ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆಯಿಂದ ಬಿಜೆಪಿ-ಕಾಂಗ್ರೆಸ್‌ ಮೇಲೆ ಪರಿಣಾಮ

| Published : Apr 02 2024, 01:00 AM IST

ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆಯಿಂದ ಬಿಜೆಪಿ-ಕಾಂಗ್ರೆಸ್‌ ಮೇಲೆ ಪರಿಣಾಮ
Share this Article
  • FB
  • TW
  • Linkdin
  • Email

ಸಾರಾಂಶ

ಧಾರವಾಡ ಲೋಕಸಭಾ ಕ್ಷೇತ್ರದಿಂದ ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಒಂದು ವೇಳೆ ಚುನಾವಣೆಗೆ ಸ್ಪರ್ಧಿಸಿದರೆ ಖಂಡಿತವಾಗಿಯೂ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳ ಮೇಲೆ ತೀವ್ರ ಪರಿಣಾಮ ಬೀರಲಿದೆ.

ಧಾರವಾಡ:

ಧಾರವಾಡ ಲೋಕಸಭಾ ಕ್ಷೇತ್ರದಿಂದ ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಒಂದು ವೇಳೆ ಚುನಾವಣೆಗೆ ಸ್ಪರ್ಧಿಸಿದರೆ ಖಂಡಿತವಾಗಿಯೂ ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷಗಳ ಮೇಲೆ ತೀವ್ರ ಪರಿಣಾಮ ಬೀರಲಿದೆ ಎಂದು ಸಚಿವ ಸಂತೋಷ ಲಾಡ್‌ ಹೇಳಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏ. 2ರಂದು ಅವರು ತಮ್ಮ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಅವರ ಸ್ಪರ್ಧೆ ಬರೀ ಬಿಜೆಪಿಗೆ ಮಾತ್ರ ಪರಿಣಾಮ ಆಗಲಿದೆ ಎಂದೇನಿಲ್ಲ. ಅವರ ಅಭಿಮಾನಿಗಳು ಎರಡೂ ಪಕ್ಷಗಳಲ್ಲಿ ಇದ್ದಾರೆ ಎಂದರು.

ಸ್ವಾಮೀಜಿ ತಮಗೆ ಬಹಳ ವರ್ಷಗಳಿಂದ ಪರಿಚಯ ಎಂದ ಸಚಿವರು, ನಾನು ಕೂಡ ಅವರ ದೊಡ್ಡ ಅಭಿಮಾನಿ. ಅವರ ಮಾತುಗಳಲ್ಲಿ ಗಂಭೀರತೆ ಇದೆ. ಚುನಾವಣೆ ವಿಷಯ ಮಾತ್ರವಲ್ಲದೇ, ಅವರೊಂದಿಗೆ ಸಾವಿರಾರು ಜನರು ಇದ್ದಾರೆ. ಅವರ ಸೈದ್ಧಾಂತಿಕ ಭಾಷಣ ಮತ್ತು ಸಮಾಜಕ್ಕೆ ಸಂದೇಶ ಕೊಡುತ್ತಾರೆ. ಅವರನ್ನು ಅವರ ಹೇಳಿಕೆಯನ್ನು ಕಡೆಗಣಿಸಲು ಸಾಧ್ಯವಿಲ್ಲ. ಅವರದ್ದೇ ಯಾದ ಅಭಿಮಾನಿ ಬಳಗವಿದೆ. ಅವರು ಇಷ್ಟು ಬಹಿರಂಗವಾಗಿ ಬಂದು ಹೇಳಿಕೆ ನೀಡಿದ್ದು, ಅವರ ನೋವನ್ನು ಅವರು ತೋಡಿಕೊಂಡಿದ್ದಾರೆ. ಏ. 2ರಂದು ಏನು ನಿರ್ಣಯ ತೆಗೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡೋಣ. ಅವರು ಒಂದು ಸಮುದಾಯಕ್ಕೆ ಸೇರಿದವರಲ್ಲ. ಅವರ ಮಠವೇ ಜ್ಯಾತ್ಯತೀತ ಮಠ. ಹೀಗಾಗಿ ಅವರನ್ನು ಹಿಂದೂ, ಮುಸ್ಲಿಂ, ಸಿಖ್ ಎಲ್ಲರೂ ಅನುಸರಿಸುತ್ತಾರೆ. ಅವರಿಗೆ ಬಹು ದೊಡ್ಡ ಬೆಂಬಲಿಗರ ಪಡೆ ಇದೆ. ಖಂಡಿತವಾಗಿಯೂ ಅವರು ಯಾವುದೇ ರೀತಿ ಆಶೀರ್ವಾದ ಮಾಡಿದರೂ ನಮಗೆ ಅನುಕೂಲ ಇದೆ. ಆದರೆ, ಅವರು ಸ್ಪರ್ಧೆ ಮಾಡುತ್ತಾರೆಯೋ ಅಥವಾ ಇಲ್ಲವೋ ಈ ಬಗ್ಗೆ ತಮಗೇನೂ ಗೊತ್ತಿಲ್ಲ ಎಂದರು.

ಧಾರವಾಡದಲ್ಲಿ ಕೈ ಬಾವುಟ:

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವ ಲಾಡ್‌, ಪ್ರಸ್ತುತ ದೇಶಾದ್ಯಂತ ಪ್ರಧಾನಿ ನರೇಂದ್ರ ಮೋದಿ ವಿರೋಧಿ ಅಲೆ ಆರಂಭವಾಗಿದೆ. ಈ ಬಾರಿ ಮೋದಿ ಅವರಿಂದ ಯಾವುದೇ ಅನುಕೂಲ ಆಗುವ ಮಾತಿಲ್ಲ. ಕಾಂಗ್ರೆಸ್ಸಿನ ಐದು ಗ್ಯಾರಂಟಿಗಳು ಪ್ರತಿ ಮನೆ-ಮನೆ ಮುಟ್ಟಿವೆ. ಜನರು ಸಹ ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿಗರು ಸುಳ್ಳು ಹೇಳಲು ಪ್ರಯತ್ನ ಮಾಡುತ್ತಿರುವುದು ಹೊಸದೇನಲ್ಲ. ಈ ಬಾರಿ ಜನರು ಕಾಂಗ್ರೆಸ್ ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ. ಈ ಬಾರಿ ನಾನು ಧಾರವಾಡದ ಜವಾಬ್ದಾರಿ ತೆಗೆದುಕೊಂಡಿದ್ದೇನೆ. ಎಲ್ಲ ಸಮಾಜದ ಮುಖಂಡರು, ಕಾರ್ಯಕರ್ತರನ್ನು ಪರಿಗಣನೆಗೆ ತೆಗೆದುಕೊಂಡು ಹೊರಟಿದ್ದೇನೆ. ಇದೇ ನಮ್ಮ ಪಕ್ಷದ ಸಿದ್ಧಾಂತ. ಧಾರವಾಡದಲ್ಲಿ ಈ ಬಾರಿ ಕಾಂಗ್ರೆಸ್ ಬಾವುಟ ಹಾರಲಿದೆ ಎಂದರು.ಏ. 18ಕ್ಕೆ ಅಸೂಟಿ ನಾಮಪತ್ರ ಸಲ್ಲಿಕೆ...

ಸಾಮಾನ್ಯವಾಗಿ ಚುನಾವಣೆ ಪ್ರಕ್ರಿಯೆಗಳು ಶುರುವಾಗ ತೊಡಗಿದಾಗ ರಾಷ್ಟ್ರೀಯ ನಾಯಕರು ಪ್ರಚಾರಕ್ಕೆ ಬರುತ್ತಾರೆ. ರಾಜ್ಯಕ್ಕೂ, ಜಿಲ್ಲೆಗೂ ರಾಷ್ಟ್ರೀಯ ನಾಯಕರು ಪ್ರಚಾರಕ್ಕಾಗಿ ಬರಲಿದ್ದಾರೆ. ಆದರೆ, ದಿನಾಂಕ ಇನ್ನೂ ನಿಗದಿಯಾಗಿಲ್ಲ. ಧಾರವಾಡ ಕ್ಷೇತ್ರದ ಕೈ ಅಭ್ಯರ್ಥಿ ವಿನೋದ ಅಸೂಟಿ ಏ. 18ರಂದು ನಾಮಪತ್ರ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಸಚಿವ ಸಂತೋಷ ಲಾಡ್‌ ತಿಳಿಸಿದರು.