ಸಾರಾಂಶ
ಆ.2, 3 ರಂದು ಪ್ರಶಸ್ತಿ ಪ್ರದಾನ ಸಮಾರಂಭ
ಕನ್ನಡಪ್ರಭ ವಾರ್ತೆ ಬಳ್ಳಾರಿವಿಶ್ವವಿಖ್ಯಾತ ರಂಗಭೂಮಿ ಕಲಾವಿದ ಬಳ್ಳಾರಿ ರಾಘವರ ಹೆಸರಿನಲ್ಲಿ ರಾಘವ ಮೆಮೋರಿಯಲ್ ಅಸೋಸಿಯೇಷನ್ ಪ್ರತಿವರ್ಷ ಪ್ರದಾನ ಮಾಡುವ ರಾಜ್ಯಮಟ್ಟದ "ಬಳ್ಳಾರಿ ರಾಘವ " ಪ್ರಶಸ್ತಿಗೆ ಈ ಬಾರಿ ಕನ್ನಡದ ಹಿರಿಯ ರಂಗಭೂಮಿ ಕಲಾವಿದ ಹಾಗೂ ಹಾಸ್ಯನಟ ಡಿಂಗ್ರಿ ನಾಗರಾಜ್, ಆಂಧ್ರಪ್ರದೇಶದ ಮೇಡೂರು ಗ್ರಾಮದ ಹಿರಿಯ ರಂಗಭೂಮಿ ಕಲಾವಿದ ಗುಮ್ಮಡಿ ಗೋಪಾಲಕೃಷ್ಣ ಅವರನ್ನು ಆಯ್ಕೆ ಮಾಡಲಾಗಿದೆ.
ಆ.2, 3ರಂದು ನಗರದ ರಾಘವ ಕಲಾ ಮಂದಿರದಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಈ ಪ್ರಶಸ್ತಿ ₹21,100 ನಗದು ಹಾಗೂ ರಾಘವರ ಬೆಳ್ಳಿ ಫಲಕ ಹೊಂದಿದೆ.ಬಳ್ಳಾರಿ ರಾಘವರ 145ನೇ ಜಯಂತಿ ಅಂಗವಾಗಿ 2 ದಿನಗಳ ಕಾಲ ಪ್ರಶಸ್ತಿ ಪ್ರದಾನ ಹಾಗೂ ನಾಟಕೋತ್ಸವ ನಡೆಯಲಿದೆ. ಆ.2ರಂದು ಸಂಜೆ 6 ಗಂಟೆಗೆ ಮೊದಲ ದಿನ ಡಿಂಗ್ರಿ ನಾಗರಾಜ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮೊದಲ ದಿನದ ಸಮಾರಂಭವನ್ನು ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ ಕುಲಸಚಿವ ಸಿ.ನಾಗರಾಜ್ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಜಾನಪದ ಅಕಾಡೆಮಿಯ ಮಾಜಿ ಅಧ್ಯಕ್ಷ ಹಾಗೂ ಹಿರಿಯ ಜಾನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ ಪಾಲ್ಗೊಳ್ಳುವರು. ರಾಘವ ಮೆಮೋರಿಯಲ್ ಅಸೋಸಿಯೇಷನ್‌ನ ಗೌರವಾಧ್ಯಕ್ಷ ಕೆ.ಚನ್ನಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ. ಸಮಾರಂಭದ ಬಳಿಕ ಧಾರವಾಡದ ಕಲಾ ಸಂಗಮ ಸಂಸ್ಥೆಯಿಂದ ಸಮರಸಿಂಹ ಸಂಗೊಳ್ಳಿ ರಾಯಣ್ಣ ಐತಿಹಾಸಿಕ ನಾಟಕ ಪ್ರದರ್ಶನಗೊಳ್ಳಲಿದೆ.
ಆ.3ರಂದು ಆಂಧ್ರಪ್ರದೇಶದ ಹಿರಿಯ ರಂಗಭೂಮಿ ಕಲಾವಿದ ಗುಮ್ಮಡಿ ಗೋಪಾಲಕೃಷ್ಣ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಮುಖ್ಯ ಅತಿಥಿಯಾಗಿ ಹೈದ್ರಾಬಾದ್ ಸುರವರಂ ಪ್ರತಾಪರೆಡ್ಡಿ, ತೆಲುಗು ವಿಶ್ವವಿದ್ಯಾಲಯದ ಉಪ ಕುಲಪತಿ ಆಚಾರ್ಯ ವೆಲಿದಂಡ ನಿತ್ಯಾನಂದ ರಾವ್ ಭಾಗವಹಿಸುವರು. ರಾಘವ ಮೆಮೋರಿಯಲ್ ಅಸೋಸಿಯೇಷನ್ ಅಧ್ಯಕ್ಷ ಕೆ.ಕೋಟೇಶ್ವರರಾವ್ ಅಧ್ಯಕ್ಷತೆ ವಹಿಸುವರು. ಅಂದು ಆಂಧ್ರಪ್ರದೇಶ ವಿಜಯವಾಡದ ಡಾ. ರಾಮನ್ ಫೌಂಡೇಶ್‌ನರವರ ಶ್ರೀಸಾಯಿಬಾಬಾ ನಾಟ್ಯ ಮಂಡಳಿಯಿಂದ ಜಯಹೋ ಛತ್ರಪತಿ ಶಿವಾಜಿ ಮಹಾರಾಜ್ ತೆಲುಗು ಐತಿಹಾಸಿಕ ನಾಟಕ ಪ್ರದರ್ಶನಗೊಳ್ಳಲಿದೆ ಎಂದು ರಾಘವ ಮೆಮೋರಿಯಲ್ ಅಸೋಸಿಯೇಷನ್ ಪ್ರಕಟಣೆ ತಿಳಿಸಿದೆ.ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ರಂಗಭೂಮಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಹಿರಿಯ ರಂಗಭೂಮಿ ಕಲಾವಿದರಿಗೆ ನಾಟ್ಯಕಲಾ ಪ್ರಪೂರ್ಣ ಬಳ್ಳಾರಿ ರಾಘವರ ಹೆಸರಿನಲ್ಲಿ ಕಳೆದ 17 ವರ್ಷಗಳಿಂದ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ.