ಉದ್ಯೋಗ ಖಾತ್ರಿ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬುದು ಅರ್ಥ ಮಾಡಿಕೊಳ್ಳಲು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ 11 ವರ್ಷ ಬೇಕಾಯಿತಾ ಎಂದು ಕಾಂಗ್ರೆಸ್ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಪ್ರಶ್ನಿಸಿದ್ದಾರೆ.

- ನರೇಗಾದಲ್ಲಿ ಭ್ರಷ್ಟಾಚಾರವೆಂದ ಕೇಂದ್ರಕ್ಕೆ ಸಂಸದೆ ಟಾಂಗ್‌ - ಮೊದ್ಲು ದುಗ್ಗಮ್ಮನ ಜಾತ್ರೆ, ಆಮೇಲೆ ಚುನಾವಣೆ: ಎಸ್ಸೆಸ್ಸೆಂ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬುದು ಅರ್ಥ ಮಾಡಿಕೊಳ್ಳಲು ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರಕ್ಕೆ 11 ವರ್ಷ ಬೇಕಾಯಿತಾ ಎಂದು ಕಾಂಗ್ರೆಸ್ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಪ್ರಶ್ನಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವ್ಯವಹಾರ ನಡೆಸಿದ್ದರೆ ಕೇಂದ್ರ ಸರ್ಕಾರ ತನಿಖೆ ನಡೆಸಲು ಅವಕಾಶವಿದೆ. ಕೈಯಲ್ಲಿನ ಅಧಿಕಾರ ಬಿಟ್ಟು ಮನರೇಗಾ ಯೋಜನೆಯ ಮೂಲ ಸ್ವರೂಪ, ಹೆಸರನ್ನೇ ಬದಲಿಸಿದ್ದಾರೆ. ಈ ನಡೆಯ ವಿರುದ್ಧ ಕರ್ನಾಟಕ ಸೇರಿದಂತೆ ದೇಶವ್ಯಾಪಿ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದರು.

ದಾವಣಗೆರೆ ಸೇರಿದಂತೆ ರಾಜ್ಯದಲ್ಲಿ ಕಾಂಗ್ರೆಸ್ ಹಮ್ಮಿಕೊಂಡ ಕೇಂದ್ರದ ವಿರುದ್ಧದ ಹೋರಾಟದಲ್ಲಿ ನಮ್ಮೆಲ್ಲಾ ಮುಖಂಡರು, ಕಾರ್ಯಕರ್ತರು, ಕಾರ್ಮಿಕರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಡಾ. ಪ್ರಭಾ ಮನವಿ ಮಾಡಿದರು.

- - -

(ಬಾಕ್ಸ್‌)

* ಮೊದ್ಲು ದುಗ್ಗಮ್ಮನ ಜಾತ್ರೆ, ಆಮೇಲೆ ಚುನಾವಣೆ: ಎಸ್ಸೆಸ್ಸೆಂ ದಾವಣಗೆರೆ: ಗ್ರಾಮಗಳನ್ನು ಅಭಿವೃದ್ಧಿಪಡಿಸಲು ಮನರೇಗಾ ಯೋಜನೆ ಮೂಲಕ ಪ್ರಯತ್ನಿಸಲಾಗುತ್ತದೆ. ಕೆರೆ, ಕಟ್ಟೆಗಳಿಗೆ ಕಾಯಕಲ್ಪ, ರಸ್ತೆ, ನಾಲೆ, ಚರಂಡಿ, ಶಾಲೆ ನಿರ್ಮಾಣ ಹೀಗೆ ಸಾಕಷ್ಟು ಕಾಮಗಾರಿ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ಗ್ರಾಪಂಗಳಿಗೆ ಸರ್ಕಾರ ನರೇಗಾ ಯೋಜನೆಯಡಿ ಕೋಟ್ಯಂತರ ರು. ಅನುದಾನ ನೀಡಿತ್ತು. ಅದೇ ರೀತಿ ಗ್ರಾಮೀಣ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಅನುದಾನ ಕೊಟ್ಟು, ಗ್ರಾಮಾಭಿವೃದ್ಧಿಗೆ ಸ್ಪಂದಿಸಬೇಕು ಎಂದರು.

ಕೇಂದ್ರ ಮತ್ತು ರಾಜ್ಯದ ಅನುದಾನದ ಪಾಲನ್ನು 60-40ರಂತೆ ಬದಲಾವಣೆ ಮಾಡಿರುವುದು, ಮಹಾತ್ಮ ಗಾಂಧೀಜಿ ಹೆಸರು ನರೇಗಾ ಯೋಜನೆಯಿಂದ ಕೈಬಿಟ್ಟಿರುವುದು, ನರೇಗಾದ ಸ್ವರೂಪವನ್ನೇ ಬದಲಿಸಿದ ಕೇಂದ್ರದ ವಿರುದ್ಧ ಕಾಂಗ್ರೆಸ್ ಹೋರಾಟ ಹಮ್ಮಿಕೊಂಡಿದೆ. ದಾವಣಗೆರೆ ಸೇರಿದಂತೆ ರಾಜ್ಯವ್ಯಾಪಿ ತೀವ್ರ ಹೋರಾಟ ನಡೆಸಲಾಗುವುದು ಎಂದು ಸಚಿವರು ಹೇಳಿದರು.

ತಮ್ಮ ತಂದೆ, ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರ ಅಗಲಿಕೆಯಿಂದಾಗಿ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯಲಿದೆ. ಉಪ ಚುನಾವಣೆಗೆ ಇನ್ನೂ ಕಾಲಾವಕಾಶ ಇದೆ. ನಾವೆಲ್ಲರೂ ಮೊದಲು ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆ, ಹಬ್ಬ ಮಾಡೋಣ. ಆ ನಂತರ ಚುನಾವಣೆ ಬಗ್ಗೆ ಯೋಚಿಸೋಣ ಎಂದು ಪ್ರಶ್ನೆಯೊಂದಕ್ಕೆ ಎಸ್ಸೆಸ್ಸೆಂ ಪ್ರತಿಕ್ರಿಯಿಸಿದರು.

- - -

(ಫೋಟೋಗಳು)