ಟೌನ್‌ಶಿಪ್ ನಿರ್ಮಿಸುವಂತೆ ಸರ್ಕಾರಕ್ಕೆ ರೈತರು ಅರ್ಜಿ ಹಾಕಿದ್ರಾ?: ಕೋಡಿಹಳ್ಳಿ ಚಂದ್ರಶೇಖರ್

| Published : Nov 15 2024, 12:33 AM IST

ಟೌನ್‌ಶಿಪ್ ನಿರ್ಮಿಸುವಂತೆ ಸರ್ಕಾರಕ್ಕೆ ರೈತರು ಅರ್ಜಿ ಹಾಕಿದ್ರಾ?: ಕೋಡಿಹಳ್ಳಿ ಚಂದ್ರಶೇಖರ್
Share this Article
  • FB
  • TW
  • Linkdin
  • Email

ಸಾರಾಂಶ

ನಂದಗುಡಿ ಟೌನ್‌ಶಿಪ್ ಯೋಜನೆಯನ್ನು ವಾಪಸ್ ಪಡೆಯದಿದ್ದರೆ ಸರ್ಕಾರದ ವಿರುದ್ಧ ರೈತ ಸಂಘದಿಂದ ಉಗ್ರ ಹೋರಾಟ ಮಾಡುತ್ತೇವೆ. ಆದ್ದರಿಂದ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ ಅವರು ರೈತ ಚಳವಳಿಗೆ ಅವಕಾಶ ಕೊಡದೆ ಟೌನ್‌ಶಿಪ್ ಯೋಜನೆ ಕೈಬಿಡಬೇಕು .

ಕನ್ನಡಪ್ರಭವಾರ್ತೆ ಹೊಸಕೋಟೆ

ತಾಲೂಕಿನ ನಂದಗುಡಿ- ಸೂಲಿಬೆಲೆ ಹೋಬಳಿ ವ್ಯಾಪ್ತಿಯಲ್ಲಿ ಟೌನ್ ಶಿಪ್ ನಿರ್ಮಾಣ ಮಾಡುವಂತೆ ಇಲ್ಲಿನ ರೈತರು ಸರ್ಕಾರಕ್ಕೆ ಅರ್ಜಿ ಹಾಕಿದ್ರಾ? ಟೌನ್ ಶಿಪ್ ನಿರ್ಮಾಣಕ್ಕೆ ಭೂಮಿ ಕಸಿದುಕೊಳ್ಳುವ ಹಕ್ಕು ಸರ್ಕಾರಕ್ಕೆ ಕೊಟ್ಟವರಾರು? ಎಂದು ನಂದಗುಡಿ ಟೌನ್ ಶಿಪ್ ವಿಚಾರವಾಗಿ ಸರ್ಕಾರದ ನಡೆ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದ ಪ್ರೆಸ್ ಕ್ಲಬ್ ನಲ್ಲಿ ನಂದಗುಡಿಯ ಟೌನ್‌ಶಿಪ್ ನಿರ್ಮಾಣ ವಿರೋಧಿಸಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಟೌನ್ ಶಿಪ್ ನೆಪದಲ್ಲಿ ಸರ್ಕಾರ ಗೋಮಾಳ, ಕೆರೆ- ಕಾಲುವೆಗಳನ್ನು ವಶಪಡಿಸಿಕೊಂಡು ರಿಯಲ್ ಎಸ್ಟೇಟ್ ಮಾಫಿಯಾಗಳಿಗೆ ಭೂಮಿ ಮಾರುವ ಮೂಲಕ ಹಣ ಲಪಟಾಯಿಸುವ ಹುನ್ನಾರ ನಡೆಸುತ್ತಿದೆ ಎಂದು ಆರೋಪಿಸಿದ ಅವರು, ಇದರ ಜೊತೆ ರೈತರ ಕೃಷಿ ಭೂಮಿಯನ್ನು ಶ್ರೀಮಂತ ಉದ್ಯಮಿಗಳ ಪಾಲು ಮಾಡಿ ರೈತರನ್ನು ಬೀದಿಗೆ ಕರೆತರುವ ಯೋಜನೆ ಇದಾಗಿದೆ, ಯೋಜನೆ ಸ್ಥಗಿತಗೊಳಿಸಿ ರಿಯಲ್ ಎಸ್ಟೇಟ್ ಮಾಡಲು ಹೊರಟಿರುವ ಸರ್ಕಾರ ಕೂಡಲೇ ತಾಲೂಕಿನಲ್ಲಿ 18,500 ಎಕರೆ ಭೂಸ್ವಾಧೀನಕ್ಕೆ ಮುಂದಾಗಿರುವುದನ್ನು ನಿಲ್ಲಿಸಬೇಕು ಎಂದರು.

ಸರ್ಕಾರದ ಅನಾಚಾರ:ರೈತರ ಜಮೀನನ್ನು ಕೈಗಾರಿಕೆಗಳಿಗೆ ವಶಪಡಿಸಿಕೊಂಡು ರೈತರ ಹೊಟ್ಟೆಗೆ ತಣ್ಣೀರು ಬಟ್ಟೆ ಹಾಕಿಸುವ ಕೆಲಸವನ್ನು ಆಳುವ ಸರ್ಕಾರಗಳು ಮಾಡುತ್ತಿವೆ. ಕೈಗಾರಿಕೆಗಳ ಸ್ಥಾಪನೆಗೆ ನಮ್ಮ ವಿರೋಧ ಎಂದಿಗೂ ಇಲ್ಲ. ಆದರೆ ಕೃಷಿ ಭೂಮಿಯನ್ನು ಕೈಗಾರಿಕೆಗಳಿಗೆ ಬಳಸದೇ ವರ್ಗೀಕರಣ ಮಾಡುವ ಮೂಲಕ ಕೃಷಿಯೇತರ ಜಮೀನನ್ನು ಕೈಗಾರಿಕೆಗಳ ಸ್ಥಾಪನೆಗೆ ಬಳಕೆ ಮಾಡಿಕೊಳ್ಳಬೇಕು. 1961ರ ಭೂ ಸುಧಾರಣಾ ಕಾಯ್ದೆ ಜಾರಿ ಮಾಡಿ ರೈತರ ಜಮೀನು ಉಳಿಸಬೇಕು. ದೇಶದಲ್ಲಿ ಆಹಾರ ಉತ್ಪಾದನೆ ಮೇಲೆ ಯಾವುದೇ ಪರಿಣಾಮ ಬೀರದಂತೆ ಮಾಡಬೇಕು. ಹಾಗೆಯೇ ನಂದಗುಡಿಯಲ್ಲಿ ಟೌನ್‌ಶಿಪ್ ಯೋಜನೆ ಕೈ ಬಿಡುವ ಮೂಲಕ ಸರ್ಕಾರದ ಅನಾಚಾರದ ಕೆಲಸ ನಿಲ್ಲಿಸಬೇಕು ಎಂದರು.

ರೈತ ಚಳುವಳಿಯ ಎಚ್ಚರಿಕೆ:

ನಂದಗುಡಿ ಟೌನ್‌ಶಿಪ್ ಯೋಜನೆಯನ್ನು ವಾಪಸ್ ಪಡೆಯದಿದ್ದರೆ ಸರ್ಕಾರದ ವಿರುದ್ಧ ರೈತ ಸಂಘದಿಂದ ಉಗ್ರ ಹೋರಾಟ ಮಾಡುತ್ತೇವೆ. ಆದ್ದರಿಂದ ಸರ್ಕಾರ ಹಾಗೂ ಸಿಎಂ ಸಿದ್ದರಾಮಯ್ಯ ಅವರು ರೈತ ಚಳವಳಿಗೆ ಅವಕಾಶ ಕೊಡದೆ ಟೌನ್‌ಶಿಪ್ ಯೋಜನೆ ಕೈಬಿಡಬೇಕು ಎಂದು ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದರು.

ಕರ್ನಾಟಕ ರಾಜ್ಯರೈತ ಸಂಘ, ಹಸಿರು ಸೇನೆ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಬೈರೇಗೌಡ, ರಾಜ್ಯ ಉಪಾಧ್ಯಕ್ಷ ಕೆಂಚೇಗೌಡ, ತಾಲೂಕು ಅಧ್ಯಕ್ಷ ಹಕ್ಕಲೇಗೌಡ, ಗೌರವಾಧ್ಯಕ್ಷ ಬಚ್ಚೇಗೌಡ, ಉಪಾಧ್ಯಕ್ಷ ರಾಜಣ್ಣ, ಕಾರ್ಯಾಧ್ಯಕ್ಷ ಮುನಿರಾಜಪ್ಪ, ಪ್ರಧಾನ ಕಾರ್ಯದರ್ಶಿ ಸುರೇಶ್, ಸಂಘಟನಾ ಕಾರ್ಯದರ್ಶಿ ವೆಂಕಟೇಶ್ ಹಾಗೂ ನಂದಗುಡಿ ಹಾಗೂ ಸೂಲಿಬೆಲೆ ಹೋಬಳಿ ಭಾಗದ ಗ್ರಾಮದ ರೈತರು ಹಾಜರಿದ್ದರು.

ಸರ್ಕಾರ ಶ್ವೇತ ಪತ್ರ ಹೊರಡಿಸಲಿ

‘ಸರ್ಕಾರಗಳು ಲಕ್ಷಾಂತರ ಎಕರೆ ಲೆಕ್ಕದಲ್ಲಿ ಕೃಷಿ ಜಮೀನನ್ನು ಈಗಾಗಲೇ ರಾಜ್ಯದಲ್ಲಿ ಟೌನ್ ಶಿಪ್ ಹೆಸರಲ್ಲಿ ವಶಕ್ಕೆ ಪಡೆದಿದೆ. ಆದರೆ ರೈತರಿಂದ ವಶಕ್ಕೆ ಪಡೆದ ಜಮೀನಿನಲ್ಲಿ ಎಷ್ಟು ಪ್ರದೇಶದಲ್ಲಿ ಕೈಗಾರಿಕೆ ಸ್ಥಾಪನೆ ಮಾಡಿದೆ? ಕೈಗಾರಿಕೇತರ ಕೆಲಸಕ್ಕೆ ಎಷ್ಟು ಜಮೀನು ಬಳಕೆ ಆಗಿದೆ? ಖಾಲಿ ಎಷ್ಟು ಜಾಗ ಉಳಿದಿದೆ ಎಂದು ಕೂಡಲೇ ಶ್ವೇತ ಪತ್ರ ಹೊರಡಿಸಬೇಕು.’

ಕೋಡಿಹಳ್ಳಿ ಚಂದ್ರಶೇಖರ್, ರಾಜ್ಯಾಧ್ಯಕ್ಷರು, ಹಸಿರುಸೇನೆ