ಸಾರಾಂಶ
ದಾವಣಗೆರೆ-ಹರಿಹರದಲ್ಲಿ ನಿವೇಶನಕ್ಕೆ 26 ಸಾವಿರ ಅರ್ಜಿ । ವಡ್ಡಿನಹಳ್ಳಿ 178 ಎಕರೆ ಬಗ್ಗೆ ಚರ್ಚೆ
ಕನ್ನಡಪ್ರಭ ವಾರ್ತೆ ದಾವಣಗೆರೆದಾವಣಗೆರೆ-ಹರಿಹರ ನಗರಗಳಲ್ಲಿ ದೂಡಾದಿಂದ ಒಟ್ಟು 47 ಕೋಟಿ ರು. ವೆಚ್ಚದ ಅಭಿವೃದ್ಧಿ ಕಾಮಗಾರಿ ಜೊತೆಗೆ ಪ್ರಾಧಿಕಾರದ ವ್ಯಾಪ್ತಿಯಲ್ಲಿ ನೇರ ಖರೀದಿ ಮೂಲಕ ಅಥವಾ ಭೂ ಸ್ವಾಧೀನ ಪಡಿಸಿಕೊಂಡಾಗ ನೂತನ ಬಡಾವಣೆಗಳ ನಿರ್ಮಾಣ ಮಾಡುವುದಾಗಿ ದೂಡಾ ಅಧ್ಯಕ್ಷ ದಿನೇಶ ಕೆ.ಶೆಟ್ಟಿ ತಿಳಿಸಿದರು.
ನಗರದ ಪ್ರಾಧಿಕಾರದ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಿವೇಶನ ಕೋರಿ ಸುಮಾರು 26 ಸಾವಿರಕ್ಕೂ ಅದಿಕ ಅರ್ಜಿಗಳು ಸಲ್ಲಿಕೆಯಾಗಿದ್ದು, ಜೆ.ಎಚ್.ಪಟೇಲ್ ಬಡಾವಣೆ ನಂತರ ದೂಡಾದಿಂದ ಯಾವುದೇ ಹೊಸ ಬಡಾವಣೆ ಆಗದ ಹಿನ್ನೆಲೆಯಲ್ಲಿ ರೈತರಿಂದ ಜಮೀನನ್ನು ನೇರ ಖರೀದಿಸುವ ಅಥವಾ ಭೂ ಸ್ವಾಧೀನಪಡಿಸಿಕೊಂಡಾದರೂ ಲೇಔಟ್ ನಿರ್ಮಿಸಲಾಗುವುದು ಎಂದರು.ವಡ್ಡಿನಹಳ್ಳಿ ಸಮೀಪ ಸುಮಾರು 178 ಎಕರೆ ಭೂಮಿ ನೀಡಲು ರೈತರು ಸಿದ್ಧರಿದ್ದು, ಈ ಬಗ್ಗೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಶಾಸಕ ಡಾ.ಶಾಮನೂರು ಶಿವಶಂಕರಪ್ಪ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನರ ನೇತೃತ್ವದಲ್ಲಿ ರೈತರೊಂದಿಗೆ ಸಭೆ ನಡೆಸಿ, ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು. ದೂಡಾದಿಂದ ಶೇ.50-50 ಅನುಪಾತಕ್ಕೂ ನಾವು ಸಿದ್ಧರಿದ್ದೇವೆ. ಕುಂದುವಾಡ ಗ್ರಾಮದ ವ್ಯಾಪ್ತಿಯಲ್ಲಿ 53 ಎಕರೆ ಜಮೀನನ್ನು ನೇರ ಖರೀದಿಸಿ, ವಸತಿ ಬಡಾವಣೆ ನಿರ್ಮಿಸಲು ಸರ್ಕಾರ 1.38 ಕೋಟಿ ರ. ನಿಗದಿಪಡಿಸಿತ್ತು. ರೈತರು ಆಸಕ್ತಿ ತೋರದ್ದರಿಂದ ಅದು ಸಾಧ್ಯವಾಗಿರಲಿಲ್ಲ. ಈಗ ಯೋಜನೆ ಕೈಬಿಡಲು ಸರ್ಕಾರ ಅನುಮತಿ ನೀಡದೇ, ಮುಂದುವರಿಸಲು ನಿರ್ದೇಶನ ನೀಡಿದೆ ಎಂದು ಹೇಳಿದರು.
