ಸಾರಾಂಶ
ಹುಬ್ಬಳ್ಳಿ: ಎಂಪಿ ಟಿಕೆಟ್ ಕೊಡಿಸುವಂತೆ ನಮಗೆ ದುಂಬಾಲು ಬಿದ್ದಿದ್ದ ದಿಂಗಾಲೇಶ್ವ ಶ್ರೀಗಳು ಇಂದು ನನ್ನ ಬಗ್ಗೆ ದಿನಕ್ಕೊಂದು ಹೇಳಿಕೊಂಡು ಓಡಾಡುತ್ತಾರೆ ಎಂದು ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಕಿಡಿಕಾರಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿಷಯ ಪ್ರಸ್ತಾಪಿಸಿದ ಅವರು, ದಿಂಗಾಲೇಶ್ವರ ಶ್ರೀಗಳು ರಾಜಕಾರಣಿಯಾಗಲು ಹೊರಟವರು. ಅವರ ಹೇಳಿಕೆಗೆ ಮಹತ್ವ ಕೊಡಬೇಡಿ. ನಮಗೆ ಹೇಳಲು ಅವರು ಯಾರು? ಎಂದು ಪ್ರಶ್ನಿಸಿದರು.ಸೆ.17 ಧರ್ಮ ನಿರ್ಧಾರ: ರಾಜ್ಯ ಸರ್ಕಾರ ಕೈಗೊಳ್ಳಲಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆ ವೇಳೆ ಪಂಚಮಸಾಲಿ ಸಮುದಾಯ ಯಾವ ಧರ್ಮ ನಮೂದಿಸಬೇಕು ಎಂಬುದನ್ನು ತೀರ್ಮಾನಿಸಲು ಸೆ. 17ರಂದು ಬೆಂಗಳೂರಿನಲ್ಲಿ ಅಂತಿಮ ಸಭೆ ನಡೆಸಿ, ನಿರ್ಧಾರ ಕೈಗೊಳ್ಳಲಾಗುವುದು ಎಂದು ಪಂಚಮಸಾಲಿ ಜಗದ್ಗುರು ವಚನಾನಂದ ಸ್ವಾಮೀಜಿ ಹೇಳಿದರು.
ಈ ಸಭೆಯಲ್ಲಿ ಪಂಚಮಸಾಲಿ ಸಮಾಜದ ಕೂಡಲಸಂಗಮ, ಜಮಖಂಡಿ, ಹರಿಹರ ಪೀಠದ ಜಗದ್ಗುರುಗಳು ಹಾಗೂ 30 ಪಂಚಮಸಾಲಿ ಸಮಾಜದ ಶ್ರೀಗಳ ನೇತೃತ್ವದಲ್ಲಿ ಕಾನೂನು ತಜ್ಞರು, ಶಾಸಕರು, ಮಾಜಿ ಶಾಸಕರು, ಸಂಘಟನೆಯ ಮುಖಂಡರು ಭಾಗವಹಿಸಲಿದ್ದಾರೆ. ಅಲ್ಲಿ ವೀರಶೈವ ಪಂಚಮಸಾಲಿ ಎಂದು ಅಥವಾ ಲಿಂಗಾಯತ ಪಂಚಮಸಾಲಿ ಎಂದು ನಮೂದಿಸುವ ಕುರಿತಂತೆ ನಿರ್ಧಾರ ಕೈಗೊಳ್ಳುತ್ತೇವೆ. ಸಭೆಯ ತೀರ್ಮಾನಕ್ಕೆ ಸಮಾಜ ಬಾಂಧವರು ಬದ್ಧವಾಗಿರಬೇಕು ಎಂದರು.ಕರ್ನಾಟಕ ವೀರಶೈವ ಮಹಾಸಭಾ, ಜಾಗತಿಕ ಲಿಂಗಾಯತ ಮಹಾಸಭಾ ಮತ್ತು ಆ ಸಂಘ-ಸಂಸ್ಥೆಗಳ, ವಿವಿಧ ಮಠಾಧೀಶರ ಹೇಳಿಕೆಗೂ ನಮಗೂ ಯಾವುದೇ ಸಂಬಂಧವಿಲ್ಲ. ಇದು ಪಂಚಮಸಾಲಿ ಸಂಘ, ಪಂಚಮಸಾಲಿ ಪೀಠವಾಗಿದೆ. ಜಾತಿಗಣತಿ ಬಂದಾಗ ಧರ್ಮದ ಬಗ್ಗೆ ವಿಚಾರ ಮಾಡೋಣ. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ ಎಂದರು.
ಸಮೀಕ್ಷೆ ವೇಳೆ ಧರ್ಮ ನಮೂದಿಸುವ ಕುರಿತಂತೆ ಎಲ್ಲೆಡೆ ಗೊಂದಲ ಉಂಟಾಗಿದೆ. ಇದನ್ನು ಬಗೆಹರಿಸುವ ನಿಟ್ಟಿನಲ್ಲಿ ಈಗಾಗಲೇ 14 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಸಮಾಲೋಚನೆ ಸಭೆ ನಡೆಸಲಾಗಿದೆ. ಅಲ್ಲಿ ಸಮಾಜದ ತಜ್ಞರು, ಶಿಕ್ಷಿತರು, ಮುಖಂಡರು, ವಿದ್ಯಾರ್ಥಿಗಳ ಅಭಿಪ್ರಾಯ ಪಡೆಯಲಾಗಿದೆ. ಈಗ ನಡೆಯುತ್ತಿರುವುದು ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ ಹೊರತು ಧರ್ಮದ ಸಮೀಕ್ಷೆ ಅಲ್ಲ ಎಂಬುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದರು.ಕರ್ನಾಟಕ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸೋಮನಗೌಡ ಮಾಲಿಪಾಟೀಲ ಮಾತನಾಡಿ, 19 ಜಿಲ್ಲೆಯಲ್ಲಿ ನಮ್ಮ ಸಂಘಟನೆ ಇದ್ದು, 14 ಜಿಲ್ಲೆಯಲ್ಲಿ ಪ್ರವಾಸ ಮಾಡಿ ಎಲ್ಲರ ಅಭಿಪ್ರಾಯ ಪಡೆಯಲಾಗಿದೆ. ಸೆ.16 ರಂದು ಹರಿಹರದಲ್ಲಿ ಸಭೆ ನಡೆಸಿ, ಅಂತಿಮವಾಗಿ ಸೆ.17ರಂದು ಬೆಂಗಳೂರಿನಲ್ಲಿ ನಿರ್ಣಾಯಕ ಸಭೆ ನಡೆಸಿ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು.
ಸುದ್ದಿಗೋಷ್ಟಿಯಲ್ಲಿ ಡಾ. ಎಂ.ಎಂ. ನುಚ್ಚಿ, ಜಿ.ಜಿ. ದ್ಯಾವನಗೌಡ್ರ ಇದ್ದರು.ಬೇಡ ಜಂಗಮ ಸಮಾವೇಶ: ಸೆ.19 ರಂದು ನಡೆಯುತ್ತಿರುವುದು "ಬೇಡ ಜಂಗಮ ಸಮಾವೇಶ "ಕ್ಕೂ ನಮಗೂ ಸಂಬಂಧವಿಲ್ಲ. ಅವರೆಲ್ಲ ಬೇಡ ಜಂಗಮ ಎಸ್ಸಿ ಸರ್ಟಿಫಿಕೇಟ್ ಕೇಳಿದವರು. ನಮ್ಮ ಸಮಾಜದ ಶೋಷಣೆ ಮಾಡಿದ್ದಾರೆ. ನಮ್ಮ ಸಮಾಜಕ್ಕೆ ಸೌಲಭ್ಯಗಳನ್ನು ಕೊಡಿಸುವಲ್ಲಿ ವಿಫಲರಾಗಿದ್ದಾರೆ. ಪಂಚಮಸಾಲಿಗಳು ಅಲ್ಲಿ ಹೋಗುವ ಅವಶ್ಯಕತೆ ಇಲ್ಲ ಎಂದರು.
ವೀರಶೈವರಲ್ಲಿ ಕೆಲವರು ಎಸ್ಸಿ, 3ಬಿ, 2ಎ ಮೀಸಲಾತಿ ಪಡೆಯುತ್ತಿದ್ದಾರೆ. ಇದಕ್ಕೆ ಬೆಂಬಲ ನೀಡಿ, ಈಗ ನಾವೆಲ್ಲ ಒಂದು ಎಂದರೆ ಹೇಗೆ ಒಪ್ಪಬೇಕು? ಮೀಸಲಾತಿ ರದ್ದು ಮಾಡಿ, ವೀರಶೈವ ಲಿಂಗಾಯತ ಒಂದು ಎಂದು ಯಾವ ಸ್ವಾಮೀಜಿಯೂ ಹೇಳಿಲ್ಲ ಎಂದು ವಚನಾನಂದ ಶ್ರೀ ಅಸಮಾಧಾನ ವ್ಯಕ್ತಪಡಿಸಿದರು.ಸಮಾಜ ಒಡೆಯುವುದು ಬೇಡ: ಸಂಸ್ಕೃತಿ ಯಾತ್ರೆ ಕುರಿತಂತೆ ಮಾತನಾಡಿ, ಅಣ್ಣ ಬಸವಣ್ಣ ಎಲ್ಲರಿಗೂ ಬೇಕು. ಹೀಗಾಗಿ, ಯಾತ್ರೆ ಸ್ವಾಗತಿಸಿದ್ದೇವೆ. ಬಸವಣ್ಣವರ ವಿಚಾರ, ತತ್ವ, ಸಿದ್ಧಾಂತ ಹೇಳಿ ಸಮಾಜ ಒಡೆಯುವ ಹೇಳಿಕೆ ನೀಡಬೇಡಿ ಎಂದು ಬಸವ ಸಂಸ್ಕೃತಿ ಯಾತ್ರೆಯಲ್ಲಿ ಭಾಗವಹಿಸುವ ಮಠಾಧೀಶರಲ್ಲಿ ಮನವಿ ಮಾಡಿದ್ದೇವೆ ಎಂದರು.