ಸ್ಥಳೀಯ ಭಿನ್ನಾಭಿಪ್ರಾಯದ ಕುರಿತು ಸ್ಪಷ್ಟನೆ ನೀಡಿದ ಅವರು, ಬಿ.ವಿ. ಮಹೇಶ್ ನನಗೆ ತಮ್ಮನಿದ್ದಂತೆ, ವೆಂಕಟಮುನಿಯಪ್ಪ ಚಿಕ್ಕಪ್ಪನ ಸಮಾನ. ರಾಜಕೀಯದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಸಹಜ. ಆದರೆ ನಾವು ಮೈತ್ರಿಧರ್ಮಕ್ಕೆ ಬದ್ಧರಾಗಿದ್ದು, ಕೆ.ಎಂ. ಸುರೇಶ್ ಅವರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಬಂಗಾರಪೇಟೆ

ಆಗ್ನೇಯ ಪದವೀಧರ ಕ್ಷೇತ್ರದ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಕೆ.ಎಂ. ಸುರೇಶ್ ಪರವಾಗಿ ಇಲ್ಲಿನ ಕೋಲಾರ ಮುಖ್ಯರಸ್ತೆಯಲ್ಲಿ ಹಮ್ಮಿಕೊಂಡಿದ್ದ ಪ್ರಚಾರ ಸಭೆ ಹಾಗೂ ಮತಯಾಚನೆ ವೇಳೆ ಬಿಜೆಪಿ ಮುಖಂಡರ ನಡುವಿನ ಭಿನ್ನಾಭಿಪ್ರಾಯ ಬಹಿರಂಗಗೊಂಡಿತು.

ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಪ್ರಚಾರಕ್ಕೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ವಿ.ಬಿ.ಆರ್. ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಪ್ರಚಾರ ಸಭೆಗೆ ತೆರಳುವಂತೆ ಮಾಜಿ ಸಂಸದ ಎಸ್. ಮುನಿಸ್ವಾಮಿ ಸೂಚಿಸಿದರು. ಇದಕ್ಕೆ ಆಕ್ಷೇಪಿಸಿದ ಮಾಜಿ ಜಿ.ಪಂ. ಸದಸ್ಯ ಬಿ.ವಿ. ಮಹೇಶ್ ಹಾಗೂ ಇತರ ಮುಖಂಡರು, ಸಭೆಗೂ ಮುನ್ನ ಕಾಲೇಜುಗಳಿಗೆ ಭೇಟಿ ನೀಡಿ ಪದವೀಧರ ಮತದಾರರನ್ನು ನೇರವಾಗಿ ಭೇಟಿಯಾಗಬೇಕೆಂದು ಪಟ್ಟು ಹಿಡಿದರು. ಇದರಿಂದ ಕೆಲಕಾಲ ಉದ್ವಿಗ್ನತೆ ಉಂಟಾಯಿತು.

ಕೊನೆಗೆ ಮೈತ್ರಿ ಅಭ್ಯರ್ಥಿ ಕೆ.ಎಂ. ಸುರೇಶ್ ಮಧ್ಯಪ್ರವೇಶಿಸಿ ಮುನಿಸ್ವಾಮಿ ಅವರನ್ನು ಸಮಾಧಾನಪಡಿಸಿ, ನಾಯಕರೊಂದಿಗೆ ಎಸ್‌ಡಿಸಿ ಕಾಲೇಜಿಗೆ ತೆರಳಿ ಪದವೀಧರರಲ್ಲಿ ಮತಯಾಚನೆ ಮಾಡಿದರು. ಬಳಿಕ ಕಲ್ಯಾಣ ಮಂಟಪದ ಸಭೆಯಲ್ಲಿ ಪಾಲ್ಗೊಂಡರು. ಆದರೆ, ಬಿ.ವಿ. ಮಹೇಶ್ ಹಾಗೂ ಅವರ ಬೆಂಬಲಿಗರು ಸಭೆಯಿಂದ ದೂರ ಉಳಿದರು.

ಕಾರ್ಯಕರ್ತರ ಸಭೆಯಂತಾದ ಪ್ರಚಾರ:

ಕಲ್ಯಾಣ ಮಂಟಪದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಪದವೀಧರ ಮತದಾರರಿಗಿಂತ ಉಭಯ ಪಕ್ಷಗಳ (ಬಿಜೆಪಿ- ಜೆಡಿಎಸ್) ಕಾರ್ಯಕರ್ತರು ಹಾಗೂ ಮುಖಂಡರೇ ಹೆಚ್ಚಿನ ಸಂಖ್ಯೆಯಲ್ಲಿ ನೆರೆದಿದ್ದರು. ಪದವೀಧರರನ್ನು ನೇರವಾಗಿ ತಲುಪಬೇಕಿದ್ದ ಕಾರ್ಯಕ್ರಮವು ಕೇವಲ ಪಕ್ಷದ ಕಾರ್ಯಕರ್ತರ ಸಭೆಯಂತೆ ಸೀಮಿತವಾಯಿತು ಎಂಬ ಗುಸುಗುಸು ಸಭೆಯ ಆವರಣದಲ್ಲಿ ಕೇಳಿಬಂತು.

ಕಾಂಗ್ರೆಸ್ ಸೋಲಿಸುವುದೇ ಗುರಿ:

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಂಸದ ಎಸ್. ಮುನಿಸ್ವಾಮಿ, ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಬಿಜೆಪಿ ಮತ್ತು ಜೆಡಿಎಸ್ ಒಗ್ಗಟ್ಟಾಗಿ ಹೋರಾಡುತ್ತಿವೆ. ಕೋಲಾರ ಜಿಲ್ಲೆಯಲ್ಲಿ ಮೈತ್ರಿಕೂಟ ಭದ್ರವಾಗಿದ್ದು, ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸುವುದೇ ನಮ್ಮ ಪ್ರಮುಖ ಗುರಿ ಎಂದರು.

ಸ್ಥಳೀಯ ಭಿನ್ನಾಭಿಪ್ರಾಯದ ಕುರಿತು ಸ್ಪಷ್ಟನೆ ನೀಡಿದ ಅವರು, ಬಿ.ವಿ. ಮಹೇಶ್ ನನಗೆ ತಮ್ಮನಿದ್ದಂತೆ, ವೆಂಕಟಮುನಿಯಪ್ಪ ಚಿಕ್ಕಪ್ಪನ ಸಮಾನ. ರಾಜಕೀಯದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಸಹಜ. ಆದರೆ ನಾವು ಮೈತ್ರಿಧರ್ಮಕ್ಕೆ ಬದ್ಧರಾಗಿದ್ದು, ಕೆ.ಎಂ. ಸುರೇಶ್ ಅವರನ್ನು ಅತ್ಯಧಿಕ ಮತಗಳ ಅಂತರದಿಂದ ಗೆಲ್ಲಿಸುವುದು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ವೆಂಕಟಮುನಿಯಪ್ಪ, ಮುಖಂಡರಾದ ಸಂಪಂಗಿರೆಡ್ಡಿ, ಎಚ್.ಆರ್. ಶ್ರೀನಿವಾಸ್, ಚೌಡಪ್ಪ, ಬಿ.ಕೆ. ಮಂಜುನಾಥ್, ಜೆಡಿಎಸ್ ತಾಲೂಕು ಅಧ್ಯಕ್ಷ ಬಾಲಕೃಷ್ಣ ಸೇರಿದಂತೆ ಉಭಯ ಪಕ್ಷಗಳ ಪ್ರಮುಖರು ಉಪಸ್ಥಿತರಿದ್ದರು.