ಅಖ್ತರ್ ರಜಾ ವೃತ್ತದಿಂದ ಸರ್ ಮಿರ್ಜಾ ಇಸ್ಮಾಯಿಲ್ ನಗರದ ಮೂಲಕ ಮಾಗಾನಹಳ್ಳಿ ರಸ್ತೆವರೆಗೆ ಹಾದು ಹೋದ 120 ಅಡಿ ವರ್ತುಲ ರಸ್ತೆಗೆ 4.95 ಕೋಟಿ ಕಾಮಗಾರಿ ಮುಕ್ತಾಯ ಹಂತದಲ್ಲಿದೆ. ಬೇತೂರು-ಬಸಾಪುರ ವರ್ತುಲ ರಸ್ತೆಗೆ 2.5 ಕೋಟಿ, ಪಾಮೇನಹಳ್ಳಿಯಿಂದ ತೋಳಹುಣಸೆ ರಾಜ್ಯ ಹೆದ್ದಾರಿ-76ಕ್ಕೆ 1 ಕೋಟಿ, ಪಾಲಿಕೆ ವ್ಯಾಪ್ತಿಯ ವಿವಿಧ ವೃತ್ತ ಅಭಿವೃದ್ಧಿಗೆ 50 ಲಕ್ಷ ಕಾಯ್ದಿರಿಸಲಾಗಿದೆ. ದೊಡ್ಡಬಾತಿ ಕೆರೆ ಅಭಿವೃದ್ಧಿಗೆ 10 ಕೋಟಿ ರು., ವಡ್ಡಿನಹಳ್ಳಿ ಕೆರೆಗೆ 2 ಕೋಟಿ, ಹೊನ್ನೂರು ಕೆರೆಗೆ 2.30 ಕೋಟಿ, ನಾಗನೂರು ಕೆರೆಗೆ 2.30 ಕೋಟಿ, ಶಿವ ಪಾರ್ವತಿ ಬಡಾವಣೆ ಪಾರ್ಕ್ ಗೆ 1.50 ಕೋಟಿ, ಆವರಗೆರೆ ಪಾರ್ಕ್‌ಗೆ 1 ಕೋಟಿ, ದಾವಣಗೆರೆ ವಿವಿಧೆಡೆ ಪಾರ್ಕ್ ಅಭಿವೃದ್ಧಿಗೆ 4 ಕೋಟಿ ರು., ಚರಂಡಿ, ಕಮಾನು, ಬೀದಿ ದೀಪ ಕಾಮಗಾರಿಗೆ 2.75 ಲಕ್ಷ, ಜೆ.ಎಚ್.ಪಟೇಲ್ ವಸತಿ ಸಮುಚ್ಛಯಕ್ಕೆ 4 ಕೋಟಿ, ಬೀರೂರು-ಸಮ್ಮಸಗಿ ರಸ್ತೆ ವಿಭಜಕದಲ್ಲಿ ಅಲಂಕಾರಿಕ ಕೋನಿಕಲ್ ದೀಪ ಅಳವಡಿಸಲು 3.69 ಕೋಟಿ ರು. ಕಾಯ್ದಿಟ್ಟಿದ್ದೇವೆ ಎಂದು ತಿಳಿಸಿದರು.ದೂಡಾ ಆಯುಕ್ತ ಹುಲ್ಮನಿ ತಿಮ್ಮಪ್ಪ, ಸದಸ್ಯರಾದ ವಾಣಿ ಬಕ್ಕೇಶ ನ್ಯಾಮತಿ, ತಕ್ಕಡಿ ಮಂಜುನಾಥ, ಆಯುಕ್ತ ಹುಲ್ಮನಿ ತಿಮ್ಮಣ್ಣ, ಕಾಂಗ್ರೆಸ್ ಮುಖಂಡ ನ್ಯಾಮತಿ ಎನ್.ಬಕ್ಕೇಶ, ಅಧಿಕಾರಿ, ಸಿಬ್ಬಂದಿ ಇದ್ದರು.