ಶಾಪಿಂಗ್‌ ಮಾಲ್‌ ಮಾಲೀಕರೇ ಹೊಂದಿರುವ ಮತ್ತು ನಿರ್ವಹಿಸುತ್ತಿರುವ ಡೀಸೆಲ್‌ ಜನರೇಟರ್‌ ಸೆಟ್‌ಗೆ ಜಿಬಿಎಯಿಂದ (ಹಿಂದಿನ ಬಿಬಿಎಂಪಿ) ವಾರ್ಷಿಕ ಉದ್ದಿಮೆ ಪರವಾನಗಿ ಪಡೆಯುವ ಅಥವಾ ನವೀಕರಿಸುವ ಅಗತ್ಯವಿಲ್ಲ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ.

ಬೆಂಗಳೂರು : ಶಾಪಿಂಗ್‌ ಮಾಲ್‌ ಮಾಲೀಕರೇ ಹೊಂದಿರುವ ಮತ್ತು ನಿರ್ವಹಿಸುತ್ತಿರುವ ಡೀಸೆಲ್‌ ಜನರೇಟರ್‌ ಸೆಟ್‌ಗೆ ಜಿಬಿಎಯಿಂದ (ಹಿಂದಿನ ಬಿಬಿಎಂಪಿ) ವಾರ್ಷಿಕ ಉದ್ದಿಮೆ ಪರವಾನಗಿ ಪಡೆಯುವ ಅಥವಾ ನವೀಕರಿಸುವ ಅಗತ್ಯವಿಲ್ಲ ಎಂದು ಹೈಕೋರ್ಟ್‌ ಸ್ಪಷ್ಟಪಡಿಸಿದೆ.

ಬೆಂಗಳೂರಿನ ಫೀನಿಕ್ಸ್‌ ಮಾರ್ಕೆಟ್‌ ಸಿಟಿ ಮಾಲ್‌ ನಿರ್ವಹಿಸುತ್ತಿರುವ ಐಲ್ಯಾಂಡ್‌ ಸ್ಟಾರ್‌ ಮಾಲ್‌ ಡೆವಲಪರ್ಸ್‌ ಪ್ರೈವೇಟ್‌ ಲಿಮಿಟೆಡ್‌ ಸಲ್ಲಿಸಿದ್ದ ಮೇಲ್ಮನವಿಯನ್ನು ಪುರಸ್ಕರಿಸಿದ ನ್ಯಾಯಮೂರ್ತಿಗಳಾದ ಅನು ಶಿವರಾಮನ್‌ ಮತ್ತು ಟಿ.ಪಿ.ವಿವೇಕಾನಂದ ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಭಾರಿ ನವೀಕರಣ ಶುಲ್ಕ ವಿಧಿಸುವುದು ಸಮರ್ಥನೀಯವಲ್ಲ

ಜನರೇಟರ್‌ ಸೆಟ್‌ಗೆ ಅಗತ್ಯವಾದ ತಪಾಸಣೆ ಹಾಗೂ ಪ್ರಮಾಣೀಕರಣವನ್ನು ವಿದ್ಯುತ್‌ ನಿರೀಕ್ಷಕರು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್‌ಪಿಸಿಬಿ) ನಡೆಸುತ್ತಿರುವಾಗ, ಬಿಬಿಎಂಪಿ ವಾರ್ಷಿಕ ಟ್ರೇಡ್‌ ಲೈಸೆನ್ಸ್‌ ಪಡೆಯುವಂತೆ ಒತ್ತಾಯಿಸಿ ಭಾರಿ ನವೀಕರಣ ಶುಲ್ಕ ವಿಧಿಸುವುದು ಸಮರ್ಥನೀಯವಲ್ಲ ಎಂದು ಪೀಠ ಹೇಳಿದೆ.

ಪ್ರಕರಣದ ವಿವರ:

ಬೆಂಗಳೂರಿನ ದೇವಸಂದ್ರ ಎರಡನೇ ಹಂತದ ಕೈಗಾರಿಕಾ ಪ್ರದೇಶದಲ್ಲಿರುವ ಫೀನಿಕ್ಸ್‌ ಮಾರ್ಕೆಟ್‌ಸಿಟಿ ಮಾಲ್‌ನಲ್ಲಿ ಕಂಪನಿಯು ಡೀಸೆಲ್‌ ಜನರೇಟರ್‌ ಅಳವಡಿಸಿತ್ತು. ಅದಕ್ಕಾಗಿ 2011ರಲ್ಲಿ ಬಿಬಿಎಂಪಿಗೆ 10 ಲಕ್ಷ ರು. ಪಾವತಿಸಿ ಪರವಾನಗಿ ಪಡೆದಿತ್ತು. 2013ರಲ್ಲಿ ಸ್ಪಷ್ಟನೆ ಕೋರುತ್ತಲೇ ನವೀಕರಣ ಶುಲ್ಕ ಮತ್ತು ದಂಡದ ರೂಪದಲ್ಲಿ 12.5 ಲಕ್ಷ ಪಾವತಿಸಿತ್ತು. 2015ರಲ್ಲಿ ಬಿಬಿಎಂಪಿ ಮತ್ತೊಮ್ಮೆ ಪರವಾನಗಿ ನವೀಕರಣ ಶುಲ್ಕ ಪಾವತಿಸುವಂತೆ ಬೇಡಿಕೆ ಇಟ್ಟಿತ್ತು.

ಅದನ್ನು ಪ್ರಶ್ನಿಸಿ ಮಾಲ್‌ ಅಭಿವೃದ್ಧಿ ಕಂಪನಿ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿತ್ತು. ಅದರ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ, ಕರ್ನಾಟಕ ಮಹಾನಗರ ಪಾಲಿಕೆ ಕಾಯ್ದೆಯ ಸೆಕ್ಷ ನ್‌ 354ರ ಅಡಿ ಬಿಬಿಎಂಪಿ ಶುಲ್ಕ ವಿಧಿಸಬಹುದೆಂದು ಅಭಿಪ್ರಾಯಪಟ್ಟು ಕಂಪನಿಯ ಅರ್ಜಿ ವಜಾಗೊಳಿಸಿ 2022ರಲ್ಲಿ ಆದೇಶಿಸಿತ್ತು. ಆ ಆದೇಶವನ್ನು ಪ್ರಶ್ನಿಸಿ ಕಂಪನಿ ವಿಭಾಗೀಯಪೀಠಕ್ಕೆ ಮೇಲ್ಮನವಿ ಸಲ್ಲಿಸಿತ್ತು.