ಸಾರಾಂಶ
ಚನ್ನಪಟ್ಟಣ: ರಾಜ್ಯ ಸರ್ಕಾರ ಭೂದಾಖಲೆ ಹಾಗೂ ಇತರೆ ದಾಖಲೆಗಳ ಗಣಕೀಕೃತಗೊಳಿಸುವ ಯೋಜನೆಯನ್ನು ಜಾರಿಗೆ ತಂದಿದ್ದು, ಇದರಿಂದ ಜನರಿಗೆ ಅನುಕೂಲವಾಗಲಿದೆ ಎಂದು ಶಾಸಕ ಸಿ.ಪಿ.ಯೋಗೇಶ್ವರ್ ತಿಳಿಸಿದರು.
ನಗರದ ತಾಲೂಕು ಕಚೇರಿಯಲ್ಲಿ ಭೂಸುರಕ್ಷಾ ಯೋಜನೆಯಡಿ ಕಂದಾಯ ದಾಖಲೆಗಳನ್ನು ಗಣಕೀಕರಣಗೊಳಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಮಾರ್ಗದರ್ಶನದಲ್ಲಿ ಕಂದಾಯ ಸಚಿವ ಕೃಷ್ಣ ಭೈರೇಗೌಡರ ಚಿಂತನೆಯ ಯೋಜನೆ ಜಾರಿಗೆ ಬಂದಿದೆ. ಈ ಯೋಜನೆಯಲ್ಲಿ ದುಸ್ಥಿಯಲ್ಲಿರುವ ಹಳೆಯ ಭೂ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಬಹುದಾಗಿದೆ. ಹಳೆಯ ಭೂದಾಖಲೆಗಳನ್ನು ಪಡೆಯುವಲ್ಲಿ ಇರುವ ತೊಂದರೆ ಪರಿಹರಿಸುವ ಜತೆಗೆ ಹಳೆ ದಾಖಲೆಗಳ ಸಂರಕ್ಷಣೆ ಆಗಲಿದೆ ಎಂದು ಹೇಳಿದರು.ಇತ್ತೀಚಿನ ದಿನಗಳಲ್ಲಿ ಕಂದಾಯ ದಾಖಲೆಗಳನ್ನು ಕಳವು ಮಾಡುವ, ಮೂಲ ಸ್ವರೂಪ ಹಾಳು ಮಾಡುವ ದಾಖಲೆಗಳನ್ನು ತಿದ್ದುವ ಪ್ರಕರಣಗಳು ತಾಲೂಕು ಕಚೇರಿಗಳಲ್ಲಿ ಹೆಚ್ಚಾಗಿದೆ. ಬೆಂಗಳೂರು ಸುತ್ತಮುತ್ತ ಭೂಮಿ ಬೆಲೆ ಜಾಸ್ತಿಯಾದ ಮೇಲೆ ಈ ದಂಧೆ ಜಾಸ್ತಿಯಾಗಿದೆ. ಇದರಿಂದ ಪ್ರಾಮಾಣಿಕ ನಾಗರಿಕರಿಗೆ ಸಾಕಷ್ಟು ಅನನುಕೂಲವಾಗುತ್ತಿದೆ ಎಂದು ತಿಳಿಸಿದರು.
ಡಿಜಟಲೀಕರಣದಿಂದ ನೈಜ ಭೂದಾಖಲೆಗಳನ್ನು ತಿದ್ದುವ ಪ್ರಕರಣಗಳಿಗೆ ಕಡಿವಾಣ ಬೀಳಲಿದೆ. ಹಳೆಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಮೂಲ ಸ್ವರೂಪ ಹೇಗಿದೆಯೋ ಅದನ್ನು ಹಾಗೆಯೇ ಉಳಿಸಿಕೊಂಡು ಆಧುನಿಕ ತಂತ್ರಜ್ಞಾನ ಉಪಯೋಗಿಸಿಕೊಂಡು ಅವುಗಳನ್ನು ಗಣಕೀಕೃತಗೊಳಿಸಿ ಶೇಖರಿಸಲಾಗುತ್ತದೆ. ಇದರಿಂದ ರೈತರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.ಈ ಸಂದರ್ಭದಲ್ಲಿ ತಹಸೀಲ್ದಾರ್ ನರಸಿಂಹಮೂರ್ತಿ, ಉಪ ತಹಸೀಲ್ದಾರ್ ಲಕ್ಷ್ಮೀದೇವಮ್ಮ, ಶಿರಸ್ತೇದಾರರಾದ ಹರೀಶ್, ಸೋಮೇಶ್ ಇತರರಿದ್ದರು.
ಬಾಕ್ಸ್.............ಶಾಸಕರಿಂದ ನಗರ ಪ್ರದಕ್ಷಿಣೆ
ಶುಕ್ರವಾರ ಬೆಳ್ಳಂಬೆಳಗ್ಗೆ ಶಾಸಕ ಸಿ.ಪಿ.ಯೋಗೇಶ್ವರ್ ನಗರ ಪ್ರದೇಶದಲ್ಲಿ ಪ್ರದಕ್ಷಿಣೆ ಹಾಕಿ ನಗರದ ಕಸದ ಸಮಸ್ಯೆ, ಫುಟ್‌ಪಾತ್ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.ಶುಕ್ರವಾರ ಬೆಳಗ್ಗೆ ನಗರದ ಎಂ.ಜಿ.ರಸ್ತೆ, ಜೆ.ಸಿ.ರಸ್ತೆ ಸೇರಿದಂತೆ ೧೩ರಿಂದ ೧೬ನೇ ವಾರ್ಡ್‌ಗಳಲ್ಲಿ ಸಂಚರಿಸಿದ ಯೋಗೇಶ್ವರ್ ವಾರ್ಡ್ ವ್ಯಾಪ್ತಿಯಲ್ಲಿ ಇರುವ ಸಮಸ್ಯೆಗಳನ್ನು ಪರಿಶೀಲಿಸಿದರು.
ನಗರದ ಎಂ.ಜಿ.ರಸ್ತೆ, ಜೆ.ಸಿ.ರಸ್ತೆಯಲ್ಲಿ ಪರಿಶೀಲಿಸಿ, ಫುಟ್‌ಪಾತ್ ವ್ಯಾಪಾರದಿಂದ ಪಾದಚಾರಿಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಕರಬಲ ಮೈದಾನದಲ್ಲಿ ನಗರಸಭೆಗೆ ಸೇರಿದ ಸಾಕಷ್ಟು ಅಂಗಡಿಗಳು ಖಾಲಿ ಇದ್ದು, ಫುಟ್‌ಪಾತ್ ವ್ಯಾಪಾರಿಗಳನ್ನು ಅಲ್ಲಿಗೆ ಸ್ಥಳಾಂತರಿಸುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚಿಸಿದರು.ನಗರ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಕಸ ಹಾಕುತ್ತಿದ್ದು, ಕಸದ ಸಮಸ್ಯೆ ತೀವ್ರವಾಗಿದೆ. ತಾಜ್ಯ ವಿಲೇವಾರಿ ಸರಿಯಾಗಿ ಆಗದ ಪರಿಣಾಮ ಸಮಸ್ಯೆಯಾಗುತ್ತಿದೆ. ಈ ಸಮಸ್ಯೆಗೆ ಮುಕ್ತಿ ಕಲ್ಪಿಸುವ ನಿಟ್ಟಿನಲ್ಲಿ ವಂದಾರಗುಪ್ಪೆ ಬಳಿ ಗುರುತಿಸಿರುವ ಜಾಗದಲ್ಲಿ ಕಸ ವಿಲೇವಾರಿ ಘಟಕ ನಿರ್ಮಾಣ ಕಾಮಗಾರಿ ಆದಷ್ಟು ಬೇಗ ಕೈಗೊಳ್ಳಬೇಕಿದೆ ಎಂದು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಇದೇ ವೇಳೆ ನಗರದ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿ ಶಾಸಕರು ಉಪಾಹಾರ ಸೇವಿಸುವ ಮೂಲಕ ಆಹಾರದ ಗುಣಮಟ್ಟ ಪರೀಕ್ಷಿಸಿದರು. ಈ ವೇಳೆ ಪೌರಾಯುಕ್ತ ಮಹೇಂದ್ರ, ನಗರಸಭೆ ಅಧ್ಯಕ್ಷ ವಾಸೀಲ್ ಅಲಿಖಾನ್, ಉಪಾಧ್ಯಕ್ಷ ಶ್ರೀನಿವಾಸಮೂರ್ತಿ, ನಗರಸಭೆ ಸದಸ್ಯರು, ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುನೀಲ್ ಇತರರಿದ್ದರು.
ಪೊಟೋ೧೦ಸಿಪಿಟಿ೧: ಚನ್ನಪಟ್ಟಣ ತಾಲೂಕು ಕಚೇರಿಯಲ್ಲಿ ಭೂ ಸುರಕ್ಷಾ ಯೋಜನೆಯಡಿ ಕಂದಾಯ ದಾಖಲೆಗಳನ್ನು ಗಣಕೀಕರಣಗೊಳಿಸುವ ಕಾರ್ಯಕ್ರಮಕ್ಕೆ ಶಾಸಕ ಯೋಗೇಶ್ವರ್ ಚಾಲನೆ ನೀಡಿದರು.ಪೊಟೋ೧೦ಸಿಪಿಟಿ೨:
ಚನ್ನಪಟ್ಟಣ ನಗರ ಪ್ರದಕ್ಷಿಣೆ ಹಾಕಿ ಶಾಸಕ ಸಿ.ಪಿ.ಯೋಗೇಶ್ವರ್ ಸಮಸ್ಯೆಗಳ ಮಾಹಿತಿ ಪಡೆದರು. ಪರಿಶೀಲನೆ ನಡೆಸಿದರು.