ಸುಸ್ಥಿರ ಅಭಿವೃದ್ಧಿ ಕಾಣಲು ಡಿಜಿಟಲೀಕರಣ ಅಗತ್ಯ

| Published : Oct 21 2024, 12:33 AM IST

ಸುಸ್ಥಿರ ಅಭಿವೃದ್ಧಿ ಕಾಣಲು ಡಿಜಿಟಲೀಕರಣ ಅಗತ್ಯ
Share this Article
  • FB
  • TW
  • Linkdin
  • Email

ಸಾರಾಂಶ

ನೈಸರ್ಗಿಕ ಸಂಪನ್ಮೂಲಗಳು ನಾಶವಾಗುವುದನ್ನು ತಡೆಯಲು, ಸುಸ್ಥಿರ ಅಭಿವೃದ್ಧಿಯನ್ನು ಕಾಣಲು ದೇಶ ಡಿಜಿಟಲೀಕರಣವಾಗಬೇಕು.

ಕನ್ನಡಪ್ರಭ ವಾರ್ತೆ ತುಮಕೂರುನೈಸರ್ಗಿಕ ಸಂಪನ್ಮೂಲಗಳು ನಾಶವಾಗುವುದನ್ನು ತಡೆಯಲು, ಸುಸ್ಥಿರ ಅಭಿವೃದ್ಧಿಯನ್ನು ಕಾಣಲು ದೇಶ ಡಿಜಿಟಲೀಕರಣವಾಗಬೇಕು. ನಾವೀನ್ಯತೆಗಳಿಂದ ಕೂಡಿದ ನಾಡಿನಲ್ಲಿ ಪ್ರಕೃತಿ ಸಂಪತ್ತು ಹಾಳಾಗುವುದಿಲ್ಲ ಎಂದು ಬೆಳಗಾವಿಯ ರಾಣಿಚೆನ್ನಮ್ಮ ವಿವಿಯ ಕುಲಪತಿ ಪ್ರೊ. ಸಿ.ಎಂ. ತ್ಯಾಗರಾಜ ಹೇಳಿದರು.ತುಮಕೂರು ವಿವಿಯಲ್ಲಿ ವ್ಯವಹಾರ ಆಡಳಿತ ಅಧ್ಯಯನ ಮತ್ತು ಸಂಶೋಧನಾ ವಿಭಾಗವು ವಿಷನ್‌ ಕರ್ನಾಟಕ ಫೌಂಡೇಶನ್ ಸಹಯೋಗದಲ್ಲಿ ಆಯೋಜಿಸಿದ್ದ ‘ವ್ಯವಹಾರದ ಸುಸ್ಥಿರ ಪರಿಸರ ವ್ಯವಸ್ಥೆಗಾಗಿ ಡಿಜಿಟಲೀಕರಣ ಮತ್ತು ನಾವೀನ್ಯತೆ’ ಕುರಿತು ರಾಷ್ಟ್ರೀಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.ದೇಶವು ಡಿಜಿಟಲೀಕರಣವಾದಾಗ ಭೂಮಿಯನ್ನು ನಾಶ ಮಾಡುವ ಎಲ್ಲ ಕಾರ್ಯಗಳು ನಿಲ್ಲುತ್ತವೆ. ಸಾಮರ್ಥ್ಯ ವರ್ಧನೆಯಾಗಲು ನಾವೀನ್ಯತೆಗಳಿಂದ ಕೂಡಿದ ಪರಿಸರ ಸ್ನೇಹಿ ಆವಿಷ್ಕಾರಗಳು ಸಹಕಾರಿಯಾಗುತ್ತವೆ. ಮಾನವೀಯತೆಯನ್ನು ಉತ್ತಮಗೊಳಿಸಿ, ಸಮಯ, ಸಂಪನ್ಮೂಲಗಳನ್ನು ಉಳಿಸುತ್ತವೆ ಎಂದು ತಿಳಿಸಿದರು.ಕುಲಪತಿ ಪ್ರೊ.ಎಂ. ವೆಂಕಟೇಶ್ವರಲು ಮಾತನಾಡಿ, ಎಲ್ಲರೂ ವ್ಯಾವಹಾರಿಕ ಮನಸ್ಥಿತಿಯ ಮೇಲೆ ತೇಲುತ್ತಿರುವಾಗ ನೈತಿಕ ಮನಸ್ಥಿತಿ ಕಡಿಮೆಯಾಗಿದೆ. ನಾವು ಆರೋಗ್ಯಕರ ರಾಷ್ಟ್ರವನ್ನು ನಿರ್ಮಿಸಬೇಕು. ಆದ್ದರಿಂದ ಡಿಜಿಟಲೀಕರಣ ಬಹಳ ಮುಖ್ಯ. ನಮಗೆ ಆಡಳಿತದಲ್ಲಿ ಪಾರದರ್ಶಕತೆ ಬೇಕು. ನಾವು ಸರಳದಿಂದ ದೊಡ್ಡಮಟ್ಟದ ಆವಿಷ್ಕಾರಕ್ಕೆ ಜಿಗಿಯಬೇಕು. ಇಡೀ ಜಗತ್ತು ನಮ್ಮ ನಾವೀನ್ಯತೆ, ಆವಿಷ್ಕಾರವನ್ನು ಪಠಿಸಬೇಕು ಎಂದು ಹೇಳಿದರು.ಫೆಡರೇಶನ್‌ ಆಫ್‌ ಕರ್ನಾಟಕ ಚೇಂಬರ್ಸ್ ಆಫ್‌ಕಾಮರ್ಸ್ ಮತ್ತು ಇಂಡಸ್ಟ್ರಿಯ ಉಪಾಧ್ಯಕ್ಷೆ ಉಮಾರೆಡ್ಡಿ ಮಾತನಾಡಿ, ಡಿಜಿಟಲೀಕರಣ ಮತ್ತು ನಾವೀನ್ಯತೆ ಎರಡು ಪರಿವರ್ತಕ ಶಕ್ತಿಗಳಾಗಿವೆ. ಇದು ನಿರಂತರ ಆವಿಷ್ಕಾರಗಳ ಯುಗ. ನಾವು ಬದಲಾವಣೆಗಳಿಗೆ ಹೊಂದಿಕೊಳ್ಳಬೇಕು. ಸಮರ್ಥನೀಯ ಹೊಂದಾಣಿಕೆ ಮುಖ್ಯವಾಗಿದೆ ಎಂದರು.ಸಮ್ಮೇಳನದಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಪ್ರತಿನಿಧಿಗಳು 70 ಸಂಶೋಧನಾ ಪ್ರಬಂಧಗಳನ್ನು ಮಂಡಿಸಿದರು. ವಿಷನ್‌ ಕರ್ನಾಟಕ ಫೌಂಡೇಶನ್ ನಿರ್ದೇಶಕ ಸುಧೀರ್ ಮಧುಗಿರಿ ಸಮ್ಮೇಳನದ ದಿಕ್ಸೂಚಿ ಭಾಷಣ ಮಾಡಿದರು. ವಿಷನ್‌ ಕರ್ನಾಟಕ ಫೌಂಡೇಶನ್‌ ಅಧ್ಯಕ್ಷ ಕಿಶೋರ್‌ ಜಾಗೀರ್ದಾರ್, ಸ್ನಾತಕೋತ್ತರ ವ್ಯವಹಾರ ಆಡಳಿತ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ಅಧ್ಯಕ್ಷೆಪ್ರೊ. ನೂರ್‌ಅಫ್ಜಾ, ಪರೀಕ್ಷಾಂಗ ಕುಲಸಚಿವ ಪ್ರೊ.ಪ್ರಸನ್ನಕುಮಾರ್‌ ಕೆ., ಸ್ನಾತಕೋತ್ತರ ಕಾನೂನು ಅಧ್ಯಯನ ವಿಭಾಗದ ಸಂಯೋಜಕ ಪ್ರೊ.ಎ. ಮೋಹನ್‌ರಾಮ್ ಉಪಸ್ಥಿತರಿದ್ದರು.