ಸಾರಾಂಶ
ವಿರಾಜಪೇಟೆ ಪಟ್ಟಣದ ಸೇಂಟ್ ಆನ್ಸ್ ಪದವಿ ಕಾಲೇಜಿನ ಗ್ರಂಥಾಲಯ ವಿಭಾಗದಿಂದ ಆಯೋಜಿಸಲಾಗಿದ್ದ ಈಸಿಲಿಬ್ ಸಾಫ್ಟ್‌ವೇರ್ ಕುರಿತ ಗ್ರಂಥಪಾಲಕರ ಒಂದು ದಿನದ ಕಾರ್ಯಾಗಾರದಲ್ಲಿ ಬೆಂಗಳೂರಿನ ಈಸಿಲಿಬ್ ಸಾಫ್ಟ್‌ವೇರ್ ಹಾಗೂ ಫೈನ್ ವೆನ್ ಸಿಸ್ಟಮ್ ಟೆಕ್ನಾಲಜಿಯ ಸಿಇಓ ವಾಸು ಎ. ದೇಶಪಾಂಡೆ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡರು.
ಕನ್ನಡಪ್ರಭ ವಾರ್ತೆ ವಿರಾಜಪೇಟೆ
ಗ್ರಂಥಾಲಯಗಳ ಡಿಜಿಟಲೀಕರಣದಿಂದ ಜ್ಞಾನದ ಪ್ರಸಾರವಾಗಿ ವಿಸ್ತರಣೆಯಾಗುತ್ತಾ ಹೋಗುತ್ತದೆ ಎಂದು ಬೆಂಗಳೂರಿನ ಈಸಿಲಿಬ್ ಸಾಫ್ಟ್‌ವೇರ್ ಹಾಗೂ ಫೈನ್ ವೆನ್ ಸಿಸ್ಟಮ್ ಟೆಕ್ನಾಲಜಿಯ ಸಿಇಓ ವಾಸು ಎ. ದೇಶಪಾಂಡೆ ಅಭಿಪ್ರಾಯಪಟ್ಟಿದ್ದಾರೆ.ವಿರಾಜಪೇಟೆ ಪಟ್ಟಣದ ಸೇಂಟ್ ಆನ್ಸ್ ಪದವಿ ಕಾಲೇಜಿನ ಗ್ರಂಥಾಲಯ ವಿಭಾಗದಿಂದ ಆಯೋಜಿಸಲಾಗಿದ್ದ ಈಸಿಲಿಬ್ ಸಾಫ್ಟ್‌ವೇರ್ ಕುರಿತ ಗ್ರಂಥಪಾಲಕರ ಒಂದು ದಿನದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.ಕ್ಲಾವುಡ್ ವರ್ಷನ್ ನ ಪರಿಣಾಮಕಾರಿ ಬಳಕೆ ಪ್ರಮುಖವಾಗಿದ್ದು, ಇದು ಆದುನಿಕ ತಂತ್ರಾಂಶ ವನ್ನು ಪರಿಚಯಿಸುತ್ತದೆ. ಓದುಗರಿಗೆ ಇದು ಉಪಯುಕ್ತವಾಗಿದ್ದು, ತನ್ನತ್ತ ಸೆಳೆಯುತಿದೆ ಎಂದರು. ಡಿಜಿಟಲೀಕರಣದ ಬಳಕೆ ಹೆಚ್ಚಿದಂತೆ ಅಧ್ಯಯನ ವ್ಯಾಪ್ತಿ ವಿಸ್ತಾರವಾಗುತ್ತಿದ್ದು ಸಿಬ್ಬಂದಿಗೂ ಸರಳ ವಿಧಾನವಾಗಿದೆ ಎಂದರು.
ಸಾನಿಧ್ಯ ವಹಿಸಿದ್ದ ಸೇಂಟ್ ಆನ್ಸ್ ಪದವಿ ಕಾಲೇಜಿನ ವ್ಯವಸ್ಥಾಪಕ ರೆ. ಫಾ. ಮದಲೈ ಮುತ್ತು ಮಾತನಾಡಿ, ಪುಸ್ತಕ ಓದುವುದರಿಂದ ಜ್ಞಾನದ ಜೊತೆಗೆ ವ್ಯಕ್ತಿತ್ವ ವಿಕಸನವಾಗುತ್ತದೆ. ಅದರಲ್ಲೂ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗೆ ಪುಸ್ತಕ ಓದುವುದು ಅತೀ ಮುಖ್ಯ ಎಂದರು.ಅಧ್ಯಕ್ಷತೆ ವಹಿಸಿದ್ದ ಪದವಿ ಕಾಲೇಜಿನ ಪ್ರಾಂಶುಪಾಲೆ ತೃಪ್ತಿ ಬೋಪಣ್ಣ ಮಾತನಾಡಿ, ವಿದ್ಯಾರ್ಥಿಗಳು ಗ್ರಂಥಾಲಯಕ್ಕೆ ನಿರಂತರ ಭೇಟಿ ನೀಡಿ ಅಧ್ಯಯನಶೀಲರಾಗಬೇಕು. ಪರೀಕ್ಷೆಯ ಜೊತೆಗೆ ಜೀವನ ಮೌಲ್ಯಗಳನ್ನು ಅರಿತು ಆದರ್ಶವಾಗಿರಬೇಕು ಎಂದರು.ಕಾಲೇಜಿನ ಗ್ರಂಥಪಾಲಕ ಹಿಲ್ಡ್ರೆಡ್ ಮೆನೇಜೆಸ್ ಪ್ರಾಸ್ತಾವಿಕ ಮಾತನಾಡಿದರು. ಕಾಲೇಜಿನ ಐಕ್ಯೂಎಸಿ ಸಂಚಾಲಕಿ ಹೇಮ, ಸಹಾಯಕ ಗ್ರಂಥಪಾಲಕಿ ಲವೀನಾ ಇದ್ದರು.