ಮಂಗಳೂರಲ್ಲಿ ಕಾಮಗಾರಿ ಅಧ್ವಾನ: ಕಾದಿದೆ ಗಂಡಾಂತರ!

| Published : May 04 2024, 12:38 AM IST

ಸಾರಾಂಶ

ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಇದ್ದುದರಿಂದ ಕೆಲಕಾಲ ಕಾಮಗಾರಿಗೆ ಸಮಸ್ಯೆಯಾಗಿದ್ದು ನಿಜ. ಇನ್ನಾದರೂ ಇರುವ ಅಲ್ಪಾವಧಿಯಲ್ಲಿ ಅರೆಬರೆ ಕಾಮಗಾರಿಗಳನ್ನು ಪೂರ್ತಿಗೊಳಿಸಿ, ಮಳೆಗಾಲದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದಿದ್ದರೆ ಮಳೆಗಾಲದಲ್ಲಿ ಅಧ್ವಾನ ಖಚಿತ.

ಸಂದೀಪ್‌ ವಾಗ್ಲೆ

ಕನ್ನಡಪ್ರಭ ವಾರ್ತೆ ಮಂಗಳೂರು

ಗಲ್ಲಿ ಗಲ್ಲಿಯನ್ನೂ ಬಿಡದಂತೆ ಅಗೆದು ಹಾಕಿದ ಕಾಂಕ್ರಿಟ್‌ ರಸ್ತೆಗಳು, ನಗರಾದ್ಯಂತ ಅರೆಬರೆ ಕಾಮಗಾರಿ, ಇನ್ನೂ ಪೂರ್ತಿಯಾಗದ ರಾಜಕಾಲುವೆಗಳ ಹೂಳೆತ್ತುವ ಕೆಲಸ, ಕಸ ಕಡ್ಡಿಗಳು ತುಂಬಿ ಮುಚ್ಚಿದ ಚರಂಡಿಗಳು.. ಮಂಗಳೂರು ನಗರ ಹೇಳಿಕೊಳ್ಳಲಷ್ಟೇ ಸ್ಮಾರ್ಟ್‌ ಸಿಟಿ. ಇನ್ನಿಲ್ಲದಷ್ಟು ಅವ್ಯವಸ್ಥೆಯಿಂದ ಮಳೆಗಾಲದ ಬಹುದೊಡ್ಡ ಅವಾಂತರಕ್ಕೆ ಮಂಗಳೂರು ಸಜ್ಜಾಗುತ್ತಿದೆ!

ಹೌದು. 2018ರಲ್ಲಿ ಸುರಿದ ಮಹಾಮಳೆಯಿಂದ ಮಂಗಳೂರು ನಗರ ಅಕ್ಷರಶಃ ನಲುಗಿತ್ತು. ರಾಜಕಾಲುವೆಗಳು ಉಕ್ಕೇರಿ ಅಸಹನೀಯ ವಾತಾವರಣ ಸೃಷ್ಟಿಯಾಗಿತ್ತು. ಇದು ಒಂದು ವರ್ಷದ ಗೋಳಲ್ಲ. ಪ್ರತಿವರ್ಷವೆಂಬಂತೆ ಮಳೆಗಾಲದ ಆರಂಭದಲ್ಲಿ ಕೃತಕ ಪ್ರವಾಹ ನಗರದ ಬಹುತೇಕ ಕಡೆ ಉಂಟಾಗುತ್ತಿದೆ. ಅದನ್ನು ಗಮನದಲ್ಲಿಟ್ಟುಕೊಂಡಾದರೂ ಈ ಬಾರಿ ಮಳೆಗಾಲದ ಪೂರ್ವ ತಯಾರಿಗಳನ್ನು ನಡೆಸಬೇಕಿತ್ತು. ಆದರೆ ಮೇ ಆರಂಭವಾದರೂ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿರುವುದು ಕಂಡುಬಂದಿಲ್ಲ.ರಸ್ತೆ ಅಗೆಯೋದೆ ಪೂರ್ಣಾವಧಿ ಕೆಲಸ!:

ಪ್ರಸ್ತುತ ನಗರದ ಬಹುತೇಕ ಕಡೆ ಕಾಂಕ್ರಿಟ್‌ ರಸ್ತೆಗಳು ನಿರ್ಮಾಣವಾಗಿವೆ. ನಿರ್ಮಾಣ ಮಾಡುವಾಗ ಸಂಪರ್ಕ ಜಾಲಗಳು, ಮಳೆತೋಡು, ಒಳಚರಂಡಿ ಅವ್ಯವಸ್ಥೆಗಳನ್ನು ಗಣನೆಗೆ ತೆಗೆದುಕೊಳ್ಳದೆ ನಿರ್ಮಿಸಿದ್ದರಿಂದ ಈಗ ರಸ್ತೆ ಅಗೆಯೋದೆ ಮಹಾನಗರ ಪಾಲಿಕೆಗೆ ಮುಖ್ಯ ಕಾಯಕವಾಗಿದೆ. ಮಳೆಗಾಲ ಕಾಲಿಡಲು ತಿಂಗಳಷ್ಟೇ ಬಾಕಿ, ಆದರೂ ರಸ್ತೆ ಅಗೆತ ಅವ್ಯಾಹತವಾಗಿದೆ. ಅರೆಬರೆ ಕಾಮಗಾರಿ ಹಾಗೇ ಉಳಿದರೆ ಮಳೆಗಾಲದಲ್ಲಿ ತೀವ್ರ ಸಮಸ್ಯೆ ಎದುರಾಗುವುದು ಖಚಿತ.

ನಗರದ ಕದ್ರಿ ಪಂಪ್‌ವೆಲ್‌ ಬಳಿ ಅರ್ಧ ರಸ್ತೆ ಅಗೆದು ಆಳ ಗುಂಡಿ ಮಾಡಿ ಕಾಮಗಾರಿ ನಡೆಯುತ್ತಿದೆ. ಇದರಿಂದ ಕಳೆದೊಂದು ತಿಂಗಳಿನಿಂದ ಈ ರಸ್ತೆಯಲ್ಲಿ ವಾಹನ ಸವಾರರಿಗೆ ತೀವ್ರ ಸಮಸ್ಯೆ. ಬಿಜೈ ಚರ್ಚ್- ಕರಂಗಲ್ಪಾಡಿ ರಸ್ತೆ ಅಗೆದು ಒಳಚರಂಡಿ ಕಾಮಗಾರಿ ನಡೆಯುತ್ತಿದೆ. ಎಂಜಿ ರಸ್ತೆಯುದ್ದಕ್ಕೂ ಭೂಗತ ಕೇಬಲ್‌ ಅಳವಡಿಸಿ ಫಿನಿಶಿಂಗ್‌ ಮಾಡಿಯೇ ಇಲ್ಲ. ಇದೇ ರೀತಿ ಬಿಜೈ, ಮಂಗಳಾದೇವಿ ಸೇರಿದಂತೆ ಪ್ರಮುಖ ರಸ್ತೆಗಳನ್ನೂ ಅಗೆಯಲಾಗಿದೆ. ಒಳರಸ್ತೆಗಳಲ್ಲೂ ಅಲ್ಲಲ್ಲಿ ಕಾಮಗಾರಿ ನಡೆಯುತ್ತಿದೆ. ಜತೆಗೆ ಗೇಲ್‌ ಪೈಪ್‌ಲೈನ್‌, ಜಲಸಿರಿ ಕಾಮಗಾರಿಗಾಗಿ ಅಗೆದ ರಸ್ತೆಯನ್ನು ಅನೇಕ ಕಡೆ ಹಾಗೇ ಬಿಡಲಾಗಿದೆ. ರಸ್ತೆ ಅಗೆದರೆ ಫಿನಿಶಿಂಗ್ ಮಾಡುವ ಕಾಳಜಿಯೇ ಇಲ್ಲ.

ಹೀಗೇ ಮುಂದುವರಿದರೆ ಮಳೆಗಾಲದಲ್ಲಿ ಕೆಸರಿನ ಸಮಸ್ಯೆ ಒಂದೆಡೆಯಾದರೆ ಮಳೆ ನೀರ ಚರಂಡಿಗಳು ಮಣ್ಣಿನಿಂದ ತುಂಬಿ ಬಹುದೊಡ್ಡ ಕೃತಕ ಪ್ರವಾಹಕ್ಕೆ ಕಾರಣವಾಗುವ ಆತಂಕ ಎದುರಾಗಿದೆ.

ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಇದ್ದುದರಿಂದ ಕೆಲಕಾಲ ಕಾಮಗಾರಿಗೆ ಸಮಸ್ಯೆಯಾಗಿದ್ದು ನಿಜ. ಇನ್ನಾದರೂ ಇರುವ ಅಲ್ಪಾವಧಿಯಲ್ಲಿ ಅರೆಬರೆ ಕಾಮಗಾರಿಗಳನ್ನು ಪೂರ್ತಿಗೊಳಿಸಿ, ಮಳೆಗಾಲದ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳದಿದ್ದರೆ ಮಳೆಗಾಲದಲ್ಲಿ ಅಧ್ವಾನ ಖಚಿತ.ರಾಜಕಾಲುವೆಗಳ ಹೂಳೆತ್ತುವ ಕಾರ್ಯ ಪೂರ್ತಿಯಾಗಿಲ್ಲ

ರಾಜಕಾಲುವೆಗಳ ಹೂಳು ಸರಿಯಾಗಿ ತೆರವುಗೊಳಿಸದೆ ಇರುವುದು ನಗರದಲ್ಲಿ ಕೃತಕ ಪ್ರವಾಹ ಉಂಟಾಗಲು ಮುಖ್ಯ ಕಾರಣ. ಜತೆಗೆ ಸಣ್ಣಪುಟ್ಟ ಚರಂಡಿಗಳ ಹೂಳು ತೆರವುಗೊಳಿಸುವುದು, ಕಸ ಕಡ್ಡಿ ತ್ಯಾಜ್ಯಗಳನ್ನು ತೆಗೆದು ಮಳೆನೀರು ಸರಾಗವಾಗಿ ಹರಿಯಲು ಅನುವು ಮಾಡಿಕೊಡುವುದು ಮಳೆಗಾಲದ ಮುನ್ನೆಚ್ಚರಿಕೆ ಕ್ರಮಗಳಲ್ಲಿ ಒಂದು. ಈ ಬಾರಿ ರಾಜಕಾಲುವೆ ಹೂಳೆತ್ತುವ ಕೆಲಸ ಇನ್ನೂ ಪೂರ್ತಿಯಾಗಿಲ್ಲ. ಮಳೆ ಬರುವ ಮೊದಲು ಹೂಳೆತ್ತದೆ ಇದ್ದರೆ ಎನ್ನುವ ಆತಂಕ ಪ್ರವಾಹ ಪೀಡಿತ ಪ್ರದೇಶದ ಜನರಲ್ಲಿದೆ.

ಮಹಾವೀರ (ಪಂಪ್‌ವೆಲ್ ಸರ್ಕಲ್), ಕೊಟ್ಟಾರ ಚೌಕಿ, ಬಳ್ಳಾಲ್‌ಬಾಗ್, ಮಾಲೆಮಾರ್, ಕುದ್ರೋಳಿ, ಅಡ್ಯಾರ್‌ ಕಣ್ಣೂರು ಸೇರಿದಂತೆ ಅನೇಕ ತಗ್ಗು ಪ್ರದೇಶಗಳು ಪ್ರತಿವರ್ಷ ಜಲಾವೃತವಾಗುತ್ತಿವೆ. ಸಣ್ಣ ಮಳೆಯಾದರೂ ಪಂಪ್‌ವೆಲ್‌ ಫ್ಲೈಓವರ್ ಅಡಿಯಲ್ಲಿ ನೀರು ನಿಂತು ಕೆರೆಯಂತಾಗುತ್ತದೆ. ಕಳೆದ ವರ್ಷ ಪಂಪ್‌ವೆಲ್‌ ಫ್ಲೈಓವರ್‌ ಕೃತಕ ಪ್ರವಾಹ ಜಾಲತಾಣದಲ್ಲಿ ಭಾರೀ ಟೀಕೆಗೆ ಕಾರಣವಾಗಿತ್ತು. ಆದರೆ ಇದುವರೆಗೂ ಅದಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ.

ಮಂಗಳೂರು ನಗರದಲ್ಲಿ ಒಟ್ಟು 53 ಕಿ.ಮೀ.ಗೂ ಅಧಿಕ ಉದ್ದದ 10ಕ್ಕೂ ಅಧಿಕ ರಾಜಕಾಲುವೆಗಳು ಇವೆ. ಕೃತಕ ಪ್ರವಾಹ ಉಂಟಾದರೆ ಕೊಳಚೆ ನೀರಿನದ್ದೇ ದೊಡ್ಡ ಸಮಸ್ಯೆ. ಆ ನೀರಲ್ಲಿ ಕಾಲಿಡಲೂ ಅಸಹ್ಯ. ಅದೇ ನೀರು ಮನೆಗಳಿಗೆ ನುಗ್ಗಿದರೆ ಜನ ಪಾಡು ಹೇಳತೀರದು. ಇದಕ್ಕೊಂದು ಶಾಶ್ವತ ಪರಿಹಾರದ ವ್ಯವಸ್ಥೆಯನ್ನೂ ಕಲ್ಪಿಸಿಕೊಡಬೇಕು ಎನ್ನುವುದು ನಾಗರಿಕರ ಆಗ್ರಹ.................

ನಗರದ ಎಲ್ಲ ಕಡೆ ರಸ್ತೆಗಳನ್ನು ಅಗೆದು ಹಾಕಿದ್ದಾರೆ. ಜಲಸಿರಿ, ಗೇಲ್‌, ಡ್ರೈನೇಜ್‌ ಕಾಮಗಾರಿಗಾಗಿ ಅಗೆದ ಬಳಿಕ ಆ ರಸ್ತೆ, ಚರಂಡಿಯನ್ನು ಮರುಸ್ಥಾಪನೆ ಮಾಡುತ್ತಿಲ್ಲ. ಇಂಥ ಕೆಲಸಗಳನ್ನು ಸರಿಯಾಗಿ ಮಾಡಲು ಅಧಿಕಾರಿಗಳಿಗೆ ಚುರುಕು ಮುಟ್ಟಿಸುವ ಕೆಲಸವನ್ನು ಪಾಲಿಕೆಯಲ್ಲಿ ಅಧಿಕಾರದಲ್ಲಿರುವವರು ಮಾಡುತ್ತಿಲ್ಲ. ಸಣ್ಣಪುಟ್ಟ ತೋಡುಗಳನ್ನೂ ಮುಚ್ಚಿಸಿಬಿಟ್ಟಿದ್ದಾರೆ. ಕಾಂಕ್ರೀಟ್‌ ರಸ್ತೆ ಮಾಡುವಾಗಲೇ ಒಳಚರಂಡಿ ಕೆಲಸವನ್ನು ಪೂರ್ತಿಗೊಳಿಸಿದ್ದರೆ ಇಂಥ ಸಮಸ್ಯೆ ಎದುರಾಗಲು ಸಾಧ್ಯವಿತ್ತಾ? ನಗರದೆಲ್ಲೆಡೆ ಅರೆಬರೆ ಕಾಮಗಾರಿಯಿಂದಾಗಿ ಮಳೆ ಬಂದರೆ ಕೃತಕ ಪ್ರವಾಹ ಆಗುವುದು ಖಚಿತ.

- ಪ್ರವೀಣ್‌ಚಂದ್ರ ಆಳ್ವ, ವಿಪಕ್ಷ ನಾಯಕ, ಮಂಗಳೂರು ಮಹಾನಗರ ಪಾಲಿಕೆ.....................

ರಾಜಕಾಲುವೆಗಳ ಹೂಳೆತ್ತಲು ಟೆಂಡರ್‌ ಆಗಿ ಕೆಲಸ ಈಗಾಗಲೇ ಆರಂಭವಾಗಿದ್ದು, ಇನ್ನೊಂದು ತಿಂಗಳೊಳಗೆ ಮುಕ್ತಾಯ ಆಗಲಿದೆ. ಸಣ್ಣ ಚರಂಡಿಗಳ ಕಸ, ಹೂಳು ತೆಗೆಯಲು ಟೆಂಡರ್‌ ಆಗಿದ್ದು, ಶೀಘ್ರ ಕೆಲಸ ಆರಂಭಿಸಲಾಗುವುದು. ನಗರದ ಅಲ್ಲಲ್ಲಿ ನಡೆಯುತ್ತಿರುವ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಮಳೆಗಾಲದೊಳಗೆ ಮುಕ್ತಾಯಗೊಳಿಸಲು ಸೂಚನೆ ನೀಡಿದ್ದೇನೆ. ಆದರೆ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ಸ್ವಲ್ಪ ಸಮಸ್ಯೆ ಇದೆ. 2ನೇ ಹಂತದ ಚುನಾವಣೆ ಮುಗಿದ ಬಳಿಕ ಈ ಎಲ್ಲ ವಿಚಾರಗಳನ್ನು ಚರ್ಚಿಸಲು ಸಭೆ ಕರೆಯಲು ಅನುಮತಿ ಕೋರಲಾಗುವುದು.

- ಸುಧೀರ್ ಶೆಟ್ಟಿ ಕಣ್ಣೂರು, ಮೇಯರ್‌, ಮಂಗಳೂರು ಮಹಾನಗರ ಪಾಲಿಕೆ