ಘನತೆ-ಗೌರವ ಉಳಿಸಿಕೊಂಡ ಪತ್ರಿಕೆ: ಪಾಟೀಲ

| Published : Jul 31 2025, 12:48 AM IST

ಸಾರಾಂಶ

ಪತ್ರಕರ್ತರು ವಾಸ್ತವ್ಯ ಸಂಗತಿ ಮಾತ್ರ ಬರೆಯಬೇಕು. ವರದಿ ಮೂಲಕ ರಾಜಕಾರಣಿ ಹಾಗೂ ಅಧಿಕಾರಿಗಳನ್ನು ಎಚ್ಚರಿಸಿ ಸಮಾಜದ ಅಭಿವೃದ್ಧಿಯಲ್ಲಿ ಮುಖ್ಯಪಾತ್ರ ವಹಿಸಬೇಕು.

ಕುಷ್ಟಗಿ:

ಡಿಜಿಟಲ್ ಮಾಧ್ಯಮದೊಂದಿಗೆ ಸಾಮಾಜಿಕ ಜಾಲತಾಣವೂ ಎಷ್ಟೇ ಮುಂದುವರಿದಿದ್ದರೂ ಸಹಿತ ಮುದ್ರಣ ಮಾಧ್ಯಮ ಘನತೆ ಮತ್ತು ಗೌರವ ಉಳಿಸಿಕೊಂಡಿದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.

ಪಟ್ಟಣದಲ್ಲಿ ಬುಧವಾರ ಕುಷ್ಟಗಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪತ್ರಕರ್ತರು ವಾಸ್ತವ್ಯ ಸಂಗತಿ ಮಾತ್ರ ಬರೆಯಬೇಕು. ವರದಿ ಮೂಲಕ ರಾಜಕಾರಣಿ ಹಾಗೂ ಅಧಿಕಾರಿಗಳನ್ನು ಎಚ್ಚರಿಸಿ ಸಮಾಜದ ಅಭಿವೃದ್ಧಿಯಲ್ಲಿ ಮುಖ್ಯಪಾತ್ರ ವಹಿಸಬೇಕೆಂದರು. ಮುಂಬರುವ ದಿನಗಳಲ್ಲಿ ಪತ್ರಕರ್ತರಿಗೆ ನಿವೇಶನ ಕೊಡಿಸಲಾಗುವುದು ಎಂದು ಭರವಸೆ ನೀಡಿದ ಶಾಸಕರು, ಸಂಘದ ಕ್ಷೇಮಾಭಿವೃದ್ಧಿ ನಿಧಿಗೆ ₹ 50000 ನೀಡಿದರು.

ಮಾಧ್ಯಮ ಅಕಾಡೆಮಿ ಸದಸ್ಯ ಕೆ. ನಿಂಗಜ್ಜ ಮಾತನಾಡಿ, ಜಾಗತಿಕರಣದ ಪರಿಣಾಮ ಪತ್ರಿಕೋದ್ಯಮ ಡಿಜಿಟಲ್ ಆಗುತ್ತಿರುವ ಜತೆಗೆ ಸೋಷಿಯಲ್ ಮೀಡಿಯಾ ಕೂಡ ವೇಗವಾಗಿದೆ. ಇದರೊಂದಿಗೆ ಪೈಪೋಟಿ ನಡೆಸಬೇಕಾಗಿದೆ ಎಂದರು.

ಪತ್ರಕರ್ತರಿಗೆ ಸರ್ಕಾರ ಘೋಷಿಸಿರುವ ಬಸ್‌ಪಾಸ್‌ ವಿತರಣೆಯಲ್ಲಿ ಕೆಲ ಬದಲಾವಣೆ ಆಗಬೇಕಿದೆ. ಆರೋಗ್ಯ ಸಂಜೀವಿನಿ ಯೋಜನೆ ಇನ್ನಷ್ಟು ಪರಿಣಾಮಕಾರಿಯಾಗಿ ಆಗಬೇಕಿದ್ದು ನಿವೇಶನವನ್ನೂ ನೀಡಬೇಕಿದೆ. ಸ್ಥಗಿತಗೊಂಡಿರುವ ಮಾಧ್ಯಮ ಕಿಟ್‌ ಮರುಜಾರಿಗೊಳಿಸಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು.

ತುಂಗಭದ್ರಾ ಕಾಡಾ ನಿಗಮದ ಅಧ್ಯಕ್ಷ ಹಸನಸಾಬ್‌ ದೋಟಿಹಾಳ ಮಾತನಾಡಿ, ಪತ್ರಿಕೆಗಿಂತ ದೊಡ್ಡವರು ಯಾರು ಇಲ್ಲ. ಹೀಗಾಗಿ ಧೈರ್ಯ, ಬದ್ಧತೆಯಿಂದ ವರದಿಯನ್ನು ಬಿತ್ತಿರಿಸುವ ಮೂಲಕ ಜನಪ್ರತಿನಿಧಿಗಳು, ಅಧಿಕಾರಿಗಳ ಕಣ್ಣು ತೆರೆಸಬೇಕೆಂದರು.

ಬಿಜೆಪಿ ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ ಮಾತನಾಡಿ, ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಕಲ್ಪಿಸಿರುವ ಸರ್ಕಾರ ಪತ್ರಕರ್ತರಿಗೆ ಇಲ್ಲಸಲ್ಲದ ನಿಯಮಗಳನ್ನು ವಿಧಿಸಿದೆ. ಇದನ್ನು ಬಿಟ್ಟು ಎಲ್ಲ ಪತ್ರಕರ್ತರಿಗೂ ಉಚಿತ ಪ್ರಯಾಣಕ್ಕೆ ಅವಕಾಶ ಕಲ್ಪಿಸಬೇಕೆಂದು ಒತ್ತಾಯಿಸಿದರು.

ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಹನಮಂತ ಹಳ್ಳಿಕೇರಿ ಮಾತನಾಡಿ, ಕೊಪ್ಪಳ ತಾಲೂಕಿನಲ್ಲಿ ಶಾಸಕ ರಾಘವೇಂದ್ರ ಹಿಟ್ನಾಳ ಅವರು ಪತ್ರಕರ್ತರಿಗೆ ಉಚಿತ ನಿವೇಶನ ನೀಡಿದ್ದು ಅದರಂತೆ ಕುಷ್ಟಗಿ ಶಾಸಕರು ನಿವೇಶನ ದೊರಕಿಸಿಕೊಡಬೇಕೆಂದು ಮನವಿ ಮಾಡಿದರು.

ಕರಿಬಸವ ಶಿವಾಚಾರ್ಯರು, ಗುರುಶಾಂತವೀರ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಈ ವೇಳೆ ಪ್ರಭಾಕರ ಚಿಣಿ, ದೇವೇಂದ್ರಪ್ಪ ಬಳೂಟಗಿ, ನಾಗರಾಜ ವೈ, ವೆಂಕಟೇಶ ಕುಲಕರ್ಣಿ, ಕೆ. ಮಹೇಶ, ಶಾರದಾ ಕಟ್ಟಿಮನಿ, ಸಂಗನಗೌಡ ಪಾಟೀಲ್, ಆರ್‌.ಕೆ. ದೇಸಾಯಿ, ಮಹೇಶ ಕಾಳಗಿ, ನಜೀರಸಾಬ್‌ ಮೂಲಿಮನಿ, ಶ್ರೀನಿವಾಸ ಜಹಗೀರದಾರ, ರವೀಂದ್ರ ಬಾಕಳೆ, ಸಂಗಮೇಶ ಶಿಂಗಾಡಿ, ಪವಾಡೆಪ್ಪ ಚೌಡ್ಕಿ, ಹನಮೇಶ ಗುಮಗೇರಿ, ಲೆಂಕಪ್ಪ ವಾಲಿಕಾರ ಸೇರಿದಂತೆ ಅನೇಕರು ಇದ್ದರು. ಇದೇ ವೇಳೆ ವಿವಿಧ ಕ್ಷೇತ್ರದ ಸಾಧನೆಗೈದ ಸಾಧಕರು ಸನ್ಮಾನ ಹಾಗೂ ಪತ್ರಿಕಾ ವಿತರಕರಿಗೆ ಸನ್ಮಾನಿಸಲಾಯಿತು.