ಹಾಲಿನ ನೊರೆಯಂತೆ ದುಮ್ಮಿಕ್ಕುವ ದಿಡಗ ಜಲಪಾತ

| Published : Jun 14 2024, 01:01 AM IST

ಸಾರಾಂಶ

ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರು ಮಳೆಯಿಂದ ಇಳಕಲ್ಲ ತಾಲೂಕಿನ ದಮ್ಮೂರು ಗ್ರಾಮದ ಹೊರವಲಯದ ದಿಡಗ ಜಲಪಾತ ಬೆಟ್ಟದ ಮೇಲಿಂದ ಧುಮ್ಮಿಕ್ಕುತ್ತಿದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ.

ಆರ್‌. ನರಸಿಂಹಮೂರ್ತಿ

ಕನ್ನಡಪ್ರಭ ವಾರ್ತೆ ಅಮೀನಗಡ

ಮಳೆಗಾಲ ಬಂತೆಂದರೆ ಸಾಕು ಎಲ್ಲೆಡೆ ಜಲಪಾತಗಳು ಜೀವಕಳೆ ತುಂಬಿ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತವೆ. ಮಲೆನಾಡು ಭಾಗ ಜಲಪಾತಗಳಿಂದಲೇ ಪ್ರಸಿದ್ಧಿಯಾಗಿದೆ. ಆದರೆ. ಬೆಳವಲು ನಾಡಿನಲ್ಲಿ ಜಲಪಾತಗಳು ಅಪರೂಪ. ಇದ್ದರೂ ಮಳೆ ಸಂದರ್ಭದಲ್ಲಿ ಮಾತ್ರ ಗೋಚರಿಸಿ ಮಾಯವಾಗುತ್ತವೆ. ಈ ಅವಧಿಯಲ್ಲಿ ಈ ಭಾಗದ ಜನತೆ ತಂಡೋಪತಂಡವಾಗಿ ಆಗಮಿಸಿ ನಿಸರ್ಗ ರಮಣೀಯತೆಯ ಸೊಬಗು ಆನಂದಿಸುತ್ತಾರೆ.

ಇಂತಹ ಋತುಮಾನದ ಜಲಪಾತಗಳಲ್ಲಿ ಇಳಕಲ್ಲ ತಾಲೂಕಿನ ದಮ್ಮೂರು ಗ್ರಾಮದ ಹೊರವಲಯದ ದಿಡಗ ಜಲಪಾತವೂ ಒಂದು. ಇಳಕಲ್ಲ ತಾಲೂಕಿನ ಕೊನೆಯ ಗ್ರಾಮವಾದ ದಮ್ಮೂರದ ಕೂಗಳತೆಯಲ್ಲೇ ದಿಡಗ ಬಸವೇಶ್ವರ ದೇವಸ್ಥಾನವಿದೆ.

ಸ್ಥಳೀಯ ಗ್ರಾಮಸ್ಥರ ಆರಾಧ್ಯ ದೈವವಾಗಿರುವ ದಿಡಗ ಬಸವೇಶ್ವರ ದೇವಸ್ಥಾನ ಪ್ರಕೃತಿ ಮಾತೆಯ ಮಡಿಲಲ್ಲಿ ಭಕ್ತರ ಮನಸೆಳೆಯುತ್ತ ವಿರಾಜಮಾನನಾಗಿದ್ದಾನೆ. ಸ್ಥಳೀಯರು ಪ್ರತಿನಿತ್ಯ ದರ್ಶನ ಮಾಡಿ ಮುಂದೆ ಸಾಗಿದರೆ. ವರ್ಷದಲ್ಲೊಮ್ಮೆ ನಿರಂತರ ವರ್ಷಧಾರೆ ಸಂದರ್ಭದಲ್ಲಿ ಗಂಗಾಮಾತೆ ಶಿವನ ಜಡೆಯ ಮೇಲಿಂದ ಹರಿದುಬಂದು ಬಸವೇಶ್ವರನ ಮಜ್ಜನ ಮಾಡಿಸುತ್ತಿದ್ದಾಳೇನೋ ಎಂಬಂತೆ ಭಾಸವಾಗುತ್ತದೆ.

ಭೋರ್ಗರೆವ ಮಳೆಯಲ್ಲಿ ಮಿನಿ ಜಲಪಾತ: ನಿರಂತರ ಮಳೆ ಸುರಿದ ಸಂದರ್ಭದಲ್ಲಿ ಗುಡ್ಡದ ಮೇಲಿನಿಂದ ನೀರು ಹಾಲ್ನೊರೆಯಂತೆ ದುಮ್ಮಿಕ್ಕುವ ಮೂಲಕ ಪ್ರಕೃತಿಯೇ ಮಿನಿ ಜಲಪಾತ ಸೃಷ್ಟಿಸಿ ಭಕ್ತರು, ಪರಿಸರ ಪ್ರೇಮಿಗಳು, ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತದೆ. ನಿರಂತರ ಮಳೆಯಾದ ಸಂದರ್ಭದಲ್ಲಿ 8 ರಿಂದ 10 ದಿನಗಳು ನಿರಂತರವಾಗಿ ಈ ಮಿನಿ ಫಾಲ್ಸ್, ಸ್ಥಳೀಯ ನಗರ, ಪಟ್ಟಣ, ಗ್ರಾಮಗಳ ಜನತೆಯನ್ನು ಸೆಳೆಯುತ್ತವೆ. ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಮಿನಿ ಜೋಗ್‌ಫಾಲ್ಸ್ ಪ್ರತ್ಯಕ್ಷಗೊಂಡಿದೆ.

ಮಿನಿ ಜೋಗ್‌ಫಾಲ್ಸ್ ಪ್ರಾರಂಭಗೊಂಡ ವಿಷಯ ತಿಳಿಯುತ್ತಲೇ ವಿದ್ಯಾರ್ಥಿಗಳು, ಗೆಳೆಯರ ಗುಂಪುಗಳು, ಸ್ಥಳೀಯ ಗ್ರಾಮಸ್ಥರು ವಾಹನಗಳು ಎತ್ತಿನಬಂಡಿಯಲ್ಲಿ ಕುಟುಂಬ ಸಮೇತ ಬುತ್ತಿ ಕಟ್ಟಿಕೊಂಡು ಬಂದು ಸ್ನಾನ ಮಾಡಿ ಪ್ರಕೃತಿಯ ಮಡಿಲಲ್ಲಿ ಊಟ ಸವಿದು ಸಂಭ್ರಮಿಸುತ್ತಿದ್ದಾರೆ. ಬೆಳವಲ ನಾಡಿನಲ್ಲಿ ಪ್ರಕೃತಿಯಲ್ಲಿ ವರ್ಷದಲ್ಲೊಮ್ಮೆ ಗಂಗೆಯ ದರ್ಶನ ನೀಡುತ್ತಾಳೆ.

ದಿಡಗ ಜೋಗ್‌ಫಾಲ್ಸ್ ರಕ್ಷಿಸಿ....

ನಿರಂತರ ಮಳೆ ಬಂದಾಗ ಮಿನಿ ಜಲಪಾತ ಪ್ರತ್ಯಕ್ಷವಾಗುತ್ತದೆ. ಮಳೆ ಕಡಿಮೆಯಾದೊಡನೆ ಮಾಯವಾಗುತ್ತದೆ. ಇದು ದಿಡಗ ಬಸವೇಶ್ವರ ದೇವಸ್ಥಾನಕ್ಕೆ ಪ್ರಕೃತಿಮಾತೆ ಕರುಣಿಸಿದ ವರ. ಇದರ ಸೊಬಗನ್ನು ಅನುಭವಿಸಬೇಕು. ಆದರೆ, ಇಲ್ಲಿಗೆ ಬರುವ ಭಕ್ತರು, ಪ್ರವಾಸಿಗಳು, ಪ್ರೇಕ್ಷಕರು ತಮ್ಮೊಂದಿಗೆ ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ತಿನಿಸು, ಕುಡಿಯುವ ನೀರು,, ತಂಪು ಪಾನೀಯ ಬಾಟಲ್‌ಗಳನ್ನು ತಂದು ಬಳಸಿ ಎಲ್ಲೆಂದರಲ್ಲಿ ಎಸೆದು ಹೋಗುತ್ತಾರೆ. ಅಲ್ಲದೆ, ಪಡ್ಡೆ ಹುಡುಗರ ಗುಂಪು, ಕುಡುಕರ ಗುಂಪು ಮದ್ಯಪಾನ, ಗುಟ್ಕಾ ಸೇವಿಸುವುದಲ್ಲದೆ, ಇಸ್ಪೀಟ್ ಮುಂತಾದ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗುತ್ತಾರೆ. ಇಂತಹವುಗಳಿಗೆ ಯಾವುದೇ ಕಡಿವಾಣ ಇಲ್ಲವಾಗಿದೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಪರಿಸರ ಹಾಳಾಗಿ ಹೋಗುತ್ತದೆ. ಪರಿಸರ ಇಲಾಖೆ, ಅರಣ್ಯ ಇಲಾಖೆ, ಪೋಲೀಸ್ ಇಲಾಖೆ, ಗ್ರಾಮ ಪಂಚಾಯತಿ, ಜನ ಪ್ರತಿನಿಧಿಗಳು ಇತ್ತ ಗಮನಹರಿಸಿ ವರ್ಷದಲ್ಲೊಮ್ಮೆ ಕಾಣಸಿಗುವ ರಮಣೀಯ ಪ್ರಕೃತಿಯ ಪವಿತ್ರ ಸ್ಥಳವನ್ನು ಸಂರಕ್ಷಿಸಬೇಕಾದ ಅಗತ್ಯವಿದೆ ಎಂದು ಗ್ರಾಮದ ಹನುಮಗೌಡ ಪಾಟೀಲ, ಮಹಾಂತೇಶ ಹುಲ್ಯಾಳ ಹಾಗೂ ಪರಿಸರಪ್ರೇಮಿಗಳ ಆಗ್ರಹಿಸಿದ್ದಾರೆ.