ರಾಜ್ಯ ಸರ್ಕಾರದಿಂದ ಕ್ಷೇತ್ರಗಳಿಗೆ ಅನುದಾನ ಬರದಿದ್ದರೆ ನಾವು ಅಭಿವೃದ್ಧಿ ಕಾರ್ಯಗಳನ್ನು ಮಾಡುವುದು ಹೇಗೆ ಎಂದು ಪ್ರಶ್ನಿಸಿದರು.

ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶಾಸಕ ಸಮೃದ್ಧಿ ಮಂಜುನಾಥ್

ಕನ್ನಡಪ್ರಭ ವಾರ್ತೆ ಮುಳಬಾಗಿಲು

ರಾಜ್ಯದ ೨೨೪ ಕ್ಷೇತ್ರಗಳ ಶಾಸಕರ ಗೋಳು ಒಂದೇ ಆಗಿದೆ. ಐದು ಗ್ಯಾರಂಟಿಗಳಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ೬೩,೦೦೦ ಕೋಟಿ ರು. ಮೀಸಲಿಟ್ಟಿದ್ದು, ವಿಧಾನಸಭಾ ಕ್ಷೇತ್ರಗಳಿಗೆ ಸಮರ್ಪಕವಾಗಿ ಅನುದಾನ ನೀಡದ ಕಾರಣ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ನಡೆಸಲು ಸಮಸ್ಯೆಯಾಗಿದೆ ಎಂದು ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದ ನೇತಾಜಿ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ತಾಯಿ ಭುವನೇಶ್ವರಿ ಪುಷ್ಪ ಪಲ್ಲಕ್ಕಿಗೆ ಪೂಜೆ ಸಲ್ಲಿಸಿ ಮಾತನಾಡಿ, ರಾಜ್ಯ ಸರ್ಕಾರದಿಂದ ಕ್ಷೇತ್ರಗಳಿಗೆ ಅನುದಾನ ಬರದಿದ್ದರೆ ನಾವು ಅಭಿವೃದ್ಧಿ ಕಾರ್ಯಗಳನ್ನು ಮಾಡುವುದು ಹೇಗೆ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಸರ್ಕಾರ ಸತ್ತೂ ಇಲ್ಲ, ಬದುಕೂ ಇಲ್ಲ, ಕೋಮಾದಲ್ಲಿದೆ ಎಂದು ಗಂಭೀರ ಆರೋಪ ಮಾಡಿದರು.

ನೇತಾಜಿ ಕ್ರೀಡಾಂಗಣದಲ್ಲಿ ಕನ್ನಡ ರಾಜ್ಯೋತ್ಸವ ನಡೆಯಬೇಕಿತ್ತು. ಆದರೆ ಶಾಸಕರು ಸೇರಿ ಜೆಡಿಎಸ್ ಮುಖಂಡರು ಮತ್ತು ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯಲ್ಲಿ ಬಂದಿದ್ದರಿಂದ ಹಲವಾರು ಗಂಟೆಗಳ ಕಾಲ ಕಾರ್ಯಕ್ರಮ ತಡವಾಯಿತು.

ವಿದ್ಯಾರ್ಥಿಗಳು, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಮತ್ತು ಸಾರ್ವಜನಿಕರು ಕ್ರೀಡಾಂಗಣದಲ್ಲಿ ಕಾದು ಕಾದು ಕೊನೆಗೆ ವಾಪಸ್ ತೆರಳುತ್ತಿದ್ದ ದೃಶ್ಯಗಳು ಕಂಡುಬಂದವು. ಕನ್ನಡ ರಾಜ್ಯೋತ್ಸವ ಪ್ರಯುಕ್ತ ನಗರದ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ಕನ್ನಡದ ಬಾವುಟಗಳು ಮತ್ತು ವಿದ್ಯುತ್ ದೀಪ ಅಲಂಕಾರ ಮಾಡಿ ಶೃಂಗರಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಸಂಸದ ಮಲ್ಲೇಶ್ ಬಾಬು, ತಹಸೀಲ್ದಾರ್ ವಿ.ಗೀತಾ, ತಾ.ಪಂ. ಇಒ ಬಾಬು ಎನ್.ವಿ., ನಗರಸಭೆ ಪೌರಾಯುಕ್ತ ಆಂಜನೇಯಲು, ಉಪ ತಹಸೀಲ್ದಾರ್ ಕೊಂಡಪ್ಪ, ಡಿಸಿಸಿ ಬ್ಯಾಂಕ್ ನಿರ್ದೇಶಕ ರಘುಪತಿ ರೆಡ್ಡಿ, ಗ್ಯಾಸ್ ಶ್ರೀಧರ್ ಬಾಬು, ಜಿ.ಪಂ. ಮಾಜಿ ಸದಸ್ಯ ಎನ್.ರಾಜಗೋಪಾಲ್, ಗೊಲ್ಲಹಳ್ಳಿ ಜಗದೀಶ್, ನಗವಾರ ಸತ್ಯಣ್ಣ, ಸಿದ್ದಗಟ್ಟು ರಮೇಶ್, ಟಿಎಚ್‌ಒ ಡಾ.ಸುಗುಣ, ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೇಸರಿ ಶಂಕರ್, ಹರೀಶ್‌ಗೌಡ, ಮಿಟ್ಟಹಳ್ಳಿ ಪ್ರಕಾಶ್‌ಗೌಡ, ಬಂಗಾರಿ ಮಂಜು, ಕಾವೇರಿ ಸುರೇಶ್, ನಂದಕಿಶೋರ್, ನಂದುಕುಮಾರ್, ಹರೀಶ್, ಆಟೋ ಮಂಜು ಇದ್ದರು.