ಸಾರಾಂಶ
ಕ್ಷೇತ್ರದ ಜನತೆ ಈಗಿನ ಸಂಸದರಿಂದ ಹಲವು ಸಂಕಷ್ಟ ಅನುಭವಿಸಿದ್ದಾರೆ. ನಾಡಿನ, ಜಿಲ್ಲೆಯ ಜನರ ಹಿತದೃಷ್ಟಿಯಿಂದ ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ.
ಹುಬ್ಬಳ್ಳಿ:
ಲೋಕಸಭಾ ಚುನಾವಣೆಯಲ್ಲಿ ರೈತ ಸಂಘಟನೆ ಬಿಜೆಪಿ-ಕಾಂಗ್ರೆಸ್ ಹೊರತುಪಡಿಸಿ ಮೂರನೇ ವ್ಯಕ್ತಿಗೆ ಮತ ನೀಡಲು ನಿರ್ಧರಿಸಿದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ವಾಸುದೇವ ಮೇಟಿ ಹೇಳಿದರು.ಅವರು ಸೋಮವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಹಮ್ಮಿಕೊಂಡಿದ್ದ ರೈತ ಸಂಘದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಕಳೆದ 10 ವರ್ಷಗಳಿಂದ ಬಿಜೆಪಿ, ಕಾಂಗ್ರೆಸ್ ಪಕ್ಷಗಳು ರೈತರ ಸಂಕಷ್ಟಗಳಿಗೆ ಸ್ಪಂದಿಸದೇ ಇರುವ ಹಿನ್ನೆಲೆಯಲ್ಲಿ ಈ ಬಾರಿ ಕ್ಷೇತ್ರದಲ್ಲಿ ಮೂರನೇ ವ್ಯಕ್ತಿಯಾಗಿರುವ, ಪಕ್ಷೇತರರಾಗಿ ಸ್ಪರ್ಧಿಸುತ್ತಿರುವ ಫಕೀರ ದಿಂಗಾಲೇಶ್ವರ ಶ್ರೀಗಳಿಗೆ ಬೆಂಬಲಿಸಲು ರೈತ ಸಂಘ ನಿರ್ಧರಿಸಿದೆ. ಮುಂದಿನ ದಿನಗಳಲ್ಲಿ ರೈತರೆಲ್ಲರೂ ಸೇರಿ ಮನೆ-ಮನೆಗೆ ತೆರಳಿ ಶ್ರೀಗಳ ಪರವಾಗಿ ಪ್ರಚಾರ ನಡೆಸಿ ಗೆಲ್ಲಿಸಲು ಶ್ರಮಿಸುವುದಾಗಿ ತಿಳಿಸಿದರು.ಈ ವೇಳೆ ಪಕ್ಷೇತರದ ಅಭ್ಯರ್ಥಿ ಫಕೀರ ದಿಂಗಾಲೇಶ್ವರ ಶ್ರೀ ಮಾತನಾಡಿ, ಕ್ಷೇತ್ರದ ಜನತೆ ಈಗಿನ ಸಂಸದರಿಂದ ಹಲವು ಸಂಕಷ್ಟ ಅನುಭವಿಸಿದ್ದಾರೆ. ನಾಡಿನ, ಜಿಲ್ಲೆಯ ಜನರ ಹಿತದೃಷ್ಟಿಯಿಂದ ನಾನು ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಈ ಚುನಾವಣೆ ನನ್ನ ಪಾಲಿಗೆ ಧರ್ಮಯುದ್ಧವಾಗಿದ್ದರೆ, ನಿಮ್ಮ ಪಾಲಿಗೆ ಸ್ವಾಭಿಮಾನದ ಯುದ್ಧವಾಗಲಿದೆ. ಕ್ಷೇತ್ರದ ಮತದಾರರು ತಮ್ಮ ಮತವನ್ನು ಹಣ, ಆಮೀಷಗಳಿಗೆ ಮಾರಿಕೊಳ್ಳದೇ ಮತದಾನ ಮಾಡಿ. ಏ. 18ರಂದು ನಾಮಪತ್ರ ಸಲ್ಲಿಸುತ್ತಿದ್ದು, ಅಂದು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿದರು.
ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಕುನ್ನೂರ, ಜಿಲ್ಲಾ ಉಪಾಧ್ಯಕ್ಷ ವೈ.ಎನ್. ಪಾಟೀಲ, ಸುರಭಿ, ಶಂಕ್ರಮ್ಮ ಸುತಾರ, ಶಿವಯೋಗಿ ಬ್ಯಾಡಗಿ, ಹುಲಿಗೆಮ್ಮ ನಾಯಕ, ರತ್ನಮ್ಮ, ಬಸವರಾಜ ರೊಟ್ಟಿ ಸೇರಿದಂತೆ ಹಲವರಿದ್ದರು.