ಆತ್ಮದ ಜ್ಞಾನ ಹೆಚ್ಚಿಸಲು ಕಾರ್ತಿಕ ಮಾಸದಲ್ಲಿ ದೀಪಾರಾಧನೆ-ಹೊಸಮಠ ಸ್ವಾಮೀಜಿ

| Published : Dec 06 2024, 08:57 AM IST

ಆತ್ಮದ ಜ್ಞಾನ ಹೆಚ್ಚಿಸಲು ಕಾರ್ತಿಕ ಮಾಸದಲ್ಲಿ ದೀಪಾರಾಧನೆ-ಹೊಸಮಠ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಭೌತಿಕ ಜ್ಯೋತಿ ಎಣ್ಣೆ ಬತ್ತಿ ಇರುವವರಿಗೆ ಮಾತ್ರ ಬೆಳಕು ನೀಡುತ್ತದೆ, ಬೌದ್ಧಿಕ ಜ್ಞಾನ ಜ್ಯೋತಿಯಿಂದ ಜಗತ್ತನ್ನು ಬೆಳಗಿಸುವ ಮಹಾನ್ ವ್ಯಕ್ತಿಗಳಾಗುತ್ತಾರೆ ಎಂದು ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಹೇಳಿದರು.

ಹಾವೇರಿ: ಭೌತಿಕ ಜ್ಯೋತಿ ಎಣ್ಣೆ ಬತ್ತಿ ಇರುವವರಿಗೆ ಮಾತ್ರ ಬೆಳಕು ನೀಡುತ್ತದೆ, ಬೌದ್ಧಿಕ ಜ್ಞಾನ ಜ್ಯೋತಿಯಿಂದ ಜಗತ್ತನ್ನು ಬೆಳಗಿಸುವ ಮಹಾನ್ ವ್ಯಕ್ತಿಗಳಾಗುತ್ತಾರೆ ಎಂದು ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ ಹೇಳಿದರು.

ನಗರದ ಬಸವಕೇಂದ್ರ ಶ್ರೀ ಹೊಸಮಠದಲ್ಲಿ ಆಯೋಜಿಸಿದ್ದ ಶರಣ ಸಂಗಮ ಮತ್ತು ಜ್ಞಾನ ದೀಪೋತ್ಸವ ಹಾಗೂ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಕತ್ತಲಲ್ಲಿ ಆಕಾಶ ದೀಪವಾಗಿ ಬಂದವರು ಬಸವಣ್ಣನವರು. ಆತ್ಮದ ಜ್ಞಾನವನ್ನು ಹೆಚ್ಚಿಸಲು ಕಾರ್ತಿಕ ಮಾಸದಲ್ಲಿ ದೀಪಾರಾಧನೆ ಕೈಗೊಳ್ಳಲಾಗುತ್ತದೆ. ಭಕ್ತಿಯು ಚಿಂತನೆ ಮತ್ತು ಆಂತರಿಕ ಸಾಕ್ಷಾತ್ಕಾರದ ಹಾದಿಯನ್ನು ಹೊಂದಿದೆ. ದೀಪ ಹಚ್ಚುವಾಗ ನಮ್ಮ ಮನಸ್ಸುನ್ನು ಶುದ್ಧೀಕರಿಸುತ್ತೇವೆ, ಅಂದರೆ ಕತ್ತಲೆಯನ್ನು ಸಂಕೇತಿಸುವ ಅಜ್ಞಾನ, ಕೋಪ, ಮದ, ಮತ್ಸರ, ಅಹಂಕಾರ, ಲೋಭ, ಅಸೂಯೆ, ದ್ವೇಷವನ್ನು ದೇಹದಿಂದ ಹೊರದಬ್ಬುತ್ತೇವೆ ಹಾಗೂ ಜ್ಞಾನದ ದೀವಿಗೆ ಬೆಳಗುತ್ತೇವೆ. ನಮ್ಮ ಸಂಸ್ಕೃತಿ, ಪರಂಪರೆಗಳನ್ನು ಉಳಿಸಿಕೊಳ್ಳಬೇಕು. ಕುಟುಂಬ ಮತ್ತು ಮನುಷ್ಯನ ನಡುವೆ ಇರುವ ಭಾವನಾತ್ಮಕ ಸಂಬಂಧಗಳನ್ನು ಬೆಸೆಯಬೇಕು. ಸಾಮಾಜಿಕ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು ಎಂದರು.

ಜಾನಪದ ಸಾಹಿತಿ ಡಾ. ನಾಗರಾಜ ಮಾತನಾಡಿ, ನಮ್ಮ ಜಾನಪದದಲ್ಲಿ ತಾಯಿಗೆ ಮಹತ್ವದ ಸ್ಥಾನ ಇದೆ. ತಾಯಿ ಮನೆಯನ್ನು ಕಟ್ಟಿದ್ದಾಳೆ, ಸಮಾಜವನ್ನು ಕಟ್ಟಿದ್ದಾಳೆ. ಹೊಸಮಠವು ಅನುಭವ ಮಂಟಪದಂತೆ ಕಾರ್ಯನಿರ್ವಹಿಸುತ್ತಿದೆ ಎಂದರು.

ವಿಕಲಚೇತನರ ಸಂಘದ ರಾಜ್ಯಾಧ್ಯಕ್ಷ ಮಹದೇವ ಹಡಪದ, ವಿಶೇಷ ಚೇತನರಾದ ಧರ್ಮಣ್ಣ ರಾಮಾಪುರ, ರಾಷ್ಟ್ರೀಯ ಕ್ರೀಡಾಪಟು ಮಹಬೂಬಿ ಸೌದಗಾರ ಅವರನ್ನು ಮಠದಿಂದ ಗೌರವಿಸಲಾಯಿತು. ರಾಘವೇಂದ್ರ ಬಾಸೂರ, ರಾಜೇಂದ್ರ ಸಜ್ಜನರ ಉಪಸ್ಥಿತರಿದ್ದರು.

ಅಕ್ಕನ ಬಳಗ ಮಹಿಳೆಯರು ಪ್ರಾರ್ಥಿಸಿದರು. ನಾಗರಾಜ ಹುಡೇದ ಕಾರ್ಯಕ್ರಮ ನಿರೂಪಿಸಿದರು. ಜುಬೇದ ನಾಯ್ಕ್ ವಂದಿಸಿದರು.