ಸಾರಾಂಶ
₹3.5 ಕೋಟಿ ವೆಚ್ಚದಲ್ಲಿ ಸುಸಜ್ಜಿನ ಕ್ರಿಕೆಟ್ ಮೈದಾನ
ಕನ್ನಡಪ್ರಭ ವಾರ್ತೆ ದಾವಣಗೆರೆಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಿಂದ ದಾವಣಗೆರೆಯಲ್ಲಿ ಸುಮಾರು 2 ಕೋಟಿ ರು. ವೆಚ್ಚದಲ್ಲಿ ಟರ್ಫ್ ಅಂಕಣ ಹಾಗೂ ಪೆವಿಲಿಯನ್ ನಿರ್ಮಾಣ ಕಾರ್ಯಕ್ಕೆ ನಗರದ ಜೆ.ಎಚ್.ಪಟೇಲ್ ಬಡಾವಣೆಯ ಮೈದಾನದಲ್ಲಿ ದೂಡಾ ಅಧ್ಯಕ್ಷ, ದಾವಣಗೆರೆ ಕ್ರಿಕೆಟ್ ಕ್ಲಬ್ ಕಾರ್ಯದರ್ಶಿ ದಿನೇಶ ಕೆ.ಶೆಟ್ಟಿ ಶುಕ್ರವಾರ ಭೂಮಿಪೂಜೆ ನೆರವೇರಿಸಿದರು.
ನಗರದ ಜೆ.ಎಚ್.ಪಟೇಲ್ ಬಡಾವಣೆಯ ಕೆಎಸ್‌ಸಿಎ ಕ್ರಿಕೆಟ್ ಮೈದಾನದಲ್ಲಿ ಕ್ರಿಕೆಟ್ ಸಂಸ್ಥೆ ರೂಪಿಸಿರುವ ಸುಮಾರು 3.5 ಕೋಟಿ ವೆಚ್ಚದ ಕಾಮಗಾರಿ ಪೈಕಿ ಸುಮಾರು 2 ಕೋಟಿ ರು. ವೆಚ್ಚದ ಟರ್ಫ್ ಅಂಕಣ ಹಾಗೂ ಪೆವಿಲಿಯನ್ ನಿರ್ಮಾಣಕ್ಕೆ ಚಾಲನೆ ನೀಡಿದ ದಿನೇಶ ಶೆಟ್ಟಿ ಎಲ್ಲರಿಗೂ ಶುಭ ಹಾರೈಸಿದರು.ಇದೇ ವೇಳೆ ಮಾತನಾಡಿ, ರಾಜ್ಯ ಕ್ರಿಕೆಟ್ ಸಂಸ್ಥೆಯಿಂದ ಇಲ್ಲೊಂದು ಸುಸಜ್ಜಿತ ಕ್ರಿಕೆಟ್ ಮೈದಾನ ನಿರ್ಮಿಸಲು ಮುಂದಾಗಿದ್ದು, ದೂಡಾದಿಂದ ನೀಡಿದ್ದ ಜಾಗದಲ್ಲಿ ಅದು ಈಗ ಸಾಕಾರಗೊಳ್ಳುತ್ತಿದೆ ಎಂದರು.
ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಹಿರಿಯ ಕ್ರೀಡಾಪಟುಗಳೂ ಆದ ಜಿಲ್ಲಾ ಪರಿಷತ್ ಮಾಜಿ ಅಧ್ಯಕ್ಷ ಎಸ್.ಎಸ್.ಬಕ್ಕೇಶ, ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಹಾಗೂ ಸಂಸದೆ ಡಾಪ್ರಭಾ ಮಲ್ಲಿಕಾರ್ಜುನ ಹಿಂದಿನಿಂದಲೂ ಕ್ರೀಡೆಗೆ ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ಇದೀಗ ಕೆಎಸ್‌ಸಿಎ ಇಲ್ಲಿ ಅತ್ಯುತ್ತಮ ಮಟ್ಟದ ಕ್ರಿಕೆಟ್ ಅಂಕಣ, ಪೆವಿಲಿಯನ್, ಡಾರ್ಮೆಂಟರಿ, ಸ್ವಿಮ್ಮಿಂಗ್ಫೂಲ್ ಸೇರಿದಂತೆ ಸಾಕಷ್ಟು ಅತ್ಯಾಧುನಿಕ ಸೌಲಭ್ಯ ಒಳಗೊಂಡ ಮೈದಾನ ಇಲ್ಲಿ ಮುಂದಿನ ದಿನಗಳಲ್ಲಿ ತಲೆ ಎತ್ತಲಿದೆ ಎಂದು ತಿಳಿಸಿದರು.ಸಂಸ್ಥೆಯ ತುಮಕೂರು ವಲಯದ ಸಂಚಾಲಕ, ಹಿರಿಯ ಕ್ರಿಕೆಟ್ ಪಟು ಕೆ.ಶಶಿಧರ್, ದೂಡಾ ನಿವೃತ್ತ ಸಹಾಯಕ ಕಾರ್ಯಪಾಲಕ ಅಭಿಯಂತರ ಕೆ.ಎಚ್.ಶ್ರೀಕರ್, ಹಿರಿಯ ಕ್ರಿಕೆಟ್ ಪಟುಗಳಾದ ಬಾಲಕೃಷ್ಣ, ಎಲ್.ಎಂ.ಪ್ರಕಾಶ, ರೊಳ್ಳಿ ಮಂಜುನಾಥ, ಪ್ರಜಾವಾಣಿ ಸ್ಥಾನಿಕ ಸಂಪಾದಕ ಸಿದ್ದಯ್ಯ ಹಿರೇಮಠ, ಶಾಮನೂರು ತಿಪ್ಪಣ್ಣ, ಹರಿಹರದ ಎಚ್.ಎಸ್.ರಾಘವೇಂದ್ರ ಉಪಾಧ್ಯ, ಕೆ.ಎನ್.ಗೋಪಾಲಕೃಷ್ಣ, ಬಾಲಕೃಷ್ಣ, ತಿಮ್ಮೇಶ, ತೇಜು, ಅರುಣ, ಶಾಮನೂರು ವೇದಮೂರ್ತಿ ಇತರರು ಇದ್ದರು.