ಉಡುಪಿ ನಗರದ ಗಾಂಧಿ ಆಸ್ಪತ್ರೆಯಲ್ಲಿ ಕಾಗದರಹಿತ ಒಳರೋಗಿ ಡಿಜಿಟಲ್ ದಾಖಲೆ ನಿರ್ವಹಣಾ ವ್ಯವಸ್ಥೆಯನ್ನು ಶ್ರೀ ರಾಘವೇಂದ್ರ ಮಠದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು.
ಉಡುಪಿ: ನಗರದ ಗಾಂಧಿ ಆಸ್ಪತ್ರೆಯಲ್ಲಿ ಕಾಗದರಹಿತ ಒಳರೋಗಿ ಡಿಜಿಟಲ್ ದಾಖಲೆ ನಿರ್ವಹಣಾ ವ್ಯವಸ್ಥೆಯನ್ನು ಶ್ರೀ ರಾಘವೇಂದ್ರ ಮಠದ ಶ್ರೀ ಸುಬುಧೇಂದ್ರ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಸ್ವಾಮೀಜಿ, ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳುವುದರಿಂದ ಪ್ರಕೃತಿ ಸಂರಕ್ಷಣೆ ಸಾಧ್ಯ. ಕಾಗದ ಬಳಕೆಯನ್ನು ಕಡಿಮೆ ಮಾಡಿದರೆ ಪರಿಸರ ರಕ್ಷಣೆಗೂ ಸಹಕಾರ ದೊರೆಯುತ್ತದೆ. ಇಂತಹ ಐತಿಹಾಸಿಕ ಹಾಗೂ ದೂರದೃಷ್ಟಿಯ ನಿರ್ಧಾರವನ್ನು ಕೈಗೊಂಡಿರುವ ಗಾಂಧಿ ಆಸ್ಪತ್ರೆ ಮಾದರಿಯಾಗಿದೆ ಎಂದರು.ಗಾಂಧಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಹರಿಶ್ಚಂದ್ರ ಹಾಗೂ ಲಕ್ಷ್ಮಿ ಹರಿಶ್ಚಂದ್ರ ಉಪಸ್ಥಿತರಿದ್ದರು. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ವ್ಯಾಸರಾಜ ತಂತ್ರಿ ಸ್ವಾಗತಿಸಿದರು.ಐಎಂಎ ಅಧ್ಯಕ್ಷ ಡಾ. ಅಶೋಕ್ ಕುಮಾರ್ ಕಾಮತ್, ಎಪಿಐ ಅಧ್ಯಕ್ಷ ಡಾ. ಸುರೇಶ್ ಹೆಗಡೆ, ಮಾಜಿ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಮಧುಸೂಧನ ನಾಯಕ್, ಹಿರಿಯ ವೈದ್ಯ ಡಾ. ಚಂದ್ರಶೇಖರ್ ಅಡಿಗ, ಡಾ. ಆರ್.ಎನ್. ಭಟ್, ಡಾ. ಅಶೋಕ್ ಕುಮಾರ್ ವೈ.ಜಿ., ಡಾ. ವಿಷುಕುಮಾರ್, ಡಾ. ಕಿರಣ್ ಕುಮಾರ್ ಇದ್ದರು.ಈ ಡಿಜಿಟಲ್ ದಾಖಲೆ ವ್ಯವಸ್ಥೆ ಅಭಿವೃದ್ಧಿಪಡಿಸಿದ ಅಕ್ಷಯ ವಿ. ನಾಯಕ್ ಹಾಗೂ ಕಿರಣ್ ರಾವ್ ಅವರನ್ನು ಗೌರವಿಸಲಾಯಿತು. ಹಿರಿಯರಾದ ಅಗ್ರಹಾರ ಲಕ್ಷ್ಮೀನಾರಾಯಣ ತಂತ್ರಿ, ದಾಮೋದರ ಭಟ್, ಉಡುಪಿಯ ರಾಘವೇಂದ್ರ ಮಠದ ವ್ಯವಸ್ಥಾಪಕ ಜಯತೀರ್ಥ ಇದ್ದರು.