ಕನ್ನಡಪ್ರಭ ವಾರ್ತೆ ಬೆಂಗಳೂರು

ಡೀಸೆಲ್‌ ಬೆಲೆ ಹೆಚ್ಚಳವಾದರೆ ನಾಲ್ಕೂ ಸಾರಿಗೆ ನಿಗಮಗಳಿಗೆ ಸಾಕಷ್ಟು ಸಮಸ್ಯೆಯಾಗಲಿದೆ. ಪಂಚ ರಾಜ್ಯಗಳ ಚುನಾವಣೆ ಮುಗಿಯುವುದಕ್ಕೆ ಕಾದು ಈಗ ಅದರ ಬಗ್ಗೆ ಮಾತನಾಡಲಾಗುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.

ಕುಮಾರಕೃಪಾ ಅತಿಥಿಗೃಹದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪೆಟ್ರೋಲ್‌ ಬೆಲೆ ಏರಿಕೆ ಮಾಡಿದರೆ ಸಾರಿಗೆ ನಿಗಮಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಅದೇ ಡೀಸೆಲ್‌ ಬೆಲೆ ಏರಿಕೆ ಮಾಡಿದರೆ ಭಾರೀ ಆರ್ಥಿಕ ಸಮಸ್ಯೆ ಎದುರಾಗುತ್ತದೆ. ನಾಲ್ಕೂ ನಿಗಮಗಳಲ್ಲಿ 26 ಸಾವಿರ ಡೀಸೆಲ್‌ ಬಸ್‌ಗಳಿವೆ. ಉಳಿದಂತೆ 1700 ಮಾತ್ರ ಎಲೆಕ್ಟ್ರಿಕ್‌ ಬಸ್‌ಗಳಿವೆ. ಚುನಾವಣೆ ಮುಗಿಯುವುದನ್ನೇ ಕಾಯುತ್ತಿದ್ದ ಕೇಂದ್ರ ಸರ್ಕಾರ ಈಗ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಕುರಿತು ಮಾತನಾಡುತ್ತಿದೆ ಎಂದರು.

ಡೀಸೆಲ್‌ ಬೆಲೆ ಹೆಚ್ಚಳ ಮಾಡದಿದ್ದರೆ ಬಹಳ ಸಂತೋಷವಾಗುತ್ತದೆ. ಡೀಸೆಲ್‌ ಬೆಲೆ ಹೆಚ್ಚಳದ ನಂತರ ಅದರ ಪರಿಣಾಮದ ಕುರಿತಂತೆ ಚರ್ಚಿಸಲಾಗುವುದು. ಹಾಗೆಯೇ, ಪ್ರಯಾಣ ದರ ಹೆಚ್ಚಳದ ಚಿಂತನೆ ನಡೆಸಿಲ್ಲ. ಅಲ್ಲದೆ ಡೀಸೆಲ್‌ ಬೆಲೆ ಹೆಚ್ಚಳದ ಬಗ್ಗೆ ಇನ್ನೂ ಯಾವುದೇ ನಿರ್ದಿಷ್ಟ ಮಾಹಿತಿಯಿಲ್ಲ ಎಂದು ತಿಳಿಸಿದರು.

ಸಾರಿಗೆ ನೌಕರರ ಮುಷ್ಕರದ ಕುರಿತು ಪ್ರತಿಕ್ರಿಯಿಸಿದ ರಾಮಲಿಂಗಾರೆಡ್ಡಿ, ವೇತನ ಹೆಚ್ಚಳ ಸಂಬಂಧ ಸರ್ಕಾರದ ನಿರ್ಧಾರ ಪ್ರಕಟಿಸಲಾಗಿದೆ. ಶೇ.12.50ರಷ್ಟು ಮೂಲ ವೇತನ ಹೆಚ್ಚಳದ ಬಗ್ಗೆ ಘೋಷಿಸಲಾಗಿದೆ. ಅದನ್ನು ಬಿಟ್ಟು ಬೇರೇನು ಹೇಳುವುದಿಲ್ಲ ಎಂದರು.


ದುಂದು ವೆಚ್ಚ ಮಾಡಬಾರದು:

ಮಿತವ್ಯಯದ ಕುರಿತಂತೆ ಪ್ರಧಾನಿ ಮೋದಿ ನೀಡಿರುವ ಸಲಹೆ ಕುರಿತು ಮಾತನಾಡಿದ ರಾಮಲಿಂಗಾರೆಡ್ಡಿ, ಯುದ್ಧ ನಡೆಯುತ್ತಿದೆ ಎಂಬ ಕಾರಣಕ್ಕಾಗಿ ಮಾತ್ರ ಮಿತವ್ಯಯ ಮಾಡಬಾರದು. ವರ್ಷದ 365 ದಿನವೂ ಮಿತವ್ಯಯ ಮಾಡಬೇಕು, ಸರ್ಕಾರದ ಹಣ ಉಳಿಸಬೇಕು. ನನ್ನ ದುಡ್ಡಾದರೂ ನಾನು ದುಂದುವೆಚ್ಚ ಮಾಡುವುದಿಲ್ಲ. ಇನ್ನು, ಸರ್ಕಾರದ ಹಣವನ್ನು ದುಂದುವೆಚ್ಚ ಮಾಡಲು ಬಿಡುವುದಿಲ್ಲ ಎಂದು ಹೇಳಿದರು.