ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ಜಿಲ್ಲೆಯಲ್ಲಿ 14,40,534 ಗಣತಿ ನಮೂನೆಗಳ ಪೈಕಿ ಆ.07ರವರೆಗೆ 12,98,986 ಗಣತಿ ನಮೂನೆಗಳ (ಶೇ.90.17) ಡಿಜಿಟಲೀಕರಣ ಪೂರ್ಣಗೊಳಿಸಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‍ಐಆರ್)-2026ರ ಅಂಗವಾಗಿ ಸಂಗ್ರಹಿಸಲಾದ ವಿವರಗಳ ಆಧಾರದ ಮೇಲೆ ಸಿದ್ಧಪಡಿಸಲಾದ ಎಎಸ್‍ಡಿಡಿಒ (ಗೈರು ಹಾಜರಿ, ಶಾಶ್ವತ ವಲಸೆ, ಮರಣ, ಡಬಲ್ ಎಂಟ್ರಿ, ಇತರೆ) ಪಟ್ಟಿಯನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ವಿತರಿಸಿ ಅವರು ಮಾತನಾಡಿದರು.

ಎಸ್‍ಐಆರ್-2026 ರ ಅಂಗವಾಗಿ ಮನೆ ಮನೆಗೆ ಗಣತಿ ನಮೂನೆ (ಎನ್ಯುಮರೇಷನ್ ಫಾರಂ) ವಿತರಿಸಿ, ಅರ್ಹ ಮತದಾರರಿಂದ ಅಗತ್ಯ ಮಾಹಿತಿ ಸಂಗ್ರಹಿಸಿ, ಅದನ್ನು ಡಿಜಿಟಲೀಕರಣಗೊಳಿಸಲಾಗಿದೆ. ಪ್ರಸ್ತುತ ಕರಡು ಮತದಾರರ ಪಟ್ಟಿ ತಯಾರಿಕೆಗೆ ದತ್ತಾಂಶ ಕಳುಹಿಸಿಕೊಡಲಾಗುತ್ತಿದೆ. ಗಣತಿ ನಮೂನೆ ವಿತರಣೆಯ ನಂತರ ಮಾಹಿತಿ ಸಂಗ್ರಹವಾಗದಿರುವ ಮತದಾರರ ವಿವರಗಳನ್ನು ಒಳಗೊಂಡ ಎಎಸ್‍ಡಿಡಿಒ ಪಟ್ಟಿ ಸಿದ್ಧಪಡಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಒಟ್ಟು 14,40, 534 ಮತದಾರರಿಗೆ ಗಣತಿ ನಮೂನೆ ವಿತರಿಸಲಾಗಿತ್ತು. ಈ ಪೈಕಿ 12,98,986 (ಶೇ. 90.17) ಮತದಾರರ ಮಾಹಿತಿಯನ್ನು ಡಿಜಿಟಲೀಕರಣಗೊಳಿಸಲಾಗಿದೆ. ಉಳಿದ 30,730 ಮರಣ, 70,007 ಶಾಶ್ವತ ವಲಸೆ, 21,095 ಡಬಲ್ ಎಂಟ್ರಿ, 18,699 ಗೈರು ಹಾಜರು ಹಾಗೂ 1017 ಇತರೆ ಸೇರಿದಂತೆ ಒಟ್ಟು 1,41,548 ಮತದಾರರು ಎಎಸ್‍ಡಿಡಿಒ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದು, ಈ ಮತದಾರರು ಮುಂಬರುವ ಕರಡು ಮತದಾರರ ಪಟ್ಟಿಯಲ್ಲಿ ಬರುವುದಿಲ್ಲ. ವಿಧಾನಸಭಾ ಕ್ಷೇತ್ರ ಮತ್ತು ಮತಗಟ್ಟೆವಾರು ಎಎಸ್‍ಡಿಡಿಒ ಪಟ್ಟಿಯನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.


ಆಗಸ್ಟ್ 8ಕ್ಕೆ ಎನ್ಯುಮರೇಷನ್ ಫಾರಂ ಸ್ವೀಕಾರ ಅಂತಿಮಗೊಳ್ಳಲಿದ್ದು, ಆ.17ರಂದು ಕರಡು ಮತದಾರರ ಪಟ್ಟಿ ಪ್ರಕಟಣೆಗೊಳ್ಳಲಿದೆ. ಆಗಸ್ಟ್ 17 ರಿಂದ ಸೆಪ್ಟೆಂಬರ್ 16 ರವರೆಗೆ ಆಕ್ಷೇಪಣೆ ಹಾಗೂ ಹಕ್ಕುಗಳ ಸಲ್ಲಿಕೆಗೆ ಅವಕಾಶ ನೀಡಲಾಗಿದ್ದು, ಅಕ್ಟೋಬರ್ 15ರೊಳಗೆ ಸಲ್ಲಿಕೆಯಾದ ಆಕ್ಷೇಪಣೆಗಳನ್ನು ವಿಲೇವಾರಿ ಮಾಡಿ, ಅಕ್ಟೋಬರ್ 19ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಹೇಳಿದರು.

ಅಪರ ಜಿಲ್ಲಾಧಿಕಾರಿ ಹಾಗೂ ಅಪರ ಜಿಲ್ಲಾ ಚುನಾವಣಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಮಾತನಾಡಿ, ಸಾರ್ವಜನಿಕರಿಗೆ ಅನುಕೂಲವಾಗುವಂತೆ ರಾಜ್ಯ ಸರ್ಕಾರವು ಉಚಿತವಾಗಿ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳನ್ನು ಮುದ್ರಿಸಿ ಮನೆ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಿದೆ. ಜಿಲ್ಲೆಯಲ್ಲಿ ಈಗಾಗಲೇ ಸುಮಾರು 19.90 ಲಕ್ಷ ಜಾತಿ ಪ್ರಮಾಣ ಪತ್ರಗಳನ್ನು ಮನೆಗೆ ತಲುಪಿಸುವ ಕಾರ್ಯ ನಡೆದಿದ್ದು, 6.5 ಲಕ್ಷಕ್ಕೂ ಹೆಚ್ಚು ಪ್ರಮಾಣ ಪತ್ರ ವಿತರಣೆಯಾಗಿದೆ. ಸಾರ್ವಜನಿಕರು ದಾಖಲೆಗಳಿಗಾಗಿ ಅಲೆಯಬಾರದು ಎಂಬುದು ಇದರ ಉದ್ದೇಶವಾಗಿದೆ ಎಂದರು.

ಜಿಲ್ಲಾ ಜೆಡಿಎಸ್ ಮಹಾಪ್ರಧಾನ ಕಾರ್ಯದರ್ಶಿ ಡಿ.ಗೋಪಾಲಸ್ವಾಮಿ ನಾಯಕ, ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿಗಳಾದ ಡಿ.ಎನ್.ಮೈಲಾರಪ್ಪ, ಕೆ.ಪಿ.ಸಂಪತ್ ಕುಮಾರ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಜಿ.ಹೆಚ್.ಮೋಹನ್ ಕುಮಾರ್, ಎಎಪಿ ಜಿಲ್ಲಾ ಕಾರ್ಯದರ್ಶಿ ಎಂ.ರಾಮಪ್ಪ ಇದ್ದರು.