ಆತ್ಮಭೂಷಣ್
ಕನ್ನಡಪ್ರಭ ವಾರ್ತೆ ಮಂಗಳೂರುಸ್ಥಳೀಯ ನಗರ ಆಡಳಿತ ಮಾದರಿಯಲ್ಲೇ ಗ್ರಾಮ ಪಂಚಾಯ್ತಿಗಳಲ್ಲಿ ನೀರಿನ ಕರ ವಸೂಲಿಗೆ ಡಿಜಿಟಲ್ ಬಿಲ್ಲಿಂಗ್ ವ್ಯವಸ್ಥೆಯನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯ್ತಿ 223 ಗ್ರಾ.ಪಂ. ಪೈಕಿ 23 ಗ್ರಾಮ ಪಂಚಾಯ್ತಿಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಿಸಿ ಯಶಸ್ವಿಯಾಗಿದೆ. ಏಪ್ರಿಲ್ ಅಂತ್ಯದೊಳಗೆ ಇದನ್ನು ಉಳಿದ ಎಲ್ಲ ಗ್ರಾಮ ಪಂಚಾಯ್ತಿಗಳಿಗೆ ವಿಸ್ತರಿಸುವ ಯೋಜನೆಯನ್ನು ಜಿ.ಪಂ. ಆಡಳಿತ ಹಮ್ಮಿಕೊಂಡಿದೆ. ಇದು ಪೂರ್ಣಗೊಂಡರೆ ರಾಜ್ಯದಲ್ಲೇ ಜಿಲ್ಲೆಯ ಎಲ್ಲ ಗ್ರಾ.ಪಂ.ಗಳಲ್ಲಿ ಕುಡಿಯುವ ನೀರಿಗೆ ಮೀಟರ್ ಅಳವಡಿಸಿ ಡಿಜಿಟಲ್ ಶುಲ್ಕ ಸಂಗ್ರಹಿಸುತ್ತಿರುವ ರಾಜ್ಯದ ಮೊದಲ ಜಿಲ್ಲೆ ಎಂಬ ಹೆಗ್ಗಳಿಕೆಗೆ ದ.ಕ. ಪಾತ್ರವಾಗಲಿದೆ.ಯೂನಿಯನ್ ಬ್ಯಾಂಕಿನ ಸಿಎಸ್ಆರ್ ಕಾರ್ಯಕ್ರಮದಡಿ ಈ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಜಿ.ಪಂ.ಸಿಇಒ ವಿನಾಯಕ ನರ್ವಾಡೆ ಅವರ ಮುತುವರ್ಜಿಯಲ್ಲಿ ಈ ಯೋಜನೆ ಕಾರ್ಯಗತಗೊಳ್ಳುತ್ತಿದೆ. ರಾಜ್ಯದ ಹಲವು ಜಿಲ್ಲೆಗಳ ಆಯ್ದ ಗ್ರಾಮ ಪಂಚಾಯ್ತಿಗಳಲ್ಲಿ ನೀರಿನ ಶುಲ್ಕ ಡಿಜಿಟಲ್ ಪಾವತಿ ವ್ಯವಸ್ಥೆ ಇದೆ. ಆದರೆ ಒಂದು ಜಿಲ್ಲೆಯ ಎಲ್ಲ ಗ್ರಾಮ ಪಂಚಾಯ್ತಿಗಳಲ್ಲಿ ನೀರಿನ ಶುಲ್ಕ ಡಿಜಿಟಲ್ ಪಾವತಿ ಇಲ್ಲ. ಇದನ್ನು ದ.ಕ. ಜಿಲ್ಲೆಯಲ್ಲಿ ಸಾಕಾರಗೊಳಿಸಲು ಜಿ.ಪಂ. ಮುಂದಾಗಿದೆ. ಇದು ಕಾರ್ಯಗತಗೊಂಡರೆ, ರಾಜ್ಯದ ಎಲ್ಲ ಜಿಲ್ಲೆಗಳಿಗೆ ದ.ಕ. ಮಾದರಿಯ ಈ ಯೋಜನೆ ವಿಸ್ತರಣೆಗೊಳ್ಳುವ ಸಂಭವ ಇದೆ.
ಇನ್ನು 2 ಸಾವಿರ ಬಿಲ್ಲಿಂಗ್ ಬಾಕಿ: ಕಳೆದ ಒಂದು ತಿಂಗಳಿಂದ ನೀರಿನ ಸಂಪರ್ಕ ಹೊಂದಿರುವ 223 ಗ್ರಾ.ಪಂ.ಗಳ ಒಟ್ಟು 15 ಸಾವಿರ ಮನೆಗಳ ಪೈಕಿ 13 ಸಾವಿರ ಮನೆಗಳ ನೀರಿನ ಸಂಪರ್ಕದ ಬಿಲ್ಲಿಂಗ್ ವ್ಯವಸ್ಥೆಯನ್ನು ಆನ್‌ಲೈನ್‌ಗೆ ಅಳವಡಿಸಲಾಗಿದೆ. ಇನ್ನು 2 ಸಾವಿರ ಸಂಪರ್ಕಗಳನ್ನು ಆನ್‌ಲೈನ್ ಬಿಲ್ಲಿಂಗ್‌ಗೆ ಅಳವಡಿಸುವ ಕಾರ್ಯ ನಡೆಯುತ್ತಿದೆ. ಇದು ಪೂರ್ತಿಯಾದರೆ ಮನೆಯಿಂದಲೇ ಗ್ರಾಹಕರು ನೀರಿನ ಬಿಲ್ಲನ್ನು ಡಿಜಿಟಲ್ ಬಿಲ್ಲಿಂಗ್ ಮಿಷಿನ್ ಮೂಲಕ ನಗದು ಅಥವಾ ಯುಪಿಐ, ಕ್ಯೂಆರ್‌ಕೋಡ್, ಕ್ರೆಡಿಟ್, ಡೆಬಿಟ್ ಕಾರ್ಡ್ ಮತ್ತಿತರ ಆನ್‌ಲೈನ್ ವ್ಯವಸ್ಥೆ ಮೂಲಕ ಸುಲಭದಲ್ಲಿ ಪಾವತಿಸುವ ಅವಕಾಶ ಇದೆ.ಈ ವ್ಯವಸ್ಥೆಯಿಂದ ನೀರಿನ ನಿಗದಿತ ಬಳಕೆ, ನೀರಿನ ಕರ ಆದಾಯ, ಅಭಿವೃದ್ಧಿಗೆ ಆದಾಯ ಬಳಕೆಗೆ ಪಂಚಾಯ್ತಿಗಳಿಗೆ ಅನುಕೂಲವಾಗಲಿದೆ.
ಇನ್ನು ಎಲ್ಲ ನೀರಿನ ಸಂಪರ್ಕಗಳಿಗೂ ಮೀಟರ್
ಪ್ರಸಕ್ತ ಗ್ರಾ.ಪಂ.ಗಳಲ್ಲಿ ಬಹುತೇಕ ಮನೆಗಳು ಕುಡಿಯುವ ನೀರಿನ ಸಂಪರ್ಕ ಹೊಂದಿವೆ. ಆದರೆ ಎಲ್ಲ ನೀರಿನ ಸಂಪರ್ಕಕ್ಕೆ ಮೀಟರ್ ಇಲ್ಲ, ಇದ್ದರೂ ಸರಿಯಾಗಿ ಕರ ವಸೂಲಿ ಮಾಡುತ್ತಿಲ್ಲ. ಈಗ ಎಲ್ಲ ಕುಡಿಯುವ ನೀರಿನ ಸಂಪರ್ಕಗಳಿಗೆ ಮೀಟರ್ ಅಳವಡಿಕೆ ಮಾಡಲಾಗುತ್ತಿದೆ. ಜಲಜೀವನ್ ಮಿಷನ್ ಯೋಜನೆಯಡಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಪ್ರತಿ ಮನೆಗಳಿಗೆ ಕುಡಿಯುವ ನೀರಿನ ಸಂಪರ್ಕ ಯೋಜನೆ ಅನುಷ್ಠಾನಕ್ಕೆ ಸರ್ಕಾರದ ನಿರ್ದೇಶನ ಇದೆ. ಸ್ವಂತ ನೀರಿನ ಸೌಲಭ್ಯ ಹೊಂದಿರುವವರು ಪಂಚಾಯ್ತಿ ನೀರಿನ ಸಂಪರ್ಕದಿಂದ ದೂರ ಇದ್ದಾರೆ. ಅಂತಹ ಕಡೆಗಳಲ್ಲಿ ಪಂಚಾಯ್ತಿ ನೀರಿನ ಸಂಪರ್ಕಕ್ಕೆ ಮನ ಒಲಿಸಲಾಗುತ್ತಿದೆ. ಈಗಾಗಲೇ 223 ಗ್ರಾ.ಪಂ. ಪೈಕಿ 23 ಪಂಚಾಯ್ತಿಗಳಲ್ಲಿ ಪ್ರಾಯೋಗಿಕವಾಗಿ ನೀರಿನ ಬಿಲ್ ಡಿಜಿಟಲ್ ಪಾವತಿ ವ್ಯವಸ್ಥೆ ಜಾರಿಗೆ ತರಲಾಗಿದೆ. ಇದನ್ನು ಎಲ್ಲ ಗ್ರಾ.ಪಂ.ಗಳಿಗೆ ಏಪ್ರಿಲ್ ಅಂತ್ಯದೊಳಗೆ ವಿಸ್ತರಿಸಲಾಗುವುದು. ಇದು ಕಾರ್ಯರೂಪಕ್ಕೆ ಬಂದರೆ ಎಲ್ಲ ಗ್ರಾ.ಪಂ.ಗಳ ನೀರಿನ ಬಿಲ್‌ಗಳ ಡಿಜಿಟಲ್ ಪಾವತಿಯಲ್ಲಿ ದ.ಕ. ಜಿಲ್ಲೆಯ ಮೊದಲ ಆಗಲಿದೆ.
-ವಿನಾಯಕ್ ನಾರ್ವಾಡೆ, ಸಿಇಒ, ದ.ಕ. ಜಿ.ಪಂ.