ಕನ್ನಡಪ್ರಭ ವಾರ್ತೆ ಭೇರ್ಯ
ಸಾಲಿಗ್ರಾಮ ತಾಲೂಕಿನ ಭೇರ್ಯ ಗ್ರಾಪಂಗೆ ಎರಡನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರ ಲಭಿಸಿದೆ.2022-23ನೇ ಸಾಲಿನಲ್ಲಿ ‘ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭೇರ್ಯ ಗ್ರಾಪಂ ಆಯ್ಕೆಯಾಗಿತ್ತು. ಅ. 2 ರಂದು ಬೆಂಗಳೂರಿನಲ್ಲಿ ಆಯೋಜಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಗಾಂಧಿ ಗ್ರಾಮ ಪುರಸ್ಕಾರವನ್ನು ನೀಡಿ ಗೌರವಿಸಿ. ಪುರಸ್ಕಾರದ 5 ಲಕ್ಷ ಅನುದಾನದ ಚೆಕ್ ಹಾಗೂ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗಿತ್ತು.
2024-25ನೇ ಸಾಲಿನಲ್ಲಿ ಡಿಜಿಟಲ್ ಗ್ರಂಥಾಲಯ, ಸ್ವಚ್ಚತೆ, ನೈರ್ಮಲ್ಯ, ಕಂದಾಯ ವಸೂಲಿ, ಸಮರ್ಪಕ ಕುಡಿಯುವ ನೀರು ಸರಬರಾಜು ಇನ್ನಿತರ ವಿಭಾಗಗಳಲ್ಲಿ ವಿಶೇಷ ಸಾಧನೆ ಮಾಡಲಾಗಿದ್ದು, ಇದರ ಜೊತೆಗೆ ನರೇಗಾ ಯೋಜನೆ ಅನುಷ್ಠಾನದಲ್ಲಿ ಉತ್ತಮ ಸಾಧನೆ, ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬಿಡುಗಡೆಯಾದ ಅನುದಾನದ ಸಮರ್ಪಕ ಬಳಕೆ, ಸಿಸಿ ಕ್ಯಾಮೆರಾ ಅಳವಡಿಕೆ, ಸೋಲಾರ್ ಆಧಾರಿತ ವಿದ್ಯುತ್ ಬಳಕೆ, ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಚ್ಛತೆ, ನರೇಗಾ ಯೋಜನೆಯ ಫಲಾನುಭವಿ ಕುಟುಂಬದ ಎಲ್ಲ ಸದಸ್ಯರಿಗೂ ಬ್ಯಾಂಕ್ ಖಾತೆ, ಖಾತೆಗೆ ಆಧಾರ್ ಜೋಡಣೆ ಸೇರಿದಂತೆ ಹಲವು ಮಾನದಂಡಗಳ ಆಧಾರದ ಮೇಲೆ ಭೇರ್ಯ ಗ್ರಾಪಂ ಮತ್ತೆ ಸತತ ಎರಡನೇ ಬಾರಿಗೆ 2024-25ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗುವ ಮೂಲಕ ಇತರೆ ಗ್ರಾಮ ಪಂಚಾಯಿತಿಗಳಿಗೆ ಮಾದರಿಯಾಗಿದೆ.ಕೆಲವು ಆಡಳಿತ ಮತ್ತು ಆರ್ಥಿಕ ಮಾನದಂಡಗಳ ಆಧಾರದ ಮೇಲೆ ಗ್ರಾಪಂ ಸಾಧಿಸುವ ಶೇ. 90 ರಿಂದ ಶೇ. 95ರಷ್ಟು ಸಾಧನೆಯನ್ನು ಮೌಲ್ಯಮಾಪನಾ ಮಾಡಿ ಅದಕ್ಕೆ ಸೂಕ್ತ ಪ್ರೋತ್ಸಾಹಧನ ನೀಡುವುದೇ ಗಾಂಧಿ ಗ್ರಾಮ ಪುರಸ್ಕಾರ. ರಾಜ್ಯದಲ್ಲಿ ಉತ್ತಮ ಕಾರ್ಯ ಮಾಡಿರುವ ಗ್ರಾಮ ಪಂಚಾಯಿತಿಗಳನ್ನು ಗುರುತಿಸಿ, ಉತ್ತೇಜನಕ್ಕೆ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಈನಿಟ್ಟಿನಲ್ಲಿ ಭೇರ್ಯ ಗ್ರಾಮ ಪಂಚಾಯತಿ ಗ್ರಾಮಸಭೆಯ ನಡಾವಳಿಗಳನ್ನು ಪಂಚತಂತ್ರ ತಂತ್ರಾಂಶಕ್ಕೆ ಅಳವಡಿಸಿರುವುದು ಸಹ ಗಾಂಧಿ ಗ್ರಾಮ ಪುರಸ್ಕಾರ ಲಭಿಸಲು ಮುಖ್ಯ ಕಾರಣವಾಗಿದೆ.
-----------
ಭೇರ್ಯ ಗ್ರಾಮ ಪಂಚಾಯಿತಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿರುವುದು ಸಂತಸ ತಂದಿದೆ. ಸಿಬ್ಬಂದಿ, ಅಧ್ಯಕ್ಷರಾದಿಯಾಗಿ ಎಲ್ಲ ಸದಸ್ಯರ ಸಹಕಾರ ಹಾಗೂ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಿಂದ ಅಭಿವೃದ್ದಿ ಕಾರ್ಯ ಮಾಡಲು ಸಾಧ್ಯವಾಗಿದೆ. ಮತ್ತಷ್ಟು ಅಭಿವೃದ್ಧಿ ಕಾಮಗಾರಿ ಮಾಡಲು ಈ ಪ್ರಶಸ್ತಿಯು ಪ್ರೇರಣೆ ನೀಡಿದೆ.
- ಮಮತ, ಪಿಡಿಒ ಭೇರ್ಯ ಗ್ರಾಪಂ.--------
ತಾಲೂಕಿನ ಜನಪ್ರತಿನಿಧಿಗಳು, ಗ್ರಾಪಂನ ಎಲ್ಲ ಸದಸ್ಯರು ಹಾಗೂ ತಾಲೂಕಿನ ಎಲ್ಲ ಅಧಿಕಾರಿಗಳ ಸಹಕಾರದಿಂದ ಮತ್ತೊಮ್ಮೆ ಎರಡನೇ ಬಾರಿಗೆ ಗಾಂಧಿ ಗ್ರಾಮ ಪ್ರಶಸ್ತಿ ಲಭಿಸಿದೆ. ಮುಂದೆಯೂ ಇದೇ ರೀತಿ ಎಲ್ಲ ಸದಸ್ಯರೊಟ್ಟಿಗೆ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯ ನಿರ್ವಹಿಸಿದರೆ ಗ್ರಾಮದ ಜನರಿಗೆ ಸಕಲ ರೀತಿಯ ಅನುಕೂಲಗಳನ್ನೂ ಪಂಚಾಯಿತಿಯಿಂದ ಕಲ್ಪಿಸಿಕೊಡಲಾಗುವುದು- ಎ.ಎನ್. ರವಿ. ತಾಪಂ ಇಒ, ಸಾಲಿಗ್ರಾಮ ತಾಲೂಕು.
-----------ಗ್ರಾಮೀಣ ಪ್ರದೇಶದ ನಾಗರಿಕರಿಗೆ ಅಗತ್ಯ ಮೂಲಭೂತ ಸೌಕರ್ಯ ಮತ್ತು ಸೇವೆಗಳನ್ನು ಒದಗಿಸಿ ಸರ್ಕಾರದ ಸವಲತ್ತುಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು. ಇವಿಷ್ಟು ಕೆಲಸಗಳನ್ನು ತಾಲ್ಲೂಕಿನ ಭೇರ್ಯ ಗ್ರಾಮ ಪಂಚಾಯಿತಿ ಸಮರ್ಪಕವಾಗಿ ನಿರ್ವಹಿಸಿರುವುದರಿಂದ ಹಾಗೂ ಪಾರದರ್ಶಕ ಆಡಳಿತ ಜಾರಿಗೊಳಿಸಿರುವುದರಿಂದ ಗ್ರಾಮ ಪಂಚಾಯಿತಿ ಮತ್ತೊಮ್ಮೆ ಗಾಂಧಿ ಪುರಸ್ಕಾರಕ್ಕೆ ಭಾಜನವಾಗಿದೆ.
- ಕೆ.ಜೆ.ಮಲ್ಲಿಕಾರ್ಜುನ್, ಆಡಳಿತಾಧಿಕಾರಿ, ಭೇರ್ಯ ಗ್ರಾಪಂ ಹಾಗೂ ಹಿರಿ ಸಹಾಯಕ ಕೃಷಿ ನಿರ್ದೇಶಕ.