ಶಾಲಾ ಆವರಣದಲ್ಲಿ ಸ್ವಚ್ಛತೆ ಹಾಗೂ ನಿರ್ವಹಣೆ ಸಮರ್ಪಕವಾಗಿ ನಡೆಯದಿದ್ದರೆ ವಿದ್ಯಾರ್ಥಿಗಳ ಆರೋಗ್ಯ ಮತ್ತು ಸುರಕ್ಷತೆ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ. ಹೀಗಾಗಿ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಶಾಲೆ ಕಟ್ಟಡ, ಶೌಚಾಲಯ, ಕಾಂಪೌಂಡ್ ಹಾಗೂ ಆವರಣದ ಸ್ಥಿತಿಗತಿಗಳನ್ನು ಪರಿಶೀಲಿಸಿ ಅಗತ್ಯ ದುರಸ್ತಿ ಹಾಗೂ ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕನ್ನಡಪ್ರಭವಾರ್ತೆ, ಬೇಲೂರು

ತಾಲೂಕಿನ ಹೆಬ್ಬಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶೌಚಾಲಯ ಕಟ್ಟಡದ ಮೇಲೆ ಹಾಗೂ ಸುತ್ತಮುತ್ತ ಗಿಡಗಂಟಿಗಳು ಬೆಳೆದು ಕಟ್ಟಡ ಜೀರ್ಣಾವಸ್ಥೆಯಲ್ಲಿದ್ದು ಶಿಕ್ಷಣ ಇಲಾಖೆ, ಶಾಲಾ ಅಭಿವೃದ್ಧಿ ಸಮಿತಿ ಬಗ್ಗೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಒಂದು ಶತಮಾನಕ್ಕೂ ಅಧಿಕ ಇತಿಹಾಸ ಹೊಂದಿರುವ ಈ ಶಾಲೆಯಲ್ಲಿ ಹೆಬ್ಬಾಳು ಹಾಗೂ ಸುತ್ತಮುತ್ತಲಿನ ಸಾವಿರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸಿರುವುದು ಶಾಲೆ ಶೈಕ್ಷಣಿಕ ಪರಂಪರೆಗೆ ಸಾಕ್ಷಿಯಾಗಿದೆ. ಆದರೆ ಮೂಲಸೌಕರ್ಯಗಳ ನಿರ್ವಹಣೆ ಕೊರತೆಯಿಂದ ದುಸ್ಥಿತಿಗೆ ತಲುಪುತ್ತಿರುವುದು ಪೋಷಕರು ಹಾಗೂ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ. ಶಾಲೆ ಶೌಚಾಲಯ ಕಟ್ಟಡದ ಮೇಲ್ಭಾಗದಲ್ಲಿ ಗಿಡಗಂಟೆಗಳು ಬೆಳೆದು ಮರವಾಗುತ್ತಿವೆ. ಶೌಚಾಲಯದ ಹಿಂಭಾಗದಲ್ಲಿಯೂ ಸಾಕಷ್ಟು ಗಿಡಗಂಟೆಗಳು ಬೆಳೆದು ಕಾಂಪೌಂಡ್ ಹಾಗೂ ಕಟ್ಟಡದ ಸುತ್ತಮುತ್ತಲಿನ ಪ್ರದೇಶವನ್ನು ಆವರಿಸಿಕೊಂಡಿವೆ. ಗಿಡಗಳ ಬೇರುಗಳು ಕಟ್ಟಡದ ಗೋಡೆ ಹಾಗೂ ಮೇಲ್ಛಾವಣಿಗೆ ಹಾನಿ ಉಂಟುಮಾಡುವ ಸಾಧ್ಯತೆ ಇದ್ದು, ಕಟ್ಟಡದ ಸುರಕ್ಷತೆ ಬಗ್ಗೆಯೂ ಪ್ರಶ್ನೆ ಎದುರಾಗಿದೆ.