ಮಾಮ್ಕೋಸ್‌ ಷೇರುದಾರರ ಸಭೆ ಕುರಿತ ದಿನೇಶ್‌ ಆರೋಪ ಸತ್ಯಕ್ಕೆ ದೂರ

| Published : Jan 09 2024, 02:00 AM IST

ಮಾಮ್ಕೋಸ್‌ ಷೇರುದಾರರ ಸಭೆ ಕುರಿತ ದಿನೇಶ್‌ ಆರೋಪ ಸತ್ಯಕ್ಕೆ ದೂರ
Share this Article
  • FB
  • TW
  • Linkdin
  • Email

ಸಾರಾಂಶ

ಮಾಮ್ಕೋಸ್‌ ಷೇರುದಾರರ ಸಭೆ ಕರೆಯಲು ಕಾನೂನಿನಲ್ಲಿ ಅವಕಾಶ ಇಲ್ಲ ಎಂಬುದು ಸೇರಿದಂತೆ ಮಾಮ್ಕೋಸ್‌ ಕೋಸ್ ಆಡಳಿತ ಮಂಡಳಿ ವಿರುದ್ಧ ಸದಸ್ಯ ದಿನೇಶ್‌ ಕಡ್ತೂರು ಮಾಡಿರುವ ಹಲವು ಆರೋಪಗಳು ಸತ್ಯಕ್ಕೆ ದೂರವಾಗಿವೆ. ಸಂಘದ ಬೈಲಾ ತಿದ್ದುಪಡಿಯನ್ನು ಸರ್ಕಾರ ತಿರಸ್ಕರಿಸುವ ಆದೇಶದ ಪ್ರತಿಯನ್ನು ಪತ್ರಿಕಾಗೋಷ್ಠಿಯಲ್ಲಿ ಹಂಚಿದ್ದಾರೆ. ಮಾಮ್ಕೋಸ್‌ಗೆ ಸೇರಬೇಕಾದ ಈ ದಾಖಲೆ ಸಂಸ್ಥೆಗೆ ದೊರಕದೇ ದಿನೇಶ್‌ ಕಡ್ತೂರ್‌ಗೆ ಹೇಗೆ ಸಿಕ್ಕಿದೆ ಎಂಬುದು ಷೇರುದಾರರ ಆತಂಕಕ್ಕೆ ಕಾರಣವಾಗಿದೆ. ಈ ಸಂಬಂಧ ಸಂಸ್ಥೆ ಕಾನೂನು ಹೋರಾಟದ ಕುರಿತು ಕೂಡ ಯೋಚಿಸುತ್ತಿದೆ ಎಂದು ಮಾಮ್ಕೋಸ್‌ ಉಪಾಧ್ಯಕ್ಷ ಎಚ್‌.ಎಸ್‌. ಮಹೇಶ್ ಹುಲ್ಕುಳ್ಳಿ ಶಿವಮೊಗ್ಗದಲ್ಲಿ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಮಾಮ್ಕೋಸ್‌ ಷೇರುದಾರರ ಸಭೆ ಕರೆಯಲು ಕಾನೂನಿನಲ್ಲಿ ಅವಕಾಶ ಇಲ್ಲ ಎಂಬುದು ಸೇರಿದಂತೆ ಮಾಮ್ಕೋಸ್‌ ಕೋಸ್ ಆಡಳಿತ ಮಂಡಳಿ ವಿರುದ್ಧ ಸದಸ್ಯ ದಿನೇಶ್‌ ಕಡ್ತೂರು ಮಾಡಿರುವ ಹಲವು ಆರೋಪಗಳು ಸತ್ಯಕ್ಕೆ ದೂರವಾಗಿವೆ ಎಂದು ಮಾಮ್ಕೋಸ್‌ ಉಪಾಧ್ಯಕ್ಷ ಎಚ್‌.ಎಸ್‌. ಮಹೇಶ್ ಹುಲ್ಕುಳ್ಳಿ ಸ್ಪಷ್ಟನೆ ನೀಡಿದರು. ನಗರದ ಪ್ರೆಸ್‌ ಟ್ರಸ್ಟ್‌ನಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ದಿನೇಶ್‌ ಕಡ್ತೂರು ಅವರು ತೀರ್ಥಹಳ್ಳಿ ಕಾಂಗ್ರೆಸ್‌ ಕಚೇರಿಯಲ್ಲಿ ಪಕ್ಷದ ಬ್ಯಾನರ್‌ ಅಡಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಮಾಮ್ಕೋಸ್‌ ಸಂಸ್ಥೆ ಷೇರುದಾರರ ಸಭೆ ಕರೆಯಲು ಕಾನೂನಿನಲ್ಲಿ ಅವಕಾಶ ಇಲ್ಲ. ಸಂಸ್ಥೆಗೆ ಇದು ಆರ್ಥಿಕ ಹೊಡೆತ. ಇದು ಸಹಕಾರ ಕಾಯಿದೆಗೆ ವಿರುದ್ಧ ಎಂದು ಸಚಿವ ಮಧು ಬಂಗಾರಪ್ಪ, ಶಾಸಕರಾದ ರಾಜೇಗೌಡ, ಶ್ರೀನಿವಾಸ್‌, ತಮ್ಮಯ್ಯ, ಬೇಳೂರು ಗೋಪಾಲಕೃಷ್ಣ, ನಯನ ಮೋಟಮ್ಮ ಅವರಿಗೆ ತಪ್ಪು ಮಾಹಿತಿ ನೀಡಿದ್ದಾಎ. ಅವರ ಮೂಲಕ ಸಹಕಾರಿ ಸಚಿವರಿಗೆ ದೂರು ಕೊಡಿಸಿದ್ದಾರೆ ಎಂದು ದೂರಿದರು.

ಸಹಕಾರ ಸಂಘಗಳ ಕಾಯಿದೆಯಲ್ಲಿ ವಾರ್ಷಿಕ ಮಹಾಸಭೆ ಮಾತ್ರ ಕರೆಯಲು ಅವಕಾಶ ಇದೆ. ಆದರೆ, ಷೇರುದಾರರ ಸಭೆ ಕರೆಯಲು ಅವಕಾಶ ಇಲ್ಲ. 2005ರಿಂದ ಇಲ್ಲಿಯವರೆಗೆ ನಡೆಸಿರುವ ಷೇರುದಾರರ ಸಮಾಲೋಚನಾ ಸಭೆಗೆ ₹3.6 ಕೋಟಿಗೂ ಹೆಚ್ಚು ಖರ್ಚಾಗಿದ್ದು, ಇದನ್ನು ಆಡಳಿತ ಮಂಡಿಳಿ ಭರಿಸಬೇಕು ಎಂದು ಕಡ್ತೂರು ದಿನೇಶ್‌ ಪತ್ನಿಕಾಗೋಷ್ಟಿಯಲ್ಲಿ ಹೇಳಿದ್ದಾರೆ. ಆದರೆ, 2006 ರಿಂದ ಷೇರುದಾರರ ಸಮಾಲೋಚನಾ ಸಭೆ ನಡೆಸುತ್ತಿದ್ದು, ಇಲ್ಲಿಯವರೆಗೆ ಅಂದಾಜು ₹80 ಲಕ್ಷ ಮಾತ್ರ ಖರ್ಚಾಗಿದೆ. ವಾರ್ಷಿಕ ₹5.29 ಲಕ್ಷ ಖರ್ಚಾಗಿದೆ. ಹೀಗಾಗಿ ದಿನೇಶ್‌ ಕಡ್ತೂರ್‌ ಆರೋಪ ಸತ್ಯಕ್ಕೆ ದೂರವಾಗಿದೆ. ₹3.60 ಕೋಟಿ ಖರ್ಚಾಗಿರುವ ಬಗ್ಗೆ ಅವರ ಬಳಿ ಅಂಕಿ-ಅಂಶಗಳು ಇದ್ದರೆ ಹಾಜರುಪಡಿಸಬೇಕು ಎಂದು ಒತ್ತಾಯಿಸಿದರು.

ಷೇರುದಾರರ ಸಭೆಯಲ್ಲಿ ಅಡಕೆ ಬೆಳೆಗಾರರ ಸಮಸ್ಯೆ ಮತ್ತು ಅವುಗಳಿಗೆ ಪರಿಹಾರ ಕುರಿತು ಸಂಸ್ಥೆ ಕೈಗೊಂಡ ಕ್ರಮಗಳು, ಜೊತೆಗೆ ಸಭೆಗೆ ವಿಜ್ಞಾನಿಗಳನ್ನು ಕರೆದೊಯ್ದು ಬೆಳೆಗಾರರಿಗೆ ಸೂಕ್ತ ಮಾಹಿತಿ ನೀಡುವುದು, ಮಾಮ್ಕೋಸ್‌ ತನ್ನ ಸದಸ್ಯರಿಗೆ ನೀಡುವ ಇತರೆ ಸೌಲಭ್ಯಗಳ ಕುರಿತು ಅರಿವು ಮೂಡಿಸುವುದು ಮುಂತಾದ ಕ್ರಮಗಳನ್ನು ಮಾಡುತ್ತಿದೆ. ಹೀಗೆ ಷೇರುದಾರರ ಸಭೆಗಳನ್ನು ನಡೆಸಿ ಸದಸ್ಯರ ಅನಿಸಿಕೆ, ಅಭಿಪ್ರಾಯಗಳನ್ನು ಕ್ರೋಢೀಕರಿಸಿ ಆಡಳಿತ ಮಂಡಳಿ ಮುಂದೆ ಮಂಡಿಸಿ ಸೂಕ್ತ ತೀರ್ಮಾನ ಕೈಗೊಳ್ಳುವ ಸಂಬಂಧ ಬೈಲಾಕ್ಕೆ ಈ ತಿದ್ದುಪಡಿಯನ್ನು ತರಲು ನಿರ್ಧರಿಸಲಾಗಿತ್ತು. ಷೇರುದಾರರ ಸಭೆ ಕರೆದು ಸದಸ್ಯರಲ್ಲಿ ಅರಿವು ಮೂಡಿಸುವ ಪ್ರಯತ್ನದ ಬಳಿಕ ಸಂಸ್ಥೆಯಲ್ಲಿ ಸದಸ್ಯರ ಸಂಖ್ಯೆ ಮತ್ತು ಮಹಾಸಭೆಯಲ್ಲಿ ಪಾಲ್ಗೊಳ್ಳುವ ಸದಸ್ಯರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಸಂಸ್ಥೆ ಬೆಳವಣಿಗೆ ಕೂಡ ದೊಡ್ಡ ಪ್ರಮಾಣದಲ್ಲಿ ಆಗಿದೆ ಎಂದು ಮಹೇಶ್‌ ಹೇಳಿದರು.

ಷೇರುದಾರರ ಸಭೆ ಕುರಿತು ಆಕ್ಷೇಪ ವ್ಯಕ್ತಪಡಿಸಿ ಪತ್ರಿಕಾಗೋಷ್ಟಿ ನಡೆಸಿದ ಕಡ್ತೂರು ದಿನೇಶ್‌ ಜೊತೆಗೆ ಇದ್ದ ಯು.ಎಸ್‌. ಶಿವಪ್ಪ ಈ ಹಿಂದೆ ಮಾಮ್ಕೋಸ್‌ ಉಪಾಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು. ಜೊತೆಗೆ ಅವರೇ ಸ್ವತಃ 2008ರಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಷೇರುದಾರರ ಸಭೆ ನಡೆಸುವಂತೆ ಒತ್ತಾಯಿಸಿದ್ದರು. ಈಗ ವಿರೋಧಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಕಾನೂನು ಹೋರಾಟ:

ಬೈಲಾಕ್ಕೆ ತಿದ್ದುಪಡಿ ತರುವ ಪ್ರಸ್ತಾವನೆ ಸಾಮಾನ್ಯ ಸಭೆಯಲ್ಲಿ ಕೈಗೊಂಡು ಸಹಕಾರ ಇಲಾಖೆಗೆ ಕಳುಹಿಸಲಾಗಿದೆ. ಆದರೆ ಇದುವರೆಗೆ ಬೈಲಾ ಒಪ್ಪಿರುವ ಅಥವಾ ತಿರಸ್ಕರಿಸಿರುವ ಕುರಿತು ಸಂಸ್ಥೆಗೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಆದರೆ, ದಿನೇಶ್‌ ಕಡ್ತೂರ್‌ ಸಂಘದ ಬೈಲಾ ತಿದ್ದುಪಡಿಯನ್ನು ಸರ್ಕಾರ ತಿರಸ್ಕರಿಸುವ ಆದೇಶದ ಪ್ರತಿಯನ್ನು ಪತ್ರಿಕಾಗೋಷ್ಠಿಯಲ್ಲಿ ಹಂಚಿದ್ದಾರೆ. ಮಾಮ್ಕೋಸ್‌ಗೆ ಸೇರಬೇಕಾದ ಈ ದಾಖಲೆ ಸಂಸ್ಥೆಗೆ ದೊರಕದೇ ದಿನೇಶ್‌ ಕಡ್ತೂರ್‌ಗೆ ಹೇಗೆ ಸಿಕ್ಕಿದೆ ಎಂಬುದು ಷೇರುದಾರರ ಆತಂಕಕ್ಕೆ ಕಾರಣವಾಗಿದೆ. ಸರ್ಕಾರಿ ದಾಖಲೆ ಹೀಗೆ ಯಾರ್ಯಾರ ಕೈಗೆ ಸಿಗುವ ಕುರಿತು ನಾವು ಕಾನೂನು ಹೋರಾಟದ ಕುರಿತು ಕೂಡ ಯೋಚಿಸುತ್ತಿದ್ದೇವೆ ಎಂದರು.

₹1227 ಕೋಟಿ ವ್ಯವಹಾರ:

ಅಲ್ಲದೇ, ಮಾಮ್ಕೋಸ್‌ ಸಂಸ್ಥೆಯಲ್ಲಿ ₹3ರಿಂದ ₹4 ಸಾವಿರ ಕೋಟಿಗೂ ಹೆಚ್ಚಿನ ವಹಿವಾಟು ನಡೆಸಿದರೂ ಕೇವಲ ₹4 ಕೋಟಿ ಲಾಭ ಮಾತ್ರ ತೋರಿಸಿದ್ದಾರೆ ಎಂದು ಹೇಳಿದ್ದಾರೆ. ಆದರೆ, ಮಾಮ್ಕೋಸ್‌ ಒಟ್ಟು ವ್ಯವಹಾರ 2022-23ನೇ ಸಾಲಿನಲ್ಲಿ ₹1227 ಕೋಟಿ ಇದ್ದು, ಹಿಂದಿನ ಸಾಲುಗಳಲ್ಲಿ ಇದಕ್ಕಿಂತ ಕಡಿಮೆ ಇದೆ. ಈ ರೀತಿ ಮಾಮ್ಕೋಸ್‌ ಆಡಳಿತ ಮಂಡಳಿ ವಿರುದ್ಧ ಸುಳ್ಳು ಆರೋಪ ಮಾಡುತ್ತಿರುವ ದಿನೇಶ್‌ ಕಡ್ತೂರ್‌ ಅವರ ವಿರುದ್ಧ ಕಾನೂನು ಸಮರ ನಡೆಸಲು ತೀರ್ಮಾನಿಸಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ನಿಕಟಪೂರ್ವ ಉಪಾಧ್ಯಕ್ಷ ಸುಬ್ರಹ್ಮಣ್ಯ ಯಡಗೆರೆ, ನಿರ್ದೇಶಕರಾದ ಸಿ.ಬಿ. ಈಶ್ವರ್‌, ಸುರೇಶ್‌ಚಂದ್ರ, ಕೆ.ವಿ ಕೃಷ್ಣಮೂರ್ತಿ, ಕೆ.ರತ್ನಾಕರ ಬಿಳುಗಿನಮನೆ, ದೇವಾನಂದ, ವಿರೂಪಾಕ್ಷಪ್ಪ, ಬಡಿಯಣ್ಣ, ಬಿ.ಸಿ. ನರೇಂದ್ರ, ದಿನೇಶ್‌ ಬಿದರಹಳ್ಳಿ, ಕೀರ್ತಿ, ಎಚ್‌.ಟಿ. ಸುಬ್ರಹ್ಮಣ್ಯ, ವಿಜಯಲಕ್ಷ್ಮೀ, ಜಯಶ್ರೀ, ಭೀಮರಾವ್, ಶ್ರೀಧರಾಪುರ ತಿಮ್ಮಪ್ಪ ಮತ್ತಿತರರು ಇದ್ದರು.

- - -

ಕೋಟ್‌ ಮಾಮ್‌ ಕೋಸ್‌ ಯಾವುದೇ ರಾಜಕೀಯ ಪಕ್ಷದ ಪರವಾಗಿ ಕೆಲಸ ಮಾಡಿಲ್ಲ. ಆಡಳಿತ ಮಂಡಳಿಯಲ್ಲಿ ಯಾವುದೇ ರಾಜಕೀಯ ವ್ಯಕ್ತಿಗಳು ಇಲ್ಲ. ಆದರೆ, ದಿನೇಶ್‌ ಕಡ್ತೂರ್‌ ಕಾಂಗ್ರೆಸ್‌ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಮಾಡಿ, ಮಾಮ್‌ ಕೋಸ್‌ ಆಡಳಿತ ಮಂಡಳಿಯವರು ಇದುವರೆಗೆ ಪಕ್ಷವೊಂದರ ಪರ ಕೆಲಸ ಮಾಡಿದ್ದಾರೆ. ಮುಂಬರುವ ಲೋಕಸಭಾ ಚುನಾವಣೆಗೂ ಈ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಇಂತಹ ಆರೋಪ ಮಾಡುವ ಮುನ್ನ ಅವರು ಯೋಚಿಸಬೇಕು

- ಮಹೇಶ್‌ ಹುಲ್ಕುಳ್ಳಿ, ಉಪಾಧ್ಯಕ್ಷ, ಮಾಮ್ಕೋಸ್‌

- - --ಫೋಟೋ:

ಮಾಮ್ಕೋಸ್‌ ಉಪಾಧ್ಯಕ್ಷ ಮಹೇಶ್ ಹುಲ್ಕುಳ್ಳಿ ಸೋಮವಾರ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.