಷೇತ್ರದ ಹತ್ತಾರು ಗ್ರಾಮಗಳಲ್ಲಿ ಉತ್ತಮ ಶಾಲಾ ಕಟ್ಟಡಗಳನ್ನು ನಿರ್ಮಾಣ ಮಾಡಿರುವೆ. ಬಡವರು, ಹಿಂದುಳಿದವರು ಇರುವ ಕಡೆ ಪುಸ್ತಕ, ನೋಟ್‌ ಪುಸ್ತಕ ವಿತರಿಸಿರುವುದಲ್ಲದೆ, ಮತ್ತೆ ಕೆಲವು ಕಡೆ ಮಕ್ಕಳು ಶಾಲೆಗೆ ಹೋಗಿಬರಲು ಸ್ವಂತ ವೆಚ್ಚದಲ್ಲಿ ಬಸ್‌ ಸೌಲಭ್ಯವನ್ನೂ ಮಾಡಿರುವೆ ಎಂದರು.

ಅಜ್ಜಪ್ಪನಹಳ್ಳಿ ಬಳಿ 250 ಕೋಟಿ ರು. ವೆಚ್ಚದಲ್ಲಿ ವಿದ್ಯುತ್‌ ಕೇಂದ್ರ ನಿರ್ಮಾಣ ಆಗುತ್ತಿದೆ. ಕಾಮಗಾರಿ ಪೂರ್ಣಗೊಳಿಸಲು ಒಂದು ವರ್ಷದ ಕಾಲಮಿತಿ ವಿಧಿಸಲಾಗಿದೆ. ಅಷ್ಟರೊಳಗೆ ವಿದ್ಯುತ್‌ ಕೇಂದ್ರ ಚಾಲನೆ ಆದಲ್ಲಿ ಈ ಭಾಗದ ರೈತರ ವಿದ್ಯುತ್‌ ಸಮಸ್ಯೆ ಬಗೆಹರಿಯುತ್ತದೆ. ಜೊತೆಗೆ ಈ ಕೇಂದ್ರದ ಅಡಿಯಲ್ಲಿ ಇನ್ನೂ ಎರಡು ಕೇಂದ್ರಗಳನ್ನು ಸ್ಥಾಪಿಸಬಹುದಾಗಿದೆ ಎಂದರು.

ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರ ದೂರದೃಷ್ಟಿಯಿಂದ ಭರಮಸಾಗರ ಮತ್ತು ಸುತ್ತಲಿನ 43 ಕೆರೆಗಳು ಭರ್ತಿಯಾಗಿವೆ. ರೈತರು ಅಡಿಕೆ ಬೆಳೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಅವರಿಗೆ ಇರುವ ವಿದ್ಯುತ್‌ ಸಮಸ್ಯೆಯನ್ನೂ ಕೂಡ ಬಗೆಹರಿಸಿಕೊಡಲಾಗುವುದು ಎಂದರು.

ಬಿಜೆಪಿ ಯುವಮೋರ್ಚಾದ ‍ಚೌಲಿಹಳ್ಳಿ ಶೈಲೇಶ್‌ ಮಾತನಾಡಿ, ಶಾಸಕ ಡಾ.ಎಂ.ಚಂದ್ರಪ್ಪ ಇಡೀ ಕ್ಷೇತ್ರದಲ್ಲಿ ಪಾದರಸದಂತೆ ಓಡಾಡಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರದ ಮಟ್ಟದಲ್ಲಿ ಅನುದಾನವನ್ನು ತರುವ ಕಲೆಯನ್ನು ಅವರು ಕರಗತ ಮಾಡಿಕೊಂಡಿದ್ದಾರೆ. ಅವರು ತರುವ ಅನುದಾನದಲ್ಲಿ ಹೊಳಲ್ಕೆರೆ ಕ್ಷೇತ್ರ ಸಮಗ್ರ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದರು.

ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ನಾಗಭೂಷಣ್, ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಶಿವಮೂರ್ತಿ, ಗ್ರಾಪಂ ಸದಸ್ಯರಾದ ಹನುಮಂತಪ್ಪ, ರುದ್ರಪ್ಪ, ಸಣ್ಣ ಕರಿಯಪ್ಪ, ತಿಪ್ಪೇಸ್ವಾಮಿ, ನಾರಪ್ಪ, ನಾಗಪ್ಪ, ಶರಣಪ್ಪ, ಕಾಂತರಾಜ್, ನಾರಪ್ಪ, ಸುರೇಶ್ ಬಾಬು, ನಿಂಗಣ್ಣ, ಊರಿನ ಗ್ರಾಮಸ್ಥರು ಭಾಗವಹಿಸಿದ್ದರು.

ನಿಮ್ಮೂರಿನ ಶಾಲೆಗೂ ಬಸ್‌ ಕೊಡುವೆ: ಚಂದ್ರಪ್ಪ

ರಾಜ್ಯದಲ್ಲಿ ಯಾವ ಶಾಸಕರೂ ಸಹ ಓದುವ ಮಕ್ಕಳಿಗೆ ನೆರವಾಗಲು ಸ್ವಂತ ಬಸ್‌ ಸೌಲಭ್ಯ ಒದಗಿಸಿಲ್ಲ. ಆದರೆ ನಾನು ಕ್ಷೇತ್ರದ ಹಲವು ಕಡೆ ಉಚಿತವಾಗಿ ಬಸ್‌ಗಳ ಸೌಲಭ್ಯ ನೀಡಿದ್ದೇನೆ. ಅಂತಹುದೇ ನೆರವು ಹುಲ್ಲೇಹಾಳ್‌ ಗೊಲ್ಲರಹಟ್ಟಿ ಶಾಲೆಗೂ ಬಸ್‌ ಸೌಲಭ್ಯ ಅಗತ್ಯವಾಗಿದೆಯೆಂದು ಕೇಳಿ ತಿಳಿದಿದ್ದೇನೆ. ಇಲ್ಲಿಯ ಶಾಲಾ ಮಕ್ಕಳ ಅನುಕೂಲಕ್ಕೆ ಬಸ್ಸೊಂದನ್ನು ಶಾಲೆಗೆ ಕೊಡಿಸುವೆ. ಅದು ಗುಣಮಟ್ಟದ ಬಸ್‌ ಆಗಿದ್ದು 20 ವರ್ಷಗಳಾದರೂ ದುರಸ್ಥಿಗೆ ಬರುವುದಿಲ್ಲ ಎಂದು ಚಂದ್ರಪ್ಪ ಭರವಸೆ ನೀಡಿದರು